ಆರ್‌ಎಸ್‌ಎಸ್‌ ನಿಷೇಧವಾಗಬೇಕು ಎನ್ನುವುದು ಜೆಡಿಎಸ್‌ನ ಮನ್ ಕೀ ಬಾತ್. ಈ ಮನದಾಳದ ಮಾತುಗಳನ್ನು ಬಿಜೆಪಿ ಹಾಗೂ ಜೆಡಿಎಸ್‌ನವರು ಇಂದು ಮರೆತಿದ್ದಾರೆಯೇ?, ಅಥವಾ ಮರೆಯಲು ಪ್ರಯತ್ನಿಸುತ್ತಿದ್ದಾರೆಯೇ? ಎಂದು ಪ್ರಿಯಾಂಕ್ ಖರ್ಗೆ ಕಿಚಾಯಿಸಿದ್ದಾರೆ.

ಕಲಬುರಗಿ (ಅ.19): ಆರ್‌ಎಸ್‌ಎಸ್‌ ನಿಷೇಧವಾಗಬೇಕು ಎನ್ನುವುದು ಜೆಡಿಎಸ್‌ನ ಮನ್ ಕೀ ಬಾತ್. ಈ ಮನದಾಳದ ಮಾತುಗಳನ್ನು ಬಿಜೆಪಿ ಹಾಗೂ ಜೆಡಿಎಸ್‌ನವರು ಇಂದು ಮರೆತಿದ್ದಾರೆಯೇ?, ಅಥವಾ ಮರೆಯಲು ಪ್ರಯತ್ನಿಸುತ್ತಿದ್ದಾರೆಯೇ? ಎಂದು ಪ್ರಿಯಾಂಕ್ ಖರ್ಗೆ ಕಿಚಾಯಿಸಿದ್ದಾರೆ. ಆರ್‌ಎಸ್‌ಎಸ್‌ ನ ಚಟುವಟಿಕೆಗಳನ್ನು ಸರ್ಕಾರಿ ಜಾಗದಲ್ಲಿ ನಿಷೇಧಿಸಬೇಕು ಎಂದು ಸಚಿವರು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್‌, ಆರ್‌ಎಸ್‌ಎಸ್‌ ಸಂಘಟನೆಯ ಬೆಂಬಲಿಗರು ಸಚಿವರ ವಿರುದ್ದ ಅವಹೇಳನಕಾರಿ ಮಾತುಗಳನ್ನು ಆಡಿ, ನಿಂದಿಸಿದ್ದರು.

ಈಗ ಮಾಜಿ ಪ್ರಧಾನಿಯ ಮಾತುಗಳನ್ನೇ ಉಲ್ಲೇಖಿಸಿ ಸಚಿವರು, ಬಿಜೆಪಿ ಹಾಗೂ ಜೆಡಿಎಸ್ ಗೆ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್‌ ನ್ನು ನಿಷೇಧಿಸಬೇಕು ಎಂದು ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ಟಾಂಗ್ ನೀಡಿದ್ದಾರೆ. 25 ವರ್ಷಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಪ್ರಕಟವಾಗಿದ್ದ ಪತ್ರಿಕೆಯ ತುಣುಕೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿ, ಆರ್‌ಎಸ್‌ಎಸ್‌ ನಿಷೇಧವಾಗಬೇಕು ಎನ್ನುವುದು ಜೆಡಿಎಸ್ ನ ಮನ್ ಕೀ ಬಾತ್ ಎಂದು ಕಿಚಾಯಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ ರಕ್ಷಣೆಗಾಗಿ ಸಕಲ ಕ್ರಮ: ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿರ್ಬಂಧ ಹಾಕುವಂತೆ ಪತ್ರ ಬರೆದ ಬಳಿಕ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಖುದ್ದು ತಿಳಿಸಿದ್ದಾರೆ. ಅವರಿಗೆ ರಕ್ಷಣೆ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದಲ್ಲದೆ ಕ್ರಮ ವಹಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್‌ ಕೂಡ ಹೇಳಿದ್ದಾರೆ. ‘ಪ್ರಿಯಾಂಕ್‌ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಕುರಿತ ಆಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಇಂತಹ ಬೆದರಿಕೆಗಳಿಗೆ ಯಾರೂ ಹೆದರುವುದಿಲ್ಲ. ದುಷ್ಟ ಶಕ್ತಿಗಳು ಯಾವಾಗಲೂ ಇಂಥದ್ದೇ ಕೆಲಸ ಮಾಡುವುದು. ಬೆದರಿಕೆಗಳಿಗೆ ಪ್ರಿಯಾಂಕ್‌ ಖರ್ಗೆ ಅವರು ಹೆದರುವುದಿಲ್ಲ. ನಾನೂ ಹೆದರುವುದಿಲ್ಲ. ಪ್ರಿಯಾಂಕ್ ಖರ್ಗೆ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು’ ಎಂದು ತಿಳಿಸಿದರು.

ಬೆದರಿಕೆ ಹಾಕುವವರ ಮೇಲೆ ಕ್ರಮ: ಪರಮೇಶ್ವರ್

ಬೆಂಗಳೂರಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಅವರು, ‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬಂದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯಾರು ಬೆದರಿಕೆ ಕರೆ ಮಾಡಿದ್ದಾರೆ, ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ಮಾಡುತ್ತೇವೆ. ಆರ್‌ಎಸ್‌ಎಸ್ ವಿಚಾರದಲ್ಲಿ ಸಚಿವರು ತಮ್ಮ ಅಭಿಪ್ರಾಯ ಹೇಳಿರಬಹುದು. ಆ ಬಗ್ಗೆ ಸರ್ಕಾರ ತೀರ್ಮಾನ ‌ಮಾಡುತ್ತದೆ. ಅದಕ್ಕೆ ಅವರಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಎಲ್ಲವನ್ನೂ ಪರಿಶೀಲನೆ ಮಾಡುವುದಕ್ಕೆ ಸೂಚಿಸಿದ್ದೇನೆ’ ಎಂದು ಹೇಳಿದರು.