ಸಮಾವೇಶ ನಡೆಯುವ ಮಧ್ಯದಲ್ಲಿಯೇ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮನ್ಸೂರ್‌ ಅಲಿ ಖಾನ್‌ ಅವರನ್ನು ಕರೆದು ರಾಹುಲ್‌ ಗಾಂಧಿ ಕೆಲ ಮಾಹಿತಿ ಪಡೆದರು.

ಬೆಂಗಳೂರು (ಆ.09): ಪ್ರತಿಭಟನಾ ಸಮಾವೇಶದುದ್ದಕ್ಕೂ ರಾಹುಲ್‌ ಗಾಂಧಿ ಕೆಂಪು ಬಣ್ಣದ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸುತ್ತಲೇ ಇದ್ದರು. ಕಾರ್ಯಕ್ರಮ ಅಂತಿಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಕೈಗೆ ಸಂವಿಧಾನ ಪುಸ್ತಕ ನೀಡಿ, ಅವರ ಕೈಯನ್ನಿಡಿದು ಜನರತ್ತ ಎತ್ತಿದರು. ಇನ್ನು, ಪ್ರತಿಭಟನಾ ಸಮಾವೇಶದ ವೇದಿಕೆಗೆ ಆಗಮಿಸಿದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಒಬ್ಬರನ್ನೊಬ್ಬರ ಕೈ ಹಿಡಿದು ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದರು.

ಮಾಜಿ ಸಚಿವನನ್ನು ಎದ್ದು ಹೋಗಿ ಮಾತನಾಡಿಸಿದ ಕೈ ಮುಖಂಡ: ಪ್ರತಿಭಟನಾ ಸಮಾವೇಶದ ವೇದಿಕೆಯಲ್ಲಿ ರಾಹುಲ್‌ ಗಾಂಧಿ ಅವರು ಆಸೀನರಾಗಿದ್ದ ಸಂದರ್ಭದಲ್ಲಿ ಅವರಲ್ಲಿಗೆ ಬಂದ ಮಾಜಿ ಸಚಿವ ಶಿವಮೂರ್ತಿ ನಾಯಕ್‌ ಅವರು ಬಂದು ಹಸ್ತಲಾಘವ ಮಾಡಿ ವಾಪಸ್‌ ಹೋಗುತ್ತಿದ್ದರು. ಆದರೆ, ಅವರ್‍ಯಾರೆಂದು ತಿಳಿಯದ ರಾಹುಲ್‌ ಗಾಂಧಿ ವೇದಿಕೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಶಿವಮೂರ್ತಿ ನಾಯಕ್‌ ಅವರಲ್ಲಿಗೆ ಹೋಗಿ ಆತ್ಮೀಯವಾಗಿ ಮಾತನಾಡಿದರು. ಇದು ವೇದಿಕೆಯಲ್ಲಿದ್ದ ಇತರ ನಾಯಕರಿಗೆ ಅಚ್ಚರಿಯನ್ನುಂಟು ಮಾಡಿತು.

ವೇದಿಕೆಯಲ್ಲೇ ಸೋತ ಅಭ್ಯರ್ಥಿಯಿಂದ ಮಾಹಿತಿ ಪಡೆದ ರಾಹುಲ್‌ ಗಾಂಧಿ: ಸಮಾವೇಶ ನಡೆಯುವ ಮಧ್ಯದಲ್ಲಿಯೇ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮನ್ಸೂರ್‌ ಅಲಿ ಖಾನ್‌ ಅವರನ್ನು ಕರೆದು ರಾಹುಲ್‌ ಗಾಂಧಿ ಕೆಲ ಮಾಹಿತಿ ಪಡೆದರು. ಈ ವೇಳೆ ಅಲ್ಲಿದ್ದ ಡಿ.ಕೆ. ಶಿವಕುಮಾರ್‌ ಕೂಡ, ಚುನಾವಣೆಗೆ ಸಂಬಂಧಿಸಿದ ಕೆಲ ಮಾಹಿತಿಗಳನ್ನು ರಾಹುಲ್‌ ಅವರಿಗೆ ತಿಳಿಸಿದರು.

ರಾಹುಲ್‌ ನೋಡಲು ಬಂದವರಿಗೆ ಲಾಠಿ ರುಚಿ: ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ರಾಹುಲ್‌ ಗಾಂಧಿ ಸೇರಿ ಇತರ ನಾಯಕರು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳುತ್ತಾರೆ ಎಂದು ಘೋಷಿಸಲಾಯಿತು. ಅದರಿಂದ ಕಾರ್ಯಕ್ರಮ ಮುಗಿದ ಕೂಡಲೇ ಯುವ ಕಾಂಗ್ರೆಸ್‌ ಕಾರ್ಯಕರ್ತರು ರಾಹುಲ್‌ ಗಾಂಧಿ ಅವರನ್ನು ನೋಡಲು ಶೇಷಾದ್ರಿ ರಸ್ತೆಯಲ್ಲಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯತ್ತ ದೌಡಾಯಿಸಿದರು. ಈ ವೇಳೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಳಿ ಜನರ ಜಮಾವಣೆ ಹೆಚ್ಚುತ್ತಿರುವುದನ್ನು ಅರಿತ ಪೊಲೀಸರು, ಅವರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದರು.