ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜನ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಮಾತ್ರ ಓಲೈಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಶಿವಮೊಗ್ಗ (ಸೆ.15): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜನ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಮಾತ್ರ ಓಲೈಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಜೆಟ್‌ನಲ್ಲಿ ಒಂದಲ್ಲ ಒಂದು ಯೋಜನೆ ಮತ್ತು ಹಣವನ್ನು ಅಲ್ಪಸಂಖ್ಯಾತರಿಗೆ ಘೋಷಣೆ ಮಾಡುತ್ತಾರೆ. ಅಲ್ಪಸಂಖ್ಯಾತರಿಗಾಗಿ ಯೋಜನೆಗಳು ಮತ್ತು ಪರಿಹಾರ ಇರುತ್ತದೆ. ಕೇರಳದಲ್ಲಿ ಆನೆ ತುಳಿತದವರಿಗೆ ಪರಿಹಾರ ಇರುತ್ತದೆ.
ಕೇರಳದ ವೈನಾಡಿನಲ್ಲಿ ಪ್ರಿಯಾಂಕ ಗಾಂಧಿ ಕ್ಷೇತ್ರಕ್ಕೆ ₹10 ಕೋಟಿ ಕೊಡುತ್ತಾರೆ. ಹಾಸನದ ಮೊಸಳೆ ಹೊಸಹಳ್ಳಿಯ ಗಣಪತಿ ಮೆರವಣಿಗೆಯಲ್ಲಿ ಸಾಯುವವರಿಗೆ ಗಾಯ ಗೊಳ್ಳುವರಿಗೆ ಹಣ ಕೊಡಲು ಇವರ ಬಳಿ ಇರಲ್ಲ ಎಂದು ಕುಟುಕಿದರು. ಆರ್‌ಸಿಬಿಯವರು ಕಪ್ ಗೆದ್ದರೆ ಅದರಿಂದ ಪ್ರಚಾರ ಪಡೆದುಕೊಳ್ಳಲು ವಿಧಾನಸೌಧ ಮೆಟ್ಟಿಲ ಮೇಲೆ ಸಿಎಂ, ಡಿಸಿಎಂ ಪೈಪೋಟಿ ಮೇಲೆ ಕಾರ್ಯಕ್ರಮ ಮಾಡಿದರು. ಕೊನೆಗೆ ಇವರ ಸಂಭ್ರಮಾಚರಣೆಗೆ 11 ಜನ ಬಲಿಯಾದರು. ಕಳೆದ ವರ್ಷ ನಾಗಮಂಗಲದಲ್ಲಿ ಅರೆಸ್ಟ್ ಮಾಡಿ ನಂತರ ಬಿಡುಗಡೆ ಮಾಡಿದರು.
ಮದ್ದೂರಿನಲ್ಲಿ ನಾವೇನು ಮಾಡಿದರೂ ನಡಿಯುತ್ತದೆ ಎಂದು ಗಲಾಟೆ ಮಾಡಿದ್ದಾರೆ. ಎಲ್ಲಿ ಪೊಲೀಸರು ಅನುಮತಿ ನೀಡುತ್ತಾರೋ ಅಲ್ಲೇ ಮೆರವಣಿಗೆ ನಡೆಯುತ್ತದೆ. ಪೊಲೀಸರಿಗೆ ನಿಮ್ಮ ಗುಪ್ತಚರ ಇಲಾಖೆ ಅವರಿಗೆ ಕಲ್ಲುತೂರಾಟ ನಡೆಸುವುದು ಗೊತ್ತಾಗುವುದಿಲ್ಲವೇ? ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಹಿಂದೂ ವಿರೋಧಿ ಘಟನೆಗಳು ನಡೆಯುತ್ತಿವೆ. ಇದಕ್ಕೆಲ್ಲ ನೇರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೊಣೆ ಎಂದು ಹರಿಹಾಯ್ದರು.
ಹಾಸನ ದುರಂತ ಸ್ಥಳಕ್ಕೆ ಕೃಷ್ಣಬೈರೇಗೌಡ ಭೇಟಿ
ಮೊಸಳೆಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು 10 ಜನ ಮೃತಪಟ್ಟು, ೨೦ ಮಂದಿಗೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಶನಿವಾರ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರು, ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ, ನಂತರ ಮೃತರ ಮನೆಗೆ ಧಾವಿಸಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಹಾಸನದ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಿ ಧೈರ್ಯ ತುಂಬಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೃದಯ ವಿದ್ರಾವಕ ಘಟನೆ. ಅವರ ನೋವಿನಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಲಾರಿ ಚಾಲಕ ಆ ಕ್ಷಣದಲ್ಲಿ ಯಾವ ಸ್ಥಿತಿಯಲ್ಲಿದ್ದನು ಎಂದು ಸ್ವಾಭಾವಿಕವಾಗಿ ಎಲ್ಲರಲ್ಲಿಯೂ ಪ್ರಶ್ನೆ ಉದ್ಭವವಾಗುತ್ತದೆ. ರಾತ್ರಿಯೇ ಅವನ ರಕ್ತದ ಸ್ಯಾಂಪಲ್ ಅನ್ನು ತೆಗೆದುಕೊಂಡು ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಚಾಲಕ ಯಾವುದೇ ರೀತಿಯ ಡ್ರಗ್ಸ್, ಮದ್ಯ ಸೇವನೆ ಮಾಡಿರುವುದು ಕಂಡುಬಂದಿಲ್ಲ. ಜೊತೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರಕ್ತದ ಸ್ಯಾಂಪಲ್ ಕಳುಹಿಸಿದ್ದು, ಪರೀಕ್ಷೆ ಮಾಡಿ ವರದಿ ನೀಡಲು ತಿಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
