ಆನ್ಲೈನ್‌ ಗೇಮ್‌ಗಳಿಂದ ಉಂಟಾಗುತ್ತಿರುವ ಅಪಾಯಗಳನ್ನು ಮನಗಂಡು ಜು.8ರಂದು ‘ಆನ್‌ಲೈನ್ ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್ ನಿಯಂತ್ರಣ ಮಸೂದೆ, 2025’ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.

ನವದೆಹಲಿ (ಆ.21): ಆನ್‌ಲೈನ್‌ ಗೇಮ್‌ಗಳ ಮೇಲೆ ನಿಯಂತ್ರಣ ಹೇರುವ ಮಹತ್ವದ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರಕಿರುವ ಬಗ್ಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿಯವರ ಸರ್ಕಾರ ಕೈಗೊಂಡ ಈ ಮಹತ್ವದ ಕ್ರಮದಿಂದ ತಮ್ಮ ಬಹುದಿನಗಳ ಪ್ರಯತ್ನಕ್ಕೆ ಫಲ ದೊರಕಿದಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಡಾ. ಸುಧಾಕರ್‌, ಕಳೆದ ಜುಲೈನಲ್ಲೇ ಲೋಕಸಭೆಯಲ್ಲಿ ಈ ಕುರಿತು ಖಾಸಗಿ ಮಸೂದೆ ಮಂಡಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆನ್ಲೈನ್‌ ಗೇಮ್‌ಗಳಿಂದ ಉಂಟಾಗುತ್ತಿರುವ ಅಪಾಯಗಳನ್ನು ಮನಗಂಡು ಜು.8ರಂದು ‘ಆನ್‌ಲೈನ್ ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್ ನಿಯಂತ್ರಣ ಮಸೂದೆ, 2025’ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಅದರ ಮುಂದುವರಿದ ಭಾಗವೆಂಬಂತೆ ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಗೆ ಅಂಗೀಕಾರ ದೊರಕಿದೆ.

ಖಾಸಗಿ ಮಸೂದೆಯಲ್ಲೇನಿತ್ತು?: ವಿಂಝೋ ಗೇಮ್ಸ್ ಮತ್ತು ಇಂಟರ್ ಆ್ಯಕ್ಟಿವ್ ಎಂಟರ್ಟೈನ್ಮೆಂಟ್ ಮತ್ತು ಇನ್ನೋವೇಶನ್ ಕೌನ್ಸಿಲ್ ವರದಿಯ ಪ್ರಕಾರ, ಭಾರತದ ಗೇಮಿಂಗ್ ಮಾರುಕಟ್ಟೆಯು 2024ರಲ್ಲಿ 31,500 ಕೋಟಿ ರು. ಮೌಲ್ಯ ತಲುಪಿದೆ. 2029ರ ವೇಳೆಗೆ ಇದು 78,000 ಕೋಟಿ ರು.ಗೆ ಏರುವ ನಿರೀಕ್ಷೆಯಿದೆ. ಪ್ರಸ್ತುತ, ಭಾರತವು ಜಾಗತಿಕ ಗೇಮಿಂಗ್ ಬಳಕೆದಾರರ ಪೈಕಿ ಶೇ.20ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಭಾರತದಲ್ಲಿ ಸರಿಸುಮಾರು 860 ಕೋಟಿ ಆನ್ಲೈನ್ ಗೇಮಿಂಗ್‌ ಆ್ಯಪ್‌ಗಳು ಡೌನ್‌ಲೋಡ್‌ ಆಗಿವೆ. ಇದು ಅಮೆರಿಕ ಮತ್ತು ಬ್ರೆಜಿಲ್‌ನ ಒಟ್ಟು ಮೊತ್ತವನ್ನು ಮೀರಿಸುತ್ತದೆ.

ಪ್ರತಿದಿನ, ಲಕ್ಷಾಂತರ ಜನರು ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಸೈಬರ್ ಅಪರಾಧಿಗಳು ಆನ್‌ಲೈನ್ ಜೂಜು, ಗೇಮಿಂಗ್ ಮತ್ತು ಇ-ಸ್ಪೋರ್ಟ್‌ಗಳಲ್ಲಿ ಇಂಥ ವ್ಯಕ್ತಿಗಳ ಹಿತಾಸಕ್ತಿಯನ್ನು ಗಮನಿಸಿ ಆರ್ಥಿಕ ವಂಚನೆ ಮಾಡುತ್ತಿದ್ದಾರೆ. ಹಾಗಾಗಿ ಆನ್‌ಲೈನ್ ಜೂಜಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಇಂಥ ಗೇಮ್‌ಗಳಿಗೆ ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯ ಮೂಲಕ ಕಟ್ಟುನಿಟ್ಟಾದ ಪರವಾನಗಿ ಕಾರ್ಯವಿಧಾನವನ್ನು ಜಾರಿಗೊಳಿಸಬೇಕು ಎಂದು ಡಾ. ಸುಧಾಕರ್ ಅವರು ಮಂಡಿಸಿದ ಮಸೂದೆಯಲ್ಲಿ ವಿವರಿಸಲಾಗಿತ್ತು.