ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಂವಿಧಾನ ಬದ್ಧವಾಗಿ ಜಾತಿ ಗಣತಿ ಮಾಡುವ ಅಧಿಕಾರವಿಲ್ಲ, ಆದರೂ ಜಾತಿ ಗಣತಿ ಮಾಡಲು ಹೊರಟಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು. 2013-18ರವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್, ಜಾತಿ ಗಣತಿ ನಡೆಸಿದೆ.

ವಿಜಯಪುರ (ಸೆ.19): ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಂವಿಧಾನ ಬದ್ಧವಾಗಿ ಜಾತಿ ಗಣತಿ ಮಾಡುವ ಅಧಿಕಾರವಿಲ್ಲ, ಆದರೂ ಜಾತಿ ಗಣತಿ ಮಾಡಲು ಹೊರಟಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು. ಹೋಬಳಿಯ ವೆಂಕಟಗಿರಿಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013-18ರವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್, ಜಾತಿ ಗಣತಿ ನಡೆಸಿದೆ. ಆದರೂ ಈಗ ಪುನಃ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯ ನೆಪ ಇಟ್ಟುಕೊಂಡು ಪುನಃ ಜಾತಿ ಗಣತಿ ಮಾಡಲು ಹೊರಟಿರುವುದು ಹಿಂದೂಗಳನ್ನು ಒಡೆಯುವ ಉದ್ದೇಶ ಬಿಟ್ಟರೆ ಬೇರೇನೂ ಇಲ್ಲ.

ರಾಜ್ಯ ಸರ್ಕಾರ ಭಾಗ್ಯಗಳ ಹೆಸರಿನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಬೇಕಾಗಿದ್ದ 15 ಸಾವಿರ ಕೋಟಿ ರು. ಅನ್ಯಾಯ ಮಾಡುತ್ತಿದೆ. ಎಲ್ಲಾ ಅಭಿವೃದ್ಧಿ ನಿಗಮಗಳಿಗೆ ಮೀಸಲಿಡಬೇಕಾಗಿರುವ ಅನುದಾನವನ್ನು ಪ್ರತಿ ವರ್ಷ ಕಡಿಮೆ ಮಾಡಿಕೊಂಡು ಬರುತ್ತಿದ್ದಾರೆ. ಅಹಿಂದಾ ಬಗ್ಗೆ ಮಾತನಾಡುವವರಿಗೆ ಬದ್ಧತೆಯಿಲ್ಲ. ಜಾತಿ ಗಣತಿಯ ಕುರಿತು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸದನದಲ್ಲಿ ಪ್ರಶ್ನೆ ಮಾಡಿ ನ್ಯಾಯಾಲಯಕ್ಕೆ ಹೋದರೆ, ಸಾಮಾಜಿಕ, ಶೈಕ್ಷಣಿಕ ಗಣತಿ ಎಂದು ಹೇಳಿದ್ದಾರೆ. ಹಾಗಾದರೆ, ಜಾತಿ, ಉಪಜಾತಿ ಹಾಗೂ ನಾಸ್ತಿಕ ಎಂಬ ಕಾಲಂ ಏನಕ್ಕಿಟ್ಟಿದ್ದಾರೆ? ಪರಿಶಿಷ್ಟ ಜಾತಿ ಕ್ರಿಶ್ಚಿಯನ್, ಪರಿಶಿಷ್ಟ ಪಂಗಡ ಇಸ್ಲಾಂ ಹೀಗೆ ಒಡೆದು ಆಳುವಂತಹ ನೀತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ತೆರಿಗೆ ಜಾಸ್ತಿ

ಬಡವರಿಗೆ ತೆರಿಗೆ ಜಾಸ್ತಿ ಮಾಡಿದ್ದಾರೆ. 8 ಬಾರಿ ಹಾಲಿನ ದರ ಹೆಚ್ಚಿಸಿದ್ದಾರೆ. ರೈತರ ಜಮೀನು ಪರಬಾರೆ ಮಾಡಲು 250ರಷ್ಟು ತೆರಿಗೆ ಜಾಸ್ತಿ ಮಾಡಿದ್ದಾರೆ. ನೀರು, ಬಸ್ ದರ, ವಿದ್ಯುತ್ ಬಿಲ್ ಹೆಚ್ಚು ಮಾಡಿದ್ದಾರೆ. ಕೇಂದ್ರ ಸರ್ಕಾರ ಜಿಎಸ್‌ಟಿ ಶೇ.5ಕ್ಕೆ ತಂದಿದ್ದೇವೆ. ಕಾಂಗ್ರೆಸ್ ಸರ್ಕಾರ ಹೆಚ್ಚು ಮಾಡಿದೆ. ಜನೌಷಧಿ ಕೇಂದ್ರಗಳನ್ನು ಮುಚ್ಚಿದ್ದಾರೆ. ರೈತರು, ಜನಸಾಮಾನ್ಯರ ಬಗ್ಗೆ ಚಿಂತನೆ ಇದೆಯಾ? ಇಂತಹ ಸರ್ಕಾರದ ಬಗ್ಗೆ ಜನರು ಬೇಸತ್ತಿದ್ದಾರೆ ಎಂದು ಕಿಡಿಕಾರಿದರು.