ಪ್ರಧಾನಿ ಮೋದಿಗೆ ನೀಡಿದ ಬೆಳ್ಳಿ ಗಣೇಶ ವಿಗ್ರಹ ಉಡುಗೊರೆ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಶಾಸಕರಿಂದ ಪಡೆದ ಉಡುಗೊರೆಯಲ್ಲ, ಸ್ವಂತ ಹಣದಿಂದ ಖರೀದಿಸಿದ್ದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗ, ಬೆಳ್ಳಿ ಗಣಪತಿ ವಿಗ್ರಹ ನೀಡಿ ಡಿಕೆ ಶಿವಕುಮಾರ್ ಸ್ವಾಗತಿಸಿದ್ದರು. ಈ ಬೆಳ್ಳಿ ಗಣಪ ವಿಗ್ರಹವನ್ನು ಬಿಜೆಪಿ ಶಾಸಕ ಎಂ ಕೃಷ್ಣಪ್ಪ ತಂದಿದ್ದರು ಎಂದು ವರದಿಯಾಗಿತಯ್ತು. ಈ ವರದಿಗೆ ಉಪಮುಖ್ಯಮಂತ್ರಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ ಎಂದು ಬರೆದುಕೊಂಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಎಕ್ಸ್ ಪೋಸ್ಟ್
ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ. ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು.
ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್‌ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.
ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿಗಳು ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದರು. ನಂತರ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಆನಂತರ ನಮ್ಮ ಮೆಟ್ರೋ ರೈಲಿನ ಪ್ರಯಾಣಿಸಿದ ಪ್ರಧಾನಿಗಳು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ್ದರು. ಪ್ರಧಾನಿ ಮೋದಿ ಅವರ ಜೊತೆಯಲ್ಲಿಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಖಟ್ಟರ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಗಣ್ಯರು ಪ್ರಯಾಣಿಸಿದ್ದರು. ಆನಂತರ ಮೂರನೇ ಹಂತದ ಮೆಟ್ರೋಗೆ ಶಂಕು ಸ್ಥಾಪನೆ ಮಾಡಲಾಯ್ತು. ಈ ವೇಳೆ ಪ್ರಧಾನಿಗಳಿಗೆ ಬೆಳ್ಳಿ ಗಣೇಶ ವಿಗ್ರಹ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದಿಸಿದ್ದರು..
