ರಾಜ್ಯದಲ್ಲಿ ಆರ್‌ಎಸ್‌ಎಸ್ ಹಾಗೂ ಸರ್ಕಾರದ ನಡುವೆ ಸೈದ್ಧಾಂತಿಕ ಹೋರಾಟ ನಡೆಯುತ್ತಿದೆ. ಇದೇ ವೇಳೆ ಆರ್‌ಎಸ್‌ಎಸ್‌ಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನು ಹಾಗೂ ಅದರ ಬಳಕೆ ಬಗ್ಗೆ ಆಡಿಟ್ ನಡೆಸಲು ಸರ್ಕಾರದ ವಲಯದಲ್ಲಿ ಚರ್ಚೆ ಶುರುವಾಗಿದೆ.
ಬೆಂಗಳೂರು (ಅ.19): ರಾಜ್ಯದಲ್ಲಿ ಆರ್‌ಎಸ್‌ಎಸ್ ಹಾಗೂ ಸರ್ಕಾರದ ನಡುವೆ ಸೈದ್ಧಾಂತಿಕ ಹೋರಾಟ ನಡೆಯುತ್ತಿದೆ. ಇದೇ ವೇಳೆ ಆರ್‌ಎಸ್‌ಎಸ್‌ಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನು ಹಾಗೂ ಅದರ ಬಳಕೆ ಬಗ್ಗೆ ಆಡಿಟ್ ನಡೆಸಲು ಸರ್ಕಾರದ ವಲಯದಲ್ಲಿ ಚರ್ಚೆ ಶುರುವಾಗಿದೆ. ಈ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಎಂ. ಖರ್ಗೆ ನೇತೃತ್ವದ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ಗೆ ಬೆಂಗಳೂರಿನ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ಸಿಎ ಭೂಮಿ ಮಂಜೂರು ಮಾಡಲಾಗಿತ್ತು. ಇದನ್ನು ಬಿಜೆಪಿ ದೊಡ್ಡ ವಿವಾದ ಮಾಡಿದ್ದರಿಂದ ಜಮೀನನ್ನು ಟ್ರಸ್ಟ್ ವಾಪಸು ನೀಡಿತ್ತು.
ಈ ವೇಳೆ ಆರ್‌ಎಸ್‌ಎಸ್ ಹಾಗೂ ಅದರ ಅಂಗಸಂಸ್ಥೆಗಳು, ಬಿಜೆಪಿ ನಾಯಕರು ಪಡೆದಿರುವ ಜಮೀನುಗಳನ್ನು ಪಟ್ಟಿ ಮಾಡಿ ನಿಯಮಬಾಹಿರ ಮಂಜೂರಾತಿಗಳನ್ನು ಹಿಂಪಡೆಯಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿತ್ತು. ಬಳಿಕ ಅದನ್ನು ಮುಂದಕ್ಕೆ ಕೊಂಡೊಯ್ದಿರಲಿಲ್ಲ. ಈಗ ಆರ್‌ಎಸ್‌ಎಸ್ ಸೇರಿದಂತೆ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಪೂರ್ವಾನುಮತಿ ಕಡ್ಡಾಯ ಎಂದು ಸರ್ಕಾರ ಆದೇಶ ಮಾಡಿದೆ. ಇದರ ವಿರುದ್ಧ ಆರ್‌ಎಸ್‌ಎಸ್ ಹೋರಾಟ ರೂಪಿಸಲು ಮುಂದಾಗಿದೆ. ಅದಕ್ಕೆ ಪಾಠ ಕಲಿಸಬೇಕೆಂದರೆ ಆರ್‌ಎಸ್‌ಎಸ್‌ನ ಭೂಮಿಯ ಆಡಿಟ್ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೆಲವು ಶಾಸಕರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಸೋಮವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹಾಸನದಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಈ ವೇಳೆ ಕಂದಾಯ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಬಹುದು ಎನ್ನಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಈವರೆಗೂ ಅಂತಹ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ. ಒಂದೊಮ್ಮೆ ಬಂದರೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಮಂಜೂರಾಗಿರುವ ಜಮೀನುಗಳು ಯಾವುವು?
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗಸಂಸ್ಥೆಗಳಿಗೆ ನೂರಾರು ಎಕರೆ ಭೂಮಿ ಮಂಜೂರಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಹರಳೂರಿನಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಕ್ಕೆ (ಸೆಸ್) 116 ಎಕರೆ ಹಂಚಿಕೆ ಮಾಡಲಾಗಿದೆ. ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಸರ್ಕಾರೇತರ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಗಳಿಗಾಗಿ 8.32 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿ ಇದೇ ಸಂಸ್ಥೆಗೆ 5 ಎಕರೆ ಮಂಜೂರಾಗಿದೆ. ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಆನೇಕಲ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿಗೆ ಸುಮಾರು 25-30 ಎಕರೆ ಭೂಮಿ ಮಂಜೂರಾಗಿದೆ.
ದಕ್ಷಿಣ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಜನ ಸೇವಾ ಟ್ರಸ್ಟ್ ಹೆಸರಿನ ಸಂಸ್ಥೆಗೆ 40.07 ಎಕರೆ ಜಮೀನು ಮಂಜೂರಾಗಿದೆ. ತಾವರೆಕೆರೆಯಲ್ಲಿ ಜನಸೇವಾ ಟ್ರಸ್ಟ್‌ಗೆ ಮಂಜೂರಾತಿಯಾಗಿದೆ ಎಂದು ಹೇಳಲಾಗಿರುವ 25 ಎಕರೆ ಜಮೀನು ಬಗ್ಗೆ ಪರಿಶೀಲನೆ ನಡೆಯಲಿದೆ ಎನ್ನಲಾಗಿದೆ. ಅದರೊಂದಿಗೆ ಶಿವಮೊಗ್ಗದಲ್ಲಿ ನೀರಾವರಿ ಇಲಾಖೆಗೆ ಸೇರಿದ ಎರಡು ಎಕರೆ ಜಾಗವನ್ನು ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರದ ಹೆಸರಿನಲ್ಲಿ ಸಂಸ್ಥೆಯೊಂದಕ್ಕೆ ಮಂಜೂರು ಮಾಡಲಾಗಿದೆ. ಗೋಶಾಲೆಗಳ ಹೆಸರಿನಲ್ಲಿ ನೂರಾರು ಎಕರೆ ನೀಡಲಾಗಿದೆ. ಹೀಗಾಗಿ ಇದೆಲ್ಲವನ್ನೂ ಆಡಿಟ್ ಮಾಡಬೇಕು ಎಂಬ ಕೂಗು ಸರ್ಕಾರ ಹಾಗೂ ಕಾಂಗ್ರೆಸ್ ವಲಯದಲ್ಲಿ ಎದ್ದಿದೆ.
