ಮುಸ್ಲಿಮರನ್ನು ಹೆಚ್ಚು ಜನರನ್ನಾಗಿ ತೋರಿಸುವ ಪ್ರಯತ್ನದ ಭಾಗವಾಗಿ ಸಿಎಂ ಸಿದ್ದರಾಮಯ್ಯ ಅವರು ಹಿಂದೂಗಳ ಜಾತಿಯನ್ನು ಬಿಡಿಬಿಡಿಯಾಗಿ ಒಡೆದಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಮೈಸೂರು (ಸೆ.20): ಮುಸ್ಲಿಮರನ್ನು ಹೆಚ್ಚು ಜನರನ್ನಾಗಿ ತೋರಿಸುವ ಪ್ರಯತ್ನದ ಭಾಗವಾಗಿ ಸಿಎಂ ಸಿದ್ದರಾಮಯ್ಯ ಅವರು ಹಿಂದೂಗಳ ಜಾತಿಯನ್ನು ಬಿಡಿಬಿಡಿಯಾಗಿ ಒಡೆದಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ಜಾತಿ ಸಮೀಕ್ಷೆ ಕುರಿತು ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿ, ಹಿಂದೂಗಳನ್ನು ಒಡೆಯುತ್ತಿರುವುದರ ವಿರುದ್ಧ ಸ್ವಾಮೀಜಿಗಳು ಧ್ವನಿ ಎತ್ತಬೇಕು. ಕುಲಶಾಸ್ತ್ರೀಯ ಅಧ್ಯಯನದಲ್ಲಿ ಕುರುಬ ಸಮುದಾಯ ಮಾನದಂಡ ಪೊರೈಸಲು ಸಾಧ್ಯವಿಲ್ಲ. ಕಾನೂನು ಪದವೀಧರರಾದ ಸಿದ್ದರಾಮಯ್ಯ ಅವರಿಗೆ ಇದರ ಅರಿವಿದೆ. ಆದರೂ ರಾಜಕೀಯಕ್ಕಾಗಿ ಈ ದಾಳ ಉರುಳಿಸಿದ್ದಾರೆ. ಕುರ್ಚಿ ಭದ್ರ ಮಾಡಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ತಂತ್ರ ಇದು. ಕುರುಬ ಸಮುದಾಯವನ್ನು ಸಿದ್ದರಾಮಯ್ಯ ದಾರಿ ತಪ್ಪಿಸುತ್ತಿದ್ದಾರೆ. ತಂತ್ರಗಾರಿಕೆಗೆ ಸಿದ್ದರಾಮಯ್ಯ ಹೆಸರು ವಾಸಿ. ಕುರ್ಚಿ ಭದ್ರ ಮಾಡಿಕೊಳ್ಳಲು ಈ ಜಾಣ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದರು.
ಶಾಸಕ ಉದಯ್ ವಿರುದ್ಧ ತಿರುಗಿಬಿದ್ದ ಪ್ರತಾಪ ಸಿಂಹ: ತಮ್ಮ ವಿರುದ್ಧ ಕೀಳುಮಟ್ಟದಲ್ಲಿ ಟೀಕಿಸಿದ್ದ ಮದ್ದೂರು ಶಾಸಕ ಉದಯ್ ಅವರನ್ನು ಮಾಜಿ ಸಂಸದ ಪ್ರತಾಪ ಸಿಂಹ ತೀವ್ರ ತರಾಟೆಗೆ ತೆಗೆದುಕೊಂಡರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರು ಶಾಸಕ ಪೋರ್ಕಿ ಥರ ಮಾತನಾಡಿದ್ದಾನೆ. ಚಿಕ್ಕಬಳ್ಳಾಪುರದಲ್ಲಿ ಒಬ್ಬ ಪೋರ್ಕಿ ಶಾಸಕ ಇದ್ದಾನೆ. ಈಗ ಮದ್ದೂರಿನಲ್ಲೂ ಒಬ್ಬ ಸೃಷ್ಟಿಯಾಗಿದ್ದಾನೆ. ಪೋರ್ಕಿಗಳು ಮಾತ್ರ ಮಾತಾಡುವ ಭಾಷೆಯನ್ನು ಶಾಸಕರು ಬಳಸಿದ್ದಾರೆ ಎಂದು ಕಿಡಿ ಕಾರಿದರು.
ಶಾಸಕ ಉದಯ್ ಬೆಂಗಳೂರಿನ ಗಾಂಧಿ ನಗರದ ಲಾಡ್ಜ್ ನಲ್ಲಿ ಇಸ್ಪೀಟ್ ಆಡಿಸಿ ದುಡ್ಡು ಮಾಡಿದ್ದರು. ಕ್ಯಾಸಿನೋದಲ್ಲಿ ಹಣ ಮಾಡಿ ಶಾಸಕರಾಗಿದ್ದಾರೆ. ಕ್ಯಾಸಿನೋ ಟೇಬಲ್ ನಲ್ಲಿ, ಇಸ್ಪೀಟ್ ಟೇಬಲ್ ನಲ್ಲಿ ಕುಡಿದ ಮತ್ತಿನಲ್ಲಿ ಮಾತಾಡುವ ರೀತಿ ಉದಯ್ ಮಾತಾಡಿದ್ದಾರೆ. ಕ್ಯಾಸೀನೋ ಟೇಬಲ್ ಗೂ, ಇಸ್ಪೀಟ್ ಟೇಬಲ್ ಗೂ ಪತ್ರಿಕಾಗೋಷ್ಠಿ ಟೇಬಲ್ ಗೂ ವ್ಯತ್ಯಾಸ ಗೊತ್ತಿಲ್ವಾ ಉದಯ್ ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಶಾಸಕ ಉದಯ್, ನಿಮ್ಮ ಹೆಸರಿಗೆ ಮದ್ದೂರು ಬರೆದು ಕೊಟ್ಟಿದ್ದಾರಾ? ಮದ್ದೂರನ್ನು ಜೂಜೂ ಕೇಂದ್ರ ಅಂದು ಕೊಂಡಿದ್ದೀರಾ?
ಗಣೇಶನ ಮೆರವಣಿಗೆ ವೇಳೆ ಘಟನೆ ನಡೆದಾಗ ನೀವು ಅಲ್ಲಿ ಇದ್ದಿದ್ದರೆ ಜನರೆ ನಿಮಗೆ ಪಾಠ ಕಲಿಸುತ್ತಿದ್ದರು. ನನಗೂ ಎಲ್ಲಾ ಥರರ ಭಾಷೆ ಬರುತ್ತದೆ. ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಅವರು ಗುಡುಗಿದರು. ಟೀಕೆಗಳಿಗೆ ಮನೆಯವರನ್ನು ಯಾಕೆ ಎಳೆದು ತರುತ್ತೀರಾ? ನಿಮ್ಮ ಮನೆಯವರ ಬಗ್ಗೆ ನಾನು ಮಾತಾಡಿದರೆ ಹೇಗಿರುತ್ತದೆ? ಮದ್ದೂರಿಗೆ ಬಂದು ನಿಮಗೆ ಬೇಕಾದರೆ ಉತ್ತರ ಕೊಟ್ಟು ಹೋಗುತ್ತೇನೆ. ಕರೆಸಿ ನನ್ನನ್ನು ಬೇಕಾದರೆ ಅಲ್ಲಿಗೆ. ಅದಕ್ಕೂ ಮೊದಲು ಜೂಜೂಕೋರನ ರೀತಿ ಮಾತಾಡುವುದನ್ನು ಮೊದಲು ನಿಲ್ಲಿಸಿ ಎಂದು ಹರಿಹಾಯ್ದರು.
ನ್ಯಾಯಾಲಯದ ಆದೇಶಕ್ಕೆ ತಲೆಬಾಗಿದ್ದೇನೆ
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ ಆಗಿದೆ. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿದ್ದೇನೆ. ಹಗಲು ದರೋಡೆ ನಡೆದ ಪ್ರಕರಣವೇ ನ್ಯಾಯಾಲಯದಲ್ಲಿ ವಜಾ ಆಗಿತ್ತು. ಹೊಸ ಭರವಸೆಯೊಂದಿಗೆ ನ್ಯಾಯಾಲಯದ ಮೆಟ್ಟಿಲು ಏರಿದೆ. ನ್ಯಾಯಾಲಯ ನನ್ನ ಅರ್ಜಿಯನ್ನು ಜಾತ್ಯಾತೀತ ದುರ್ಬಿನ್ ಹಾಕಿಕೊಂಡು ನೋಡಿತು. ಆದ್ದರಿಂದ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿದ್ದೇನೆ ಎಂದರು.
