ಹುಲಿಗಳಲ್ಲೂ ಒಕ್ಕಲಿಗ ಹುಲಿ, ಪಂಚಮಸಾಲಿ ಹುಲಿ ಎಂದು ಹುಲಿಗಳ ಜಾತಿ ಹುಡುಕಬೇಕೇ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದರು.

ವಿಧಾನಸಭೆ (ಆ.21): ರಾಜ್ಯ ಸರ್ಕಾರವು ಪರಿಶಿಷ್ಟರಿಗೆ ಮೀಸಲಿಟ್ಟಿರುವ ಎಸ್ಸಿಪಿ-ಟಿಎಸ್‌ಪಿ ಹಣವನ್ನು ಹುಲಿ-ಆನೆ ಯೋಜನೆಗೆ ನೀಡಿದೆ. ಹಾಗಾದರೆ ಹುಲಿಗಳಲ್ಲೂ ಒಕ್ಕಲಿಗ ಹುಲಿ, ಪಂಚಮಸಾಲಿ ಹುಲಿ ಎಂದು ಹುಲಿಗಳ ಜಾತಿ ಹುಡುಕಬೇಕೇ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದರು. ಅಭಿವೃದ್ಧಿ ಹಾಗೂ ಅನುದಾನ ತಾರತಮ್ಯ ವಿಚಾರವಾಗಿ ಮಾತನಾಡಿ, ಅರಣ್ಯ ಇಲಾಖೆಯಲ್ಲೂ ಎಸ್‌ಸಿಪಿ-ಟಿಎಸ್‌ಪಿ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನೇನು ಹುಲಿ ಹಿಡಿಯಲು ಕೊಟ್ಟಿದ್ದಾರೋ ಎಂದು ಪ್ರಶ್ನಿಸಬೇಕಾಗುತ್ತದೆ. ಈ ಬಗ್ಗೆ ‘ಹೌದಾ ಹುಲಿಯಾ’ ಎಂದು ಕೇಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಹುಲಿ ಮತ್ತು ಆನೆ ಯೋಜನೆಗೆ 2 ಕೋಟಿ ರು, ಗ್ರೀನ್‌ ಇಂಡಿಯಾ ಮಿಷನ್‌ಗೆ 34 ಕೋಟಿ ರು. ನೀಡಲಾಗಿದೆ. ಹುಲಿಗೂ ಕೂಡ ಎಸ್ಸಿಪಿ-ಟಿಎಸ್‌ಪಿ ಹಣ ನೀಡಿದ್ದಾರೆಂದರೆ ಒಕ್ಕಲಿಗ ಹುಲಿ? ಪಂಚಮಸಾಲಿ ಹುಲಿ ಎಂದು ಹುಲಿ ಜಾತಿ ಹುಡುಕಬೇಕೆ? ಈ ಹಣ ಯಾವ ರೀತಿ ಎಲ್ಲಾ ದುರುಪಯೋಗ ಆಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಎಲ್ಲಾ ಇಲಾಖೆಗಳಲ್ಲೂ ಎಸ್ಸಿಪಿ-ಟಿಎಸ್‌ಪಿ ಹಣ ಬಳಕೆ ಮಾಡಲು ಅವಕಾಶವಿದೆ ಎಂದು ಸಮರ್ಥಿಸಿಕೊಂಡರು.

ಗುಡ್ಡೆ ಸಾಕ್ಷಿ ಬಿಟ್ಟು ಹೋಗಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ನಿರಾಕರಿಸಿದ ಸ್ಪೀಕರ್‌ ಯು.ಟಿ. ಖಾದರ್‌ ಅವರಿಗೆ ‘ನೀವು ಕಾಂಗ್ರೆಸ್‌ ಪರ ಇರಬಾರದು. ಈ ಸ್ಥಾನದಲ್ಲಿ ಗುಡ್ಡೆ ಸಾಕ್ಷಿ ಬಿಟ್ಟು ಹೋಗಬೇಕು’ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು.

‘ಸಾಕ್ಷಿ ಗುಡ್ಡೆ’ ಎಂಬ ಪದವನ್ನು ಪದೇ ಪದೇ ‘ಗುಡ್ಡೆ ಸಾಕ್ಷಿ’ ಎಂದು ಬಳಕೆ ಮಾಡಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆದಿಯಾಗಿ ಸದನದ ಸದಸ್ಯರೆಲ್ಲಾ ನಗೆಗಡಲಲ್ಲಿ ತೇಲಿದರು. ಒಳ ಮೀಸಲಾತಿ ಕುರಿತು ಚರ್ಚೆಗೆ ಅವಕಾಶ ನೀಡಬೇಕು. ನೀವು ನಿಮ್ಮ ತಲೆಯ ಮೇಲಿನ ತಕ್ಕಡಿಯಂತೆ ಸಮಾನವಾಗಿರಬೇಕು. ಡಿ.ಕೆ. ಶಿವಕುಮಾರ್‌ ಯಾವಾಗಲೂ ಗುಡ್ಡೆ ಸಾಕ್ಷಿ ಬಿಟ್ಟು ಹೋಗಬೇಕು. ಗುಡ್ಡೆ ಸಾಕ್ಷಿ ಬಿಟ್ಟು ಹೋಗಬೇಕು ಎಂದು ಹೇಳುತ್ತಿರುತ್ತಾರೆ. ಹಾಗೆ ನೀವು ಸಹ ಗುಡ್ಡೆ ಸಾಕ್ಷಿ ಬಿಟ್ಟು ಹೋಗಬೇಕು ಎಂದು ಹೇಳಿದರು.

ಈ ವೇಳೆ ಡಿ.ಕೆ. ಶಿವಕುಮಾರ್‌, ಇತ್ತೀಚಿನ ವರ್ಷಗಳಲ್ಲಿ ಸದನಕ್ಕೆ ಅತ್ಯಂತ ಶಿಸ್ತು ತಂದವರು ಯು.ಟಿ. ಖಾದರ್‌. ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಎಸ್.ಎಂ. ಕೃಷ್ಣ ಅವರ ಬಳಿಕ ಇವರನ್ನೇ ನಾನು ಆ ರೀತಿ ನೋಡುತ್ತಿದ್ದೇನೆ ಎಂದರು. ಆಗ ಆರ್‌. ಅಶೋಕ್‌, ‘ಕೆ.ಎನ್‌. ರಾಜಣ್ಣ ಹೋದ ಮೇಲೆ ಡಿ.ಕೆ. ಶಿವಕುಮಾರ್‌ ಅವರ ಮುಖದಲ್ಲಿ ಕಳೆ ಬಂದಿದೆ’ ಎಂದು ಕಾಲೆದರು.ಈವೇಳೆ ಡಿ.ಕೆ. ಶಿವಕುಮಾರ್‌ ನಕ್ಕು ಸುಮ್ಮನಾದರು.