ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಚಿವರು ವೈಮಾನಿಕ ಸಮಿಕ್ಷೆ ಹೆಸರಿನಲ್ಲಿ ಆಕಾಶದಲ್ಲಿ ಹಾರಾಡಿ ಚಂದ್ರಲೋಕ ನೋಡಿದ್ದಾರೇ ವಿನಃ, ರೈತರ ಭೂಮಿ ಹಾಳಾಗಿದ್ದನ್ನು ನೋಡಿಲ್ಲ ಎಂದು ಆರ್.ಅಶೋಕ್ ಟೀಕಿಸಿದರು.
ಇಂಡಿ (ಅ.05): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಚಿವರು ವೈಮಾನಿಕ ಸಮಿಕ್ಷೆ ಹೆಸರಿನಲ್ಲಿ ಆಕಾಶದಲ್ಲಿ ಹಾರಾಡಿ ಚಂದ್ರಲೋಕ ನೋಡಿದ್ದಾರೇ ವಿನಃ, ರೈತರ ಭೂಮಿ ಹಾಳಾಗಿದ್ದನ್ನು ನೋಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀರಿನಲ್ಲಿ ಇಳಿಯಲು ಆಗಲ್ಲ. ಆಕಾಶದಿಂದ ಬಂದು, ಆಕಾಶದಲ್ಲಿಯೇ ಹೋಗಿದ್ದಾರೆ. ಪರಿಹಾರವು ಅಷ್ಟೇ ಆಕಾಶದಿಂದಲೇ ನೀಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದರು. ಭೀಮಾನದಿ ಪ್ರವಾಹ ಹಾಗೂ ಮಳೆಯಿಂದ ಹಾನಿಯಾದ ಇಂಡಿ ತಾಲೂಕಿನ ಪ್ರದೇಶದಲ್ಲಿ ಬೆಳೆ ಹಾನಿ ಕುರಿತು ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಾವು ಪರಿಹಾರ ನೀಡಲು ಸಣ್ಣ ಸರ್ವೆ ನಡೆಸಿದ್ದೇವೆ. ಬಿಜೆಪಿಯವರು ಏಕೆ ಬಂದಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲರು ಹೇಳುವುದನ್ನು ನೋಡಿದ್ರೆ ಕಾಂಗ್ರೆಸ್‌ನವರು ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾರೆಯೇ ಎಂದು ಪ್ರಶ್ನಿಸಿದರು. ಬಿಜೆಪಿ ಆಡಳಿತದಲ್ಲಿ ಬೆಳೆ ಪರಿಹಾರಕ್ಕೆ ಇಷ್ಟು, ಬಿದ್ದ ಮನೆಗಳಿಗೆ ಇಷ್ಟು ಕೊಟ್ಟಿದ್ದಾರೆ. ನಮ್ಮ ಸರ್ಕಾರ ಅವರಿಗಿಂತ ಹೆಚ್ಚಿಗೆ ನೀಡಿದೆ ಎಂದು ಧೈರ್ಯವಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.ರೈತರಿಗೆ ಬೆಳೆ ಪರಿಹಾರಕ್ಕಾಗಿ ನೀಡಬೇಕಾಗಿದ್ದ ಹಣ ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದಾರೆ. ಕಾಂಗ್ರೆಸ್‌ನವರು ರೈತರಿಗೆ ಪರಿಹಾರ ಎಲ್ಲಿಂದ ನೀಡಬೇಕು. ರೈತರ ಶಾಪ ಕಾಂಗ್ರೆಸ್‌ನವರಿಗೆ ತಟ್ಟುತ್ತದೆ. ಪ್ರವಾಹ, ಮಳೆಯಿಂದ ಹಾನಿಯಾದ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷದ ಸಭೆ ಕರೆಯಬೇಕಿತ್ತು. ಏಕೆ ಕರೆದಿಲ್ಲ?.
ಶ್ವೇತಪತ್ರ ಹೊರಡಿಸಲಿ
ಕೇಂದ್ರಕ್ಕೆ ಒಂದು ಮನವಿ ಸಹ ಸಲ್ಲಿಸಿಲ್ಲ. ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಹಾಗೂ ಮನಮೋಹನ್ ಸಿಂಗ್ ಅವಧಿಯಲ್ಲಿ ರಾಜ್ಯಕ್ಕೆ ಪ್ರವಾಹ ಅನುದಾನ ಎಷ್ಟು ಬಿಡುಗಡೆ ಮಾಡಿದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ಅವರು ಸಿಎಂ ಬದಲಾವಣೆ, ಮಂತ್ರಿಮಂಡಲದ ಬದಲಾವಣೆಯಲ್ಲಿಯೇ ಬ್ಯುಜಿಯಾಗಿದ್ದಾರೆ. ಹೋದಲ್ಲೆಲ್ಲ ಜನರು ಘೇರಾವ್ ಹಾಕುತ್ತಾರೆಂದು ಸಿಎಂ ವೈಮಾನಿಕ ಸಮಿಕ್ಷೆ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಪ್ರವಾಹ, ಮಳೆಯಿಂದ ಮನೆ, ಬೆಳೆ ಹಾನಿಯಾದರೆ ಎರಡು ಪಟ್ಟು ಪರಿಹಾರ ನೀಡಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರ ಲಂಚದ ಬೆಳೆ ಮಾತ್ರ ಹಾನಿ ಆಗಿದೆ ಎಂದು ತೋರಿಸುತ್ತಿದ್ದರೆ. ರೈತರ ಸಂಪೂರ್ಣ ಬೆಳೆ ಹಾನಿಯಾಗಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಮಳುಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಶೀಲವಂತ ಉಮರಾಣಿ, ಕಾಸುಗೌಡ ಬಿರಾದಾರ, ರಾಜಕುಮಾರ ಸಗಾಯಿ, ಮಲ್ಲಿಕಾರ್ಜುನ ಕಿವಡೆ, ಸಿದ್ದಲಿಂಗ ಹಂಜಗಿ, ಅನೀಲ ಜಮಾದಾರ, ರಾಘವೇಂದ್ರ ಕಾಪಸೆ, ಶಿವಯೋಗಿ ರೂಗಿಮಠ, ಕಲ್ಲು ಮೊಸಲಗಿ, ಸುರೇಶ ಬಿರಾದಾರ, ವಿವೇಕ ಡಬ್ಬಿ, ವಿಜಯ ಜೋಶಿ, ಭೀಮಾಶಂಕರ ಹದನೂರ, ಎಸ್.ಎ.ಪಾಟೀಲ, ಕೃಷ್ಣಾ ಗೊನಾಳಕರ, ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಂಜುನಾಥ ಮಿಸೆ, ಬತ್ತುಸಾಹುಕಾರ ಹಾವಳಗಿ, ಸಂಜು ದಶವಂತ, ರಾಮಸಿಂಗ ಕನ್ನೊಳ್ಳಿ, ವಿಜಯಲಕ್ಷ್ಮಿ ರೂಗಿಮಠ, ಶಾಮಲಾ ಬಗಲಿ, ಬೌರಮ್ಮ ನಾವಿ, ಅನಸೂಯಾ ಮದರಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
