ಗ್ರಂಥಪಾಲಕಿಯದ್ದು ಆತ್ಮ*ಹತ್ಯೆಯಲ್ಲ; ಅದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆಪಾದಿಸಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು (ಅ.15): ಕಲಬುರಗಿಯ ಗ್ರಂಥಪಾಲಕಿಯದ್ದು ಆತ್ಮ*ಹತ್ಯೆಯಲ್ಲ; ಅದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆಪಾದಿಸಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಲಬುರಗಿಯಲ್ಲಿ ನೌಕರರು ನ್ಯಾಯಕ್ಕಾಗಿ ಮುಷ್ಕರ ನಡೆಸುತ್ತಿದ್ದಾರೆ. ಘಟನೆಯನ್ನು ಮುಚ್ಚಿ ಹಾಕುವ ಎಸ್ಐಟಿ, ಆಯೋಗ ರಚಿಸುವ ಸಾಧ್ಯತೆ ಇದೆ. ಕರೂರಿನಲ್ಲಿ ಸುಮಾರು 50 ಮಂದಿ ಸತ್ತಿದ್ದರು. ಅಲ್ಲಿ ಎಸ್‌ಐಟಿ ಮಾಡಿ ಆ ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡಿತ್ತು.

ಆದರೆ, ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ನೀಡಿದೆ. ಈ ಆತ್ಮ*ಹತ್ಯೆ ಪ್ರಕರಣದ ತನಿಖೆಯನ್ನೂ ಸಿಬಿಐಗೆ ನೀಡಬೇಕು ಎಂದು ಹೇಳಿದರು. ವೇತನ ಸಿಗದೇ ಗ್ರಂಥಪಾಲಕರ ಆತ್ಮ*ಹತ್ಯೆ, ಬಿಲ್ ಪಾವತಿ ಆಗದೇ ಗುತ್ತಿಗೆದಾರರ ಆತ್ಮ*ಹತ್ಯೆ, ವರ್ಗಾವಣೆ ಕಮಿಷನ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮ*ಹತ್ಯೆ, ನಿಗಮಗಳಲ್ಲಿ ಸರ್ಕಾರಿ ಸಾಲ ಸಿಗದೆ ಮೈಕ್ರೋ ಫೈನಾನ್ಸ್ ಕಿರುಕುಳದಲ್ಲಿ ಬಡವರ ಆತ್ಮ*ಹತ್ಯೆ, ಬರ ಮತ್ತು ಅತಿವೃಷ್ಟಿಯಿಂದ ಪರಿಹಾರ ಸಿಗದೆ 300ಕ್ಕೂ ಹೆಚ್ಚು ರೈತರ ಆತ್ಮ*ಹತ್ಯೆ ಆಗಿದೆ. ಈ ಸರ್ಕಾರ ದಿವಾಳಿ ಮಾಡಿ ಜನಸಾಮಾನ್ಯರಿಗೆ ಆತ್ಮ*ಹತ್ಯೆ ಭಾಗ್ಯವನ್ನು ಆರನೇ ಗ್ಯಾರಂಟಿಯಾಗಿ ನೀಡಿದೆ ಎಂದು ಟೀಕಿಸಿದರು.

ಇದು ಪಾಪರ್ ಸರ್ಕಾರ

ಕಲಬುರಗಿಯಲ್ಲಿ ಡೆತ್ ನೋಟ್ ಕೂಡ ಮುಚ್ಚಿ ಹಾಕಿದ್ದಾರೆ. ಕಾಂಗ್ರೆಸ್ಸಿಗರು ಎಂದಿನಂತೆ ಮನೆಗೆ ಹೋಗಿ ಹಣ ಕೊಟ್ಟು ಹೊಂದಾಣಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಇದು ಪಾಪರ್ ಸರ್ಕಾರ. ಭಿಕ್ಷಾಪಾತ್ರೆ ಹಿಡಿಯುವ ಸರ್ಕಾರ ಎಂದು ಲೇವಡಿ ಮಾಡಿದರು. ಕಲಬುರಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಮಂತ್ರಿಗಳು ಎಲ್ಲರೂ ಇರುವ ಜಿಲ್ಲೆ. ಇಲ್ಲಿನ ಗ್ರಂಥಾಲಯದಲ್ಲಿ 15 ದಿನಗಳಿಂದ ನನಗೆ ಟಿ.ವಿ. ಚಾನೆಲ್ ಬಿಲ್ ಪಾವತಿಸಿಲ್ಲ; ಪತ್ರಿಕೆಗಳಿಗೆ 15 ತಿಂಗಳಿನಿಂದ ಬಿಲ್ ಬಾಕಿ ಇದೆ. ನನ್ನ ಜೀವನ ನಡೆಸಲು, ಊಟ ಮಾಡಲು 3 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ; ಮಗನಿಗೆ ಶಾಲೆ ಶುಲ್ಕ ಕಟ್ಟಲೂ ಹಣ ನೀಡಿಲ್ಲ. ಇದು ನನ್ನ ಸಾವಲ್ಲ; ಕರ್ನಾಟಕದ ಗ್ರಂಥಾಲಯಗಳಲ್ಲಿ ಕೆಲಸದಲ್ಲಿ ಇರುವ ಲಕ್ಷಾಂತರ ಜನರ ಸಾವು ಎಂಬಂತೆ ಆತ್ಮ*ಹತ್ಯೆಗೆ ಸಂಬಂಧಿಸಿ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂದು ಅಶೋಕ್‌ ವಿವರಿಸಿದರು.