ಮಾಜಿ ಡಿಸಿಎಂ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ಪ್ರವಾಹ ನಿರ್ವಹಣಾ ವೈಫಲ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ವೈಮಾನಿಕ ಸಮೀಕ್ಷೆಯನ್ನು ವ್ಯಂಗ್ಯವಾಡಿದ ಅವರು, ಅಕ್ಟೋಬರ್‌ನಲ್ಲೇ ಸರ್ಕಾರದಲ್ಲಿ ಕ್ರಾಂತಿಯಾಗುವ ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಆರ್. ಅಶೋಕ್ ಮತ್ತು ಮಾಜಿ ಸಚಿವ ಸುನೀಲ್ ಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯ ಸರ್ಕಾರದ ಕಾರ್ಯಶೈಲಿಯನ್ನು ತೀವ್ರವಾಗಿ ಟೀಕಿಸಿದರು. ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯ ಬಗ್ಗೆ ವ್ಯಂಗ್ಯವಾಡಿದರು. ಸಿಎಂಗೆ ನಾನು ಎರಡು ಪ್ರಶ್ನೆ ಕೇಳುತ್ತೇನೆ. ಒಂದು, ರಾಜ್ಯದೆಲ್ಲೆಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಹಾಗಿದ್ದರೆ ಜನರ ಕಷ್ಟವನ್ನು ಪರಿಹರಿಸಲು ವೈಮಾನಿಕ ಸಮೀಕ್ಷೆಯೇನು? ಎರಡನೆಯದಾಗಿ, ಜನರು ನಿಮಗೆ ಘೇರಾವ್ ಮಾಡುತ್ತಾರೆ ಎನ್ನುವ ಭಯದಿಂದಲೇ ಹೆಲಿಕಾಪ್ಟರ್‌ನಲ್ಲಿ ಸಮೀಕ್ಷೆ ನಡೆಸಿದೀರಾ? ಎಂದು ಪ್ರಶ್ನಿಸಿದರು.
ಮುಂದುವರಿದು, ರಾಜ್ಯದಲ್ಲಿ ಇಷ್ಟು ಭಾರೀ ಪ್ರವಾಹ ಸಂಭವಿಸಿದರೂ ಯಾವ ಮಂತ್ರಿಯೂ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿಲ್ಲ. ಇದು ಯಾವ ರೀತಿಯ ಸರ್ಕಾರ? ಜಾನುವಾರು ನಷ್ಟವಾಗಿದೆ, ಬೆಳೆ ಹಾನಿಯಾಗಿದೆ. ಆದರೆ ಪರಿಹಾರ ನೀಡಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಪಾಲಿಗೆ ಈ ಸರ್ಕಾರ ಸತ್ತಂತಾಗಿದೆ ಎಂದು ಟೀಕಿಸಿದರು.
ಸರ್ಕಾರದ ಸ್ಥಿರತೆ ಬಗ್ಗೆ ಹೇಳಿಕೆ
ಅಶೋಕ್ ಅವರು ರಾಜ್ಯ ಸರ್ಕಾರದ ಸ್ಥಿರತೆ ಬಗ್ಗೆ ಮಾತಾಡಿ, ಸಿದ್ದರಾಮಯ್ಯ ಅವರು ಬಲೈಗೆ ಬಂಟ ನವೆಂಬರ್‌ನಲ್ಲಿ ಕ್ಯಾಬಿನೆಟ್ ವಿಸ್ತರಣೆ ಮಾಡುತ್ತೇನೆ ಎಂದಿದ್ದಾರೆ. ಆದರೆ ಅಕ್ಟೋಬರ್‌ನಲ್ಲೇ ಕ್ರಾಂತಿಯ ಸಂಕೇತಗಳು ಗೋಚರಿಸುತ್ತಿವೆ. ಕ್ರಾಂತಿ ಸಂಭವಿಸುವುದು ಖಚಿತ. ಸರ್ಕಾರ ಬಿದ್ದರೆ ನಾವು ಚುನಾವಣೆಗೆ ಸಿದ್ಧರಾಗಿದ್ದೇವೆ. ಆದರೆ ನಾವು ಸರ್ಕಾರ ರಚಿಸಲು ಮುಂದೆ ಬರುವುದಿಲ್ಲ. ಪ್ರಜಾಪ್ರಭುತ್ವದ ಪ್ರಕಾರ ಜನರ ತೀರ್ಪಿಗೆ ಹೋಗುತ್ತೇವೆ ಎಂದರು. ಅವರು ತೀವ್ರ ವಾಗ್ದಾಳಿ ನಡೆಸುತ್ತಾ, “ಈ ಸರ್ಕಾರ ಇನ್ನೂ ಟೇಕ್‌ಆಫ್ ಆಗಿಲ್ಲ. ಶಾಸಕರೇ ತಮ್ಮ ಪ್ರದೇಶದಲ್ಲಿ ಅಭಿವೃದ್ಧಿ ಆಗದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಹೇಳುತ್ತಿದ್ದಾರೆ. ಇಂತಹ ಸ್ಥಿತಿ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದರು.
ಜಾತಿ ಸಮೀಕ್ಷೆ ಕುರಿತ ಪ್ರತಿಕ್ರಿಯೆ
ಜಾತಿ ಸಮೀಕ್ಷೆ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟಪಡಿಸಿದ ಅಶೋಕ್, “ಸಮೀಕ್ಷೆಯಲ್ಲಿ ಭಾಗವಹಿಸಬೇಡಿ, ಬಹಿಷ್ಕರಿಸಿ ಎಂದು ಬಿಜೆಪಿ ಹೇಳಿಲ್ಲ. ನಮ್ಮ ಪಕ್ಷದ ನಿಲುವು ಹಾಗಿಲ್ಲ. ತೇಜಸ್ವಿ ಸೂರ್ಯ ಅವರು ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯ. ಕೋರ್ಟ್ ಹೇಳಿಕೆಯಂತೆ ಯಾರಿಗೆ ಬೇಕೋ ಅವರು ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಆ ಪ್ರಕಾರವೇ ಅವರು ಹೇಳಿದ್ದಾರೆ. ಆದರೆ ಪಾರ್ಟಿ ಮಟ್ಟದಲ್ಲಿ ಬಹಿಷ್ಕಾರದ ಕರೆ ನೀಡಿಲ್ಲ” ಎಂದು ತಿಳಿಸಿದರು.
ಅವರು ಇನ್ನೂ ಮುಂದುವರಿದು, “ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರಕ್ಕೆ ಅಂತಹ ಹಕ್ಕಿಲ್ಲ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಇಚ್ಛೆಯ ಪ್ರಕಾರ ‘ಪಿಕ್ ಆಂಡ್ ಚೂಸ್’ ವಿಧಾನದಲ್ಲಿ ಹೇಳಿಕೆ ನೀಡುತ್ತಿದ್ದಾರೆ. 15 ದಿನಗಳಲ್ಲಿ ಸಮೀಕ್ಷೆ ನಡೆಸುವ ತುರ್ತು ಏನು? ಕೇಂದ್ರ ಈಗಾಗಲೇ ಸಮೀಕ್ಷೆ ನಡೆಸುತ್ತಿದೆ. ಆದರೆ ರಾಜ್ಯ ಸರ್ಕಾರ ಬೇಗನೆ ಮುಗಿಸಲು ಯತ್ನಿಸುತ್ತಿದೆ. ಇದರಿಂದ ಮುಂದೆ ಬಂದು ಸಿದ್ದರಾಮಯ್ಯ, ‘ನಾನು ಈ ಜಾತಿಗೆ ಮನ್ನಣೆ ಕೊಟ್ಟೆ, ಆ ಜಾತಿಗೆ ಮನ್ನಣೆ ಕೊಟ್ಟೆ. ಆದರೆ ಬಿಜೆಪಿ ಬಂದು ಎಲ್ಲವನ್ನೂ ಹಾಳುಮಾಡಿತು’ ಎಂದು ಆರೋಪಿಸಲು ನೆಲೆಯೊದಗಿಸುತ್ತಿದ್ದಾರೆ” ಎಂದು ಟೀಕಿಸಿದರು.
ಮೈಸೂರು ದಸರಾ ಉದ್ಘಾಟನೆ ವಿವಾದ
ಮೈಸೂರು ದಸರಾ ಉದ್ಘಾಟನೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್, “ನಾನು ಸಿಎಂ ಉದ್ಘಾಟನೆ ಮಾಡುವುದಿಲ್ಲವೆಂದಿದ್ದೆ. ಅಂತಿಮವಾಗಿ ಸಿಎಂ ಉದ್ಘಾಟನೆ ಮಾಡದೇ, ಸಾಬರ ಹತ್ರ ದಸರಾ ಉದ್ಘಾಟನೆಯು ನೆರವೇರಿದೆ. ಹೀಗಾಗಿ ನನ್ನ ಮಾತು ಸುಳ್ಳಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ಮತ್ತು ಸುನೀಲ್ ಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲ್ಲೆಗಿಳಿದು, ಪ್ರವಾಹ ನಿರ್ವಹಣೆಯಲ್ಲಿ ವೈಫಲ್ಯ, ರೈತರ ಹಿತಾಸಕ್ತಿ ಕಡೆಗಣನೆ, ಜಾತಿ ಸಮೀಕ್ಷೆಯ ರಾಜಕೀಯ ದುರುಪಯೋಗ ಮತ್ತು ದಸರಾ ವಿವಾದದಂತಹ ಹಲವು ವಿಷಯಗಳನ್ನು ಎತ್ತಿಹಿಡಿದರು. “ಜನರ ಪಾಲಿಗೆ ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ಯಾವಾಗಲೂ ಜನಪರ ನಿಲುವಿನಲ್ಲಿ ಮುಂದುವರೆಯುತ್ತದೆ” ಎಂಬ ಸಂದೇಶವನ್ನು ಅವರು ನೀಡಿದರು.
