ಹಿರಿಯ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಅವರ ಗ್ಯಾರಂಟಿ ಸರ್ಕಾರದ ಅಸಮಾಧಾನವನ್ನು ನಿಖಿಲ್ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಅಭಿವೃದ್ಧಿ ಕುಂಠಿತವಾಗಿದೆ ಎಂದಿರುವ ಅವರು, ತಂದೆಯ ಮೇಲಿನ ಮಾಟದ ಆರೋಪವನ್ನು ತಳ್ಳಿಹಾಕಿ, 'ಕಾಯಕವೇ ಕೈಲಾಸ' ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಹಿರಿಯ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಅವರು ಗ್ಯಾರಂಟಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರ ಬಗ್ಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶಪಾಂಡೆ ಹೇಳಿದ್ರಲ್ಲಿ ತಪ್ಪೇನಿಲ್ಲ. ಸರ್ಕಾರದ ವಾಸ್ತವ ಅಂಶವನ್ನ ಅವರು ತೆರೆದಿಟ್ಟಿದ್ದಾರೆ. ದೊಡ್ಡ ಗಾತ್ರ ಬಜೆಟ್ ಕೊಟ್ಟಿದ್ದೇವೆ ಅಂತ ಹೇಳ್ತಾರೆ. ಅದರಲ್ಲಿ ಗ್ಯಾರಂಟಿಗಳಿಗೆ ಇಟ್ಟಿದ್ದಾರೆ. ಇಲ್ಲಿವರೆಗೂ ಪ್ರತಿ ತಿಂಗಳು ಸಮರ್ಪಕವಾಗಿ ಗ್ಯಾರಂಟಿಗಳನ್ನ ಕೊಟ್ಟಿಲ್ಲ. ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಮೇಲೆ ಮಾಟ ಮಾಡಲಾಗಿದ್ಯಾ?
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮೇಲೆ ಮಾಟ ಮಾಡಿಸಲಾಗಿದೆ ಎಂಬ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ ವಿಚಾರವಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಾನು ಇದ್ಯಾವುದರಲ್ಲೂ ನಂಬಿಕೆ ಇಟ್ಕೊಂಡಿಲ್ಲ. ನಮಗೆ ಗೊತ್ತಿರೋದು ಒಂದೇ ಕಾಯಕವೇ ಕೈಲಾಸ ಅಂತ. ನಾವು ಶಿವನ ಆರಾಧಕರು ಭಕ್ತಿ ಪೂರಕವಾಗಿ ಪೂಜೆ ಮಾಡ್ತೀವಿ. ಅವರು ಹೇಳಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ಕರ್ಮ ಅನ್ನೋದು ಎಲ್ಲರಿಗೂ ಗೊತ್ತು. ನಾವು ಏನ್ ಮಾಡ್ತೀವೋ ಅದು ನಮಗೆ ವಾಪಸ್ ಕೊಡುತ್ತೆ. ನನಗೆ ಈ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಎಲ್ಲಾ ಗೊತ್ತಿಲ್ಲ. ಅದನ್ನ ಗಂಭೀರವಾಗಿ ತೆಗೆದುಕೊಳ್ಳೋದು ಬೇಡ ಎಂದರು.
ಡಿನ್ನರ್ ಮೀಟಿಂಗ್ ಏನ್ ಆಗುತ್ತೆ ಅಂತ ಕಾದು ನೋಡೋಣ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿದ ಅವರು ಕಾದು ನೋಡೋಣ ಏನ್ ಆಗುತ್ತೆ ಅಂತ. ಬಿಹಾರ್ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿ ಆಗಿದೆ. ಏನೇನ್ ತೀರ್ಮಾನ ಆಗುತ್ತೆ ಕಾದು ನೋಡೋಣ ಎಂದಿದ್ದಾರೆ.
