ನಾನು ಸಿಎಂ ಆಗಿದ್ದರೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿರಲಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಜನಪರ ನಿಲುವು ಶ್ಲಾಘಿಸಿದ್ದಾಗಿ, ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.
ಉತ್ತರ ಕನ್ನಡ (ಅ.13): ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಶಾಸಕ ಆರ್.ವಿ. ದೇಶಪಾಂಡೆ (ಆರ್‌ವಿಡಿ) ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿದ್ದಾರೆ ಎಂಬ ವರದಿಯನ್ನು ಬಲವಾಗಿ ತಳ್ಳಿಹಾಕಿದ್ದು, ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ದಾಂಡೇಲಿಯಲ್ಲಿ ನಡೆದ ಸಭೆಯಲ್ಲಿ ತಮ್ಮ ಹೇಳಿಕೆಗಳನ್ನು ಪತ್ರಿಕೆ ತಪ್ಪಾಗಿ ಅರ್ಥೈಸಿ, 'ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆ' ಎಂಬ ತಪ್ಪು ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಜನಪರ ನಿಲುವು ಶ್ಲಾಘನೆಯ ಉದ್ದೇಶ:
ಸೋಮವಾರದಂದು (ಅ. 13, 2025) ಖಾಸಗಿ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿದ ಆರ್.ವಿ. ದೇಶಪಾಂಡೆ, 'ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆ-ದೇಶಪಾಂಡೆ' ಎಂಬ ಶೀರ್ಷಿಕೆ ನೋಡಿ ನನಗೆ ಬೇಸರವಾಯಿತು. ಇದನ್ನು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ವಾಸ್ತವದ ವಿರುದ್ಧವಾಗಿ ಪ್ರಕಟಿಸಲಾಗಿದೆ. ದಾಂಡೇಲಿಯಲ್ಲಿ ನಡೆದ ಸಭೆಯಲ್ಲಿ ನಾನು ಮಾತನಾಡಿದ ಸಂದರ್ಭದಲ್ಲಿ, ಗ್ಯಾರಂಟಿ ಯೋಜನೆಗಳ ಕುರಿತು ಹೇಳುವಾಗ, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಶ್ಲಾಘಿಸಿದ್ದೆ ಹೊರತು ಟೀಕಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಮಾತಿನ ತಾತ್ಪರ್ಯ ಇದಾಗಿತ್ತು:
ಸಿದ್ದರಾಮಯ್ಯನವರು ಪಳಗಿದ ನಾಯಕರು, ಜನನಾಯಕರಾಗಿದ್ದಾರೆ, ಬಡವರ ಪರವಾಗಿ ಹೋರಾಡುವ ನಿಜವಾದ ನಾಯಕರು. ಅವರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ, ಒಳ್ಳೆಯ ಆಡಳಿತ ನೀಡುತ್ತಿರುವುದು ಅವರ ಶಕ್ತಿ. ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿರುವುದು ಅವರ ಜನಪರ ಮನೋಭಾವದಿಂದಾಗಿದೆ. ನಾನು ಈ ಮೂಲಕ, ಮುಖ್ಯಮಂತ್ರಿಗಳು ಜನಪರ ನಿಲುವು ಹೊಂದಿರುವ ಹಿರಿಯ ಹಾಗೂ ಅನುಭವ ಸಂಪನ್ನ ನಾಯಕರು ಎಂಬುದನ್ನು ಶ್ಲಾಘಿಸಿದ್ದೆ. ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಆರ್‌ವಿಡಿ ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟದ ಮಾತು ಹೇಳಿಲ್ಲ:
ತಮ್ಮ ಹೇಳಿಕೆಯಿಂದ ತಪ್ಪು ಸಂದೇಶ ಹೋಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, "ನಾನು ಈ ಸಭೆಯಲ್ಲಿ ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನುವ ಮಾತನ್ನು ಎಲ್ಲಿಯೂ ಉಲ್ಲೇಖಿಸಿರುವುದಿಲ್ಲ. ಎಲ್ಲಿಯೂ ಕೂಡಾ ಗ್ಯಾರಂಟಿಯಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಆಗಿದೆ ಎಂದು ಹೇಳಿಲ್ಲ. ಹೀಗಿರುವಾಗ, ತಮ್ಮ ಪತ್ರಿಕೆಯು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುವ ರೀತಿಯಲ್ಲಿ ವರದಿ ಮಾಡಿರುವುದು ವಿಷಾದನೀಯವಾಗಿದೆ" ಎಂದು ಪತ್ರಿಕೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಆದುದರಿಂದ, ತಮ್ಮ ದಿನಪತ್ರಿಕೆಯು ಈ ವಿಷಯದಲ್ಲಿ ಸ್ಪಷ್ಟೀಕರಣ ನೀಡಿ, ಸಿದ್ದರಾಮಯ್ಯನವರ ಜನಪರ ತತ್ವ ಮತ್ತು ನನ್ನ ಮಾತುಗಳ ನಿಜವಾದ ಅರ್ಥವನ್ನು ತಲುಪಿಸುವಂತೆ ಸರಿಯಾದ ವರದಿ ಪ್ರಕಟಿಸಬೇಕೆಂದು ಆರ್‌ವಿಡಿ ಕೋರಿದ್ದಾರೆ.
