ರಾಹುಲ್‌ ಗಾಂಧಿ ಅವರದ್ದು ಆಟಂ ಬಾಂಬ್‌ ಅಲ್ಲ, ಟುಸ್‌ ಪಟಾಕಿ ಎಂದೂ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.

ಬೆಂಗಳೂರು (ಆ.09): ಮತಗಳ್ಳತನ ಕುರಿತ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ರಾಜ್ಯ ಬಿಜೆಪಿ ನಾಯಕರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಮೋದಿ ಅಥವಾ ಪಕ್ಷದ ನಾಯಕರ ಪಾತ್ರವೇ ಇಲ್ಲ ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರದ್ದು ಆಟಂ ಬಾಂಬ್‌ ಅಲ್ಲ, ಟುಸ್‌ ಪಟಾಕಿ ಎಂದೂ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ವಿವಿಧೆಡೆ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಹುಲ್ ಗಾಂಧಿ ಆರೋಪಗಳನ್ನು ಬಲವಾಗಿ ಅಲ್ಲಗಳೆದರು.

ಪರಿಷ್ಕರಣೆಗೆ ವಿರೋಧ ಯಾಕೆ?: ವಿಜಯೇಂದ್ರ ಮಾತನಾಡಿ, ಮತದಾನದಲ್ಲಿ ಅಕ್ರಮದ ಆರೋಪ ಮಾಡುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರು ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಯಾಕೆ ವಿರೋಧಿಸುತ್ತಾರೆ? ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶ-ರಾಜ್ಯದಲ್ಲಿ ಅಕ್ರಮಗಳು ನಡೆದಿವೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ರಾಹುಲ್ ಗಾಂಧಿ ಹೇಳಿಕೆ ನಂತರ ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ಸಿನ ಹಿರಿಯ ನಾಯಕರು ಮೂರ್ಖರಂತೆ ಮಾತನಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 16 ಸೀಟ್ ಪಡೆಯಲಿದೆ ಎಂದು ಯಾವ ಸರ್ವೇಗಳೂ ಹೇಳಿರಲಿಲ್ಲ. 16 ಸೀಟು ಗೆಲ್ಲಲಿದೆ ಎಂಬುದಾಗಿ ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ಸಿನ ಮೂರ್ಖರು ಹೇಳಿರಬೇಕು ಎಂದರು.

ಟುಸ್‌ ಪಟಾಕಿ: ಆರ್‌.ಅಶೋಕ್ ಮಾತನಾಡಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಮೋದಿ ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಇದನ್ನು ಅಧಿಕಾರಿಗಳೇ ತಯಾರು ಮಾಡುತ್ತಾರೆ. ಆದ್ದರಿಂದ ರಾಹುಲ್‌ ಗಾಂಧಿ ಆರೋಪ ಟುಸ್‌ ಪಟಾಕಿ ಆಗಿದೆ ಎಂದು ಹೇಳಿದರು. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಯಕರು ಬೋಗಸ್‌ ವೋಟ್‌ಗಳ ಅಕ್ರಮ ಮಾಡಿದ್ದಕ್ಕೆ ಬಂಧಿತರಾಗಿದ್ದಾರೆ. ಬೆಂಗಳೂರಿನ ಗಾಂಧಿನಗರದ ಒಂದು ಚಿಕ್ಕ ಮನೆಯಲ್ಲಿ 18 ಮುಸ್ಲಿಂ ಮತದಾರರಿದ್ದಾರೆ. ಒಂದೇ ಮನೆಯಲ್ಲಿ ಇಷ್ಟೊಂದು ವೋಟು ಇರಲು ಹೇಗೆ ಸಾಧ್ಯ? ಸರ್ವಜ್ಞನಗರ ಕ್ಷೇತ್ರದ ನಾಗವಾರ ವಾರ್ಡ್‌ನಲ್ಲಿ ಕಾಂಗ್ರೆಸ್‌ ಶಾಸಕರಿಗಿಂತಲೂ ಸಂಸದರಿಗೆ 5,965 ಹೆಚ್ಚುವರಿ ಮತ ಸಿಕ್ಕಿದೆ. ಹಾಗಾದರೆ ಕಾಂಗ್ರೆಸ್‌ಗೆ ಹೆಚ್ಚು ಮತ ಸಿಕ್ಕಿದ್ದು ಹೇಗೆ? ಎಚ್‌ಬಿಆರ್‌ ಲೇಔಟ್‌ನಲ್ಲಿ ಶಾಸಕರಿಗಿಂತಲೂ ಸಂಸದರಿಗೆ 3,646 ಮತ ಹೆಚ್ಚಾಗಿ ಸಿಕ್ಕಿದೆ. ಕಾಡುಗೊಂಡನಹಳ್ಳಿಯಲ್ಲಿ 3432 ಹೆಚ್ಚು ಮತ ಸಿಕ್ಕಿದೆ. ಹಾಗಾದರೆ ಇವೆಲ್ಲವನ್ನೂ ಸೇರಿಸಿದ್ದು ಯಾರು ಎಂದು ಪ್ರಶ್ನಿಸಿದರು.

ವೈಫಲ್ಯ ಮುಚ್ಚಲು ಯತ್ನ: ಬಸವರಾಜ ಬೊಮ್ಮಾಯಿ ಮಾತನಾಡಿ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡಿ ಲೋಕತಂತ್ರ ನಿಷ್ಕ್ರಿಯ ಮಾಡಲು ಹೊರಟಿದ್ದಾರೆ. ತಾವು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೊಡದೇ ಪಲಾಯನ ಮಾಡಿದ್ದಾರೆ ಎಂದು ಹೇಳಿದರು. ಚುನಾವಣಾ ಆಯೋಗ ಯಾವ ರೀತಿ ಕರ್ತವ್ಯ ಮಾಡುತ್ತದೆ. ಜನಪ್ರತಿನಿಧಿ ಕಾಯ್ದೆ ಏನು ಹೇಳುತ್ತದೆ ಎನ್ನುವುದು ರಾಹುಲ್ ಗಾಂಧಿಯವರಿಗೆ ಗೊತ್ತಿದೆಯೋ, ಗೊತ್ತಿಲ್ಲವೊ‌ ಅಥವಾ ಗೊತ್ತಿದ್ದು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆಯೋ ಗೊತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಬಾರಿ ಸೋತಿದ್ದರಿಂದ ರಾಹುಲ್ ಗಾಂಧಿ ನಾಯಕತ್ವದ ಮೇಲೆ ಕಾಂಗ್ರೆಸ್ ನಲ್ಲಿ ಅಪಸ್ವರ ಇದೆ. ಅದನ್ನು ಮರೆಮಾಚಲು ರಾಹುಲ್ ಗಾಂಧಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಡೇಂಜರಸ್ ಗೇಮ್ ಆಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತಹ ಆಟ ಆಡುತ್ತಿದ್ದಾರೆ ಜನರಿಗೆ ಇದು ಗೊತ್ತಾಗುತ್ತಿದೆ ಎಂದರು.

ವೃಥಾ ಆರೋಪ: ಪ್ರಹ್ಲಾದ್ ಜೋಶಿ ಮಾತನಾಡಿ, ಕುಣಿಯಲು ಬಾರದವರು ನೆಲ ಡೊಂಕು ಅಂದರಂತೆ ಎಂಬ ಗಾದೆ ಮಾತಿನಂತೆ ರಾಹುಲ್‌ ಗಾಂಧಿ ಸಹ ಅದೇ ವರ್ತನೆ ತೋರುತ್ತಿದ್ದಾರೆ. ಚುನಾವಣಾ ಆಯೋಗದಂತಹ ಸಾಂಸ್ಥಿಕ ಸಂಸ್ಥೆಗಳ ಮೇಲೆ ವೃಥಾ ಆರೋಪ ಮಾಡುವ ಇವರದ್ದು ಮೂರ್ಖತನವೇ ಸರಿ ಎಂದು ಕಿಡಿಕಾರಿದರು. ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದ ಮಾಹಿತಿ ಪಡೆದುಕೊಳ್ಳಲು ಆಯೋಗ ಕರೆದರೂ ತೆರಳಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಇವರ ಆರೋಪಗಳೆಲ್ಲ ನಿರಾಧಾರ ಎಂಬುದು. ರಾಹುಲ್‌ ಗಾಂಧಿ ಅವರದ್ದು ಒಂದು ರೀತಿ ಹಿಟ್‌ ಆಂಡ್‌ ರನ್‌ ಕೇಸ್‌ ಇದ್ದಂತೆ. ಮನಬಂದಂತೆ ಮಾತನಾಡುತ್ತಾರೆ. ಉತ್ತರ ಕೇಳಿದರೆ ನಾಪತ್ತೆಯಾಗುತ್ತಾರೆ. ಯಾವುದೇ ಪ್ರಕರಣ ಸಹ ದಾಖಲಿಸುವುದಿಲ್ಲ ಎಂದು ಚಾಟಿ ಬೀಸಿದರು.

ಹುಡಗಾಟದ ಹುಡುಗ: ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಬಹುಶಃ ಒಬ್ಬ ಹುಡುಗಾಟದ ಹುಡುಗ. ಹೀಗೆ ಹುಡುಗಾಟ ಆಡುತ್ತಿದ್ದರೆ ಜನರು ನಿಮ್ಮನ್ನು ಪ್ರಬುದ್ಧ ನಾಯಕ ಎಂದು ತಿಳಿದುಕೊಳ್ಳುವುದಿಲ್ಲ. ಒಂದೇ ವ್ಯಕ್ತಿಯ ಭಾವಚಿತ್ರವುಳ್ಳ ಹೆಸರು ಬೇರೆ ಬೇರೆ ಕಡೆ ಮತದಾರರ ಪಟ್ಟಿಯಲ್ಲಿ ಇದ್ದರೆ ಅಂಥ ವ್ಯಕ್ತಿಯ ವಾಸ ಪ್ರದೇಶ ಹೊರತುಪಡಿಸಿ ಎರಡನೇ ಅಥವಾ ಮೂರನೇ ಪ್ರದೇಶದ ಹೆಸರು ರದ್ದು ಮಾಡಲು ನಾವೇ ಹೋರಾಟ ಮಾಡಿದ್ದೆವು. ಇದೆಲ್ಲ ಕಾಂಗ್ರೆಸ್ ತಂತ್ರಗಳು ಎಂದು ಟೀಕಿಸಿದರು.