ಆರ್‌ಎಸ್‌ಎಸ್ ನಿಷೇಧಿಸಲು ಇಂದಿರಾ ಗಾಂಧಿ ಅವರಿಗೇ ಆಗಲಿಲ್ಲ. ನಿಷೇಧವನ್ನು ಮಲ್ಲಿಕಾರ್ಜುನ ಖರ್ಗೆ ಹೆಸರಿನಲ್ಲಿ ಬದುಕುವ ಪ್ರಿಯಾಂಕ್ ಖರ್ಗೆ ಕೈಯಲ್ಲಿ ಮಾಡಲು ಸಾಧ್ಯವೇ? ಎಂದು ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಬೆಂಗಳೂರು (ಅ.17): ಆರ್‌ಎಸ್‌ಎಸ್ ನಿಷೇಧಿಸಲು ಇಂದಿರಾ ಗಾಂಧಿ ಅವರಿಗೇ ಆಗಲಿಲ್ಲ. ನಿಷೇಧವನ್ನು ಮಲ್ಲಿಕಾರ್ಜುನ ಖರ್ಗೆ ಹೆಸರಿನಲ್ಲಿ ಬದುಕುವ ಪ್ರಿಯಾಂಕ್ ಖರ್ಗೆ ಕೈಯಲ್ಲಿ ಮಾಡಲು ಸಾಧ್ಯವೇ? ಕುರ್ಚಿಗಾಗಿ ನಿತ್ಯ ಜಗಳವಾಡುವ ಸಿದ್ದರಾಮಯ್ಯ ಮಾಡಲು ಸಾಧ್ಯವೇ ಎಂದು ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೆಹರು, ಇಂದಿರಾ ಗಾಂಧಿಯವರಿಗೆ ಹೆದರದ ಆರ್‌ಎಸ್‌ಎಸ್, ಪ್ರಿಯಾಂಕ್ ಖರ್ಗೆಯಂತಹ ಚಮಚಾಗೆ ಹೆದರುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರ ಸರ್ಕಾರವನ್ನು ನಾವು ದೇಶದಲ್ಲಿ ಬಹಳ ನೋಡುತ್ತಿದ್ದೇವೆ.
ಎರಡ್ಮೂರು ರಾಜ್ಯಗಳಲ್ಲಿ ಸರ್ಕಾರ ನಡೆಸಿಕೊಂಡು ನಾವು ಬಿಜೆಪಿ, ಆರ್‌ಎಸ್‌ಎಸ್ ಬೆದರಿಸುತ್ತೇವೆಂದರೆ, ಅದು ಮೂರ್ಖತನ. 1948ರಲ್ಲೇ ಆರ್‌ಎಸ್‌ಎಸ್ ನಿಷೇಧಿಸಿದ್ದರು. ನಂತರ ಏನಾಯಿತು? ನೀವೇನೂ ಮಾಡಲಾಗಲಿಲ್ಲ ಎಂದರು.ನಿಮ್ಮಿಂದ ಆರ್‌ಎಸ್‌ಎಸ್ ನಿಷೇಧ ಸಾಧ್ಯವೇ?: ಇದೇ ಕಾಂಗ್ರೆಸ್ ಸರ್ಕಾರ 1975ರಲ್ಲಿ ನಮ್ಮೆಲ್ಲಾ ನಾಯಕರನ್ನು ಬಂಧಿಸಿತ್ತು. ಇದೇ ಫ್ರೀಡಂ ಪಾರ್ಕಿನ ಹಳೇ ಜೈಲಿನಲ್ಲಿ ಅಡ್ವಾಣಿ, ವಾಜಪೇಯಿ ಇದ್ದರು. ನಂತರ ಏನಾಯಿತು? ಇಂದು ಆರ್‌ಎಸ್‌ಎಸ್ ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.
ಕಿರಣ್ ಮಜುಂದಾರ್ ಷಾ ಅವರು ವಿದೇಶೀಯರು ರಸ್ತೆ ಗುಂಡಿ, ಕಸದ ಕುರಿತು ಗಮನ ಸೆಳೆದಿರುವುದನ್ನು ತಿಳಿಸಿದ್ದಾರೆ. ಎಲ್ಲ ಸಚಿವರೂ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಸರ್ಕಾರದ ವೈಫಲ್ಯ ತಿಳಿಸುವ ಮೋಹನ್‍ದಾಸ್ ಪೈ ಸೇರಿ ಇಂಥ ಎಲ್ಲರ ವಿರುದ್ಧ ಮಾತನಾಡುವ ಕೆಲಸ ಸಚಿವರಿಂದ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನವಿರೋಧಿಯಾದ ಈ ಸರ್ಕಾರ ಗ್ಯಾರಂಟಿಗಳನ್ನೂ ಸರಿಯಾಗಿ ಕೊಡುತ್ತಿಲ್ಲ. ಒಂದೇ ವರ್ಷದಲ್ಲಿ ಈ ಸರ್ಕಾರ ವಿಫಲವಾಗಿದೆ. ಮಹಿಳೆಯರಿಗೆ ಎರಡ್ಮೂರು ತಿಂಗಳಿಂದ ಹಣ ಬಿಡುಗಡೆಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜನ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಮಾತ್ರ ಓಲೈಕೆ ಮಾಡುತ್ತಿದೆ ಎಂದು ಟೀಕಿಸಿದರು. ಪ್ರತಿ ಬಜೆಟ್‌ನಲ್ಲಿ ಒಂದಲ್ಲ ಒಂದು ಯೋಜನೆ ಮತ್ತು ಹಣವನ್ನು ಅಲ್ಪಸಂಖ್ಯಾತರಿಗೆ ಘೋಷಣೆ ಮಾಡುತ್ತಾರೆ. ಅಲ್ಪಸಂಖ್ಯಾತರಿಗಾಗಿ ಯೋಜನೆಗಳು ಮತ್ತು ಪರಿಹಾರ ಇರುತ್ತದೆ. ಕೇರಳದಲ್ಲಿ ಆನೆ ತುಳಿತದವರಿಗೆ ಪರಿಹಾರ ಇರುತ್ತದೆ. ಕೇರಳದ ವೈನಾಡಿನಲ್ಲಿ ಪ್ರಿಯಾಂಕ ಗಾಂಧಿ ಕ್ಷೇತ್ರಕ್ಕೆ 10 ಕೋಟಿ ರು. ಕೊಡುತ್ತಾರೆ. ಗಣಪತಿ ಮೆರವಣಿಗೆಯಲ್ಲಿ ಸಾಯುವವರಿಗೆ ಗಾಯ ಗೊಳ್ಳುವರಿಗೆ ಹಣ ಕೊಡಲು ಇವರ ಬಳಿ ಇರಲ್ಲ ಎಂದು ಕುಟುಕಿದರು.
ಆರ್‌ಸಿಬಿಯವರು ಕಪ್ ಗೆದ್ದರೆ ಅದರಿಂದ ಪ್ರಚಾರ ಪಡೆದುಕೊಳ್ಳಲು ವಿಧಾನಸೌಧ ಮೆಟ್ಟಿಲ ಮೇಲೆ ಸಿಎಂ, ಡಿಸಿಎಂ ಪೈಪೋಟಿ ಮೇಲೆ ಕಾರ್ಯಕ್ರಮ ಮಾಡಿದರು. ಕೊನೆಗೆ ಇವರ ಸಂಭ್ರಮಾಚರಣೆಗೆ 11 ಜನ ಬಲಿಯಾದರು. ಕಳೆದ ವರ್ಷ ನಾಗಮಂಗಲದಲ್ಲಿ ಅರೆಸ್ಟ್ ಮಾಡಿ ನಂತರ ಬಿಡುಗಡೆ ಮಾಡಿದರು. ಮದ್ದೂರಿನಲ್ಲಿ ನಾವೇನು ಮಾಡಿದರೂ ನಡಿಯುತ್ತದೆ ಎಂದು ಗಲಾಟೆ ಮಾಡಿದ್ದಾರೆ. ಎಲ್ಲಿ ಪೊಲೀಸರು ಅನುಮತಿ ನೀಡುತ್ತಾರೋ ಅಲ್ಲೇ ಮೆರವಣಿಗೆ ನಡೆಯುತ್ತದೆ. ಪೊಲೀಸರಿಗೆ ನಿಮ್ಮ ಗುಪ್ತಚರ ಇಲಾಖೆ ಅವರಿಗೆ ಕಲ್ಲುತೂರಾಟ ನಡೆಸುವುದು ಗೊತ್ತಾಗುವುದಿಲ್ಲವೇ? ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಹಿಂದೂ ವಿರೋಧಿ ಘಟನೆಗಳು ನಡೆಯುತ್ತಿವೆ. ಇದಕ್ಕೆಲ್ಲ ನೇರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೊಣೆ ಎಂದು ಹರಿಹಾಯ್ದರು.
