ಕೇಂದ್ರದೊಂದಿಗೆ ಘರ್ಷಣೆ ಬೇಡವೆಂದ ಎಚ್.ಡಿ. ಕುಮಾರಸ್ವಾಮಿಗೆ ರಾಜ್ಯದ ಪಾಲಿನ ಅನುದಾನ ಕೇಳುವುದು ಭಿಕ್ಷೆಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಸಂಸದರು ಅನುದಾನ ಕೇಳದೇ, ಮೋದಿ ಮನ್‌ಕಿ ಬಾತ್ ಮಾಡೋದನ್ನ ಕನ್ನಡದಲ್ಲಿ ಪೋಸ್ಟ್ ಮಾಡಿಕೊಳ್ಳೋದೇ ಇವರ ಕೆಲಸವಾಗಿದೆ ಎಂದರು.

ಬೆಂಗಳೂರು (ಅ.01): ರಾಜ್ಯದ ಬಿಜೆಪಿ ಸಂಸದರಿಗೆ ಮೋದಿ ಮುಂದೆ ಹೋಗಿ ರಾಜ್ಯಕ್ಕೆ ಅನುದಾನ ಕೇಳುವ ತಾಕತ್ತಿಲ್ಲ. ಪ್ರತಿ ತಿಂಗಳು ಮೋದಿ ಮನ್ ಕಿ ಬಾತ್‌ನಲ್ಲಿ ಹಳೋದನ್ನು ಕನ್ನಡಕ್ಕೆ ಟ್ರಾನ್ಸ್‌ಲೇಟ್ ಮಾಡಿಕೊಂಡು ವಿಡಿಯೋ ಪೋಸ್ಟ್ ಮಾಡೋದೇ ಇವರ ಕೆಲಸವಾಗಿದೆ. ಇಂಥವರು ಅನುದಾನಕ್ಕಾಗಿ ಘರ್ಷಣೆ ಮಾಡಿಕೊಳ್ಳಬೇಡಿ ಎಂದು ಹೇಳುವ ಮೂಲಕ ಕನ್ನಡಿಗರಿಗೆ ಅವಾಮನ ಮಾಡಬೇಡಿ ಎಂದು ಸಚಿವ ಪ್ರಿಯಾಂಕ ಖರ್ಗೆ ಆಕ್ರೋಶ ಹೊರಹಾಕಿದರು.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ಜೊತೆ ಘರ್ಷಣೆ ಮಾಡಿಕೊಳ್ಳಬೇಡಿ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ (ಎಚ್‌ಡಿಕೆ) ಅವರ ಹೇಳಿಕೆಗೆ ಆಕ್ರೋಶ ಹೊರಹಾಕಿದ್ದಾರೆ. ನಾವು ಯಾವಾಗ ಘರ್ಷಣೆ ಮಾಡಿಕೊಂಡಿದ್ದೇವೆ? ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಗೌರವಯುತವಾಗಿ ಭೇಟಿಯಾಗಿ ಮನವಿ ಮಾಡಿದ್ದೇವೆ. ನಾವು ಅಲ್ಲಿ ಹೋಗಿ ಯಾರಿಗಾದರೂ ಬೈದಿದ್ದೆವಾ? ಏಕವಚನದಲ್ಲಿ ಬೈದಿದ್ದೆವಾ? ಘರ್ಷಣೆ ಮಾಡಿಕೊಳ್ಳಬೇಡಿ ಅಂದರೆ ಏನು ಅರ್ಥ? ಅವರು ಹಾಕುವ ಅನ್ನ ನಾವು ತಿಂತಾ ಇದ್ದೇವಾ? ರಾಜ್ಯದ ಪಾಲಿನ ಅನುದಾನ ಕೇಳುವುದು 'ಘರ್ಷಣೆ' ಹೇಗಾಗುತ್ತದೆ. 'ಅವರೇನು ನಮಗೆ ಭಿಕ್ಷೆ ಕೊಡ್ತಾ ಇಲ್ಲ, ಕನ್ನಡಿಗರಿಗೆ ಅವಮಾನ ಮಾಡಬೇಡಿ' ಎಂದು ಬಿಜೆಪಿ ಮತ್ತು ಜೆಡಿಎಸ್ ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ.

ರಾಷ್ಟ್ರದಿಂದ ರಾಜ್ಯಗಳಲ್ಲ, ರಾಜ್ಯಗಳಿಂದ ರಾಷ್ಟ್ರ ನಡೆಯುತ್ತಿದೆ:

ಕೇಂದ್ರ ಸರ್ಕಾರದ ಸಹಾಯದ ಕುರಿತು ಮಾತನಾಡಿ, 'ನಮ್ಮ ದುಡಿಮೆ ಇದೆ. ನಮ್ಮಿಂದಲೇ ಕೇಂದ್ರ ಸರ್ಕಾರ, ರಾಷ್ಟ್ರ ನಡೀತಾ ಇದೆ. ರಾಜ್ಯಗಳಿಂದ ರಾಷ್ಟ್ರ ನಡೀತಾ ಇರೋದು, ರಾಷ್ಟ್ರದಿಂದ ರಾಜ್ಯಗಳು ನಡೆಯುತ್ತಿಲ್ಲ. ಘರ್ಷಣೆ ಮಾಡಿಕೊಳ್ಳಬೇಡಿ ಎಂದರೆ ಏನು ಅರ್ಥ? ನಾವ್ಯಾರನ್ನೂ ನಿಂದನೆ ಮಾಡಿ ಪರಿಹಾರ ಕೇಳಿಲ್ಲ. ಕರ್ನಾಟಕದಿಂದ ವರ್ಷಕ್ಕೆ ₹4.5 ಲಕ್ಷ ಕೋಟಿ ಐಟಿ ರಫ್ತು ನಡೆಯುತ್ತದೆ. ನಾವು ಕೇಂದ್ರಕ್ಕೆ ಸಂಪತ್ತನ್ನು ನೀಡುತ್ತಿದ್ದೇವೆ, ಹೀಗಿರುವಾಗ ರಾಜ್ಯದ ಪಾಲನ್ನು ಕೇಳುವುದು ಘರ್ಷಣೆಯಾಗುವುದಿಲ್ಲ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಸಂಸದರ ವಿರುದ್ಧ ವಾಗ್ದಾಳಿ:

ಇವರೆಲ್ಲರೂ ಪ್ರತಿ ತಿಂಗಳು ಬಂದು ಮೋದಿ ಅವರ ಮನ್ ಕಿ ಬಾತ್‌ ಕೇಳೋದು, ಅದನ್ನ ಕನ್ನಡದಲ್ಲಿ ಅನುವಾದ ಮಾಡಿ ಫೇಸ್‌ಬುಕ್‌ನಲ್ಲಿ ಹಾಕುವುದಷ್ಟೇ ಇವರ ಕೆಲಸ. ಕನ್ನಡಿಗರ ಹಿತಕ್ಕಾಗಿ ಕೇಂದ್ರದಿಂದ ನ್ಯಾಯಯುತ ಪಾಲನ್ನು ಕೇಳುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಯಾರೂ ಅಡ್ಡಿಪಡಿಸಬಾರದು. ಬಿಜೆಪಿ ಮತ್ತು ಜೆಡಿಎಸ್ ಸಂಸದರ ಮೌನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಜೆಡಿಎಸ್-ಬಿಜೆಪಿ ಎಂಪಿಗಳು ಮಜಾ ಮಾಡೋದು ಬಿಟ್ಟು ಕನ್ನಡಿಗರ ಪರವಾಗಿ ಮಾತನಾಡಲಿ. ಮೋದಿಯವರ ಬಳಿ, ಅಮಿತ್ ಶಾ ಬಳಿ ಹೋಗಿ ಹೇಳಲಿ. ನಿರ್ಮಲಾ ಸೀತಾರಾಮನ್ ಅವರಿಗೆ ಹೇಳಲಿ. 'ಕನ್ನಡಿಗರು ಎರಡು ಬಾರಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ, ಋಣ ತೀರಿಸುವ ಸಮಯ ಬಂದಿದೆ' ಅಂತ ಹೋಗಿ ಹೇಳಲಿ ಎಂದು ಒತ್ತಾಯಿಸಿದರು.

ಬಿಜೆಪಿಯವರು ಎಂಪಿಗಳಲ್ಲ, ಇವರು ಮನವಿ ಪತ್ರ:

ಕುಮಾರಸ್ವಾಮಿ ಮತ್ತು ಬಿಜೆಪಿಗರು ಕನ್ನಡಿಗರಲ್ಲವೇ? ನಮಗಿಂತ ಮುಂಚೆ ಅವರು ಹೋಗಿ ರಾಜ್ಯ ಸರ್ಕಾರಕ್ಕೆ ಸಪೋರ್ಟ್ ಮಾಡೋಣ ಅಂತ ಹೇಳಬೇಕು. ಇವರಿಗೆ ಮೋದಿ ಮುಂದೆ ಹೋಗಿ ಕೇಳುವ ದಮ್ಮೂ, ತಾಕತ್ತು ಇಲ್ಲ. ಇವರು ಬಂದು ಮೀಡಿಯಾ ಮುಂದೆ ನಮಗೆ ಬೈತಾರೆ. ಪ್ರಹ್ಲಾದ್ ಜೋಶಿ ಅವರು ಕನ್ನಡಿಗರ ಹಿತಕ್ಕಾಗಿ ಬರೆದ ಒಂದು ಪತ್ರ ತೋರಿಸಿ. ತೇಜಸ್ವಿ ಸೂರ್ಯ ರೈಲ್ವೇ ಮಿನಿಸ್ಟರ್ ಬಳಿ ಹೋಗುವುದು, ಪತ್ರ ಕೊಡೋದು, ಅದನ್ನು ವಿಡಿಯೋ ಮಾಡಿ ಬಿಡೋದು. ಈ ಎಂಪಿಗಳು ಎಂಪಿ (ಮೆಂಬರ್ ಆಫ್ ಪಾರ್ಲಿಮೆಂಟ್) ಅಲ್ಲ, ಮನವಿ ಪತ್ರ ಆಗಿದ್ದಾರೆ' ಎಂದು ಲೇವಡಿ ಮಾಡಿದರು.