ಈ ರಾಜ್ಯದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಸರ್ಕಾರ ನಾಗರಿಕರ ಹಕ್ಕನ್ನು ಸಂಪೂರ್ಣ ಮೊಟಕುಗೊಳಿಸಿದೆ. ಕಾನೂನಿನಲ್ಲಿ ರಾಜಕೀಯ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದು ಅಂತಿದೆ ಎಂದು ಸಂಸದ ಬೊಮ್ಮಾಯಿ ಹೇಳಿದರು.

ಹಾವೇರಿ (ಅ.18): ಈ ರಾಜ್ಯದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಸರ್ಕಾರ ನಾಗರಿಕರ ಹಕ್ಕನ್ನು ಸಂಪೂರ್ಣ ಮೊಟಕುಗೊಳಿಸಿದೆ. ಕಾನೂನಿನಲ್ಲಿ ರಾಜಕೀಯ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದು ಅಂತಿದೆ. ಆರೆಸ್ಸೆಸ್‌ ಯಾವುದೇ ರಾಜಕೀಯ ಚಟುವಟಿಕೆಯ ಸಂಘಟನೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್‌ ಪಥ ಸಂಚಲನದಲ್ಲಿ ಭಾಗವಹಿಸಿದ ಸರಕಾರಿ ನೌಕರರು ಅಮಾನತು ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಆರೆಸ್ಸೆಸ್‌ ಸದಸ್ಯರು. ಯಾವ ಕೋರ್ಟ್ ಆದೇಶದಲ್ಲಿ ಸಂಘ ಸಂಸ್ಥೆ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದಂತಿದೆ ಎಂದು ಪ್ರಶ್ನಿಸಿದರು. ರಾಜ್ಯ ಸರಕಾರಕ್ಕೆ ಆರೆಸ್ಸೆಸ್‌ ಸಂಘಟನೆಯನ್ನು ಏನೂ ಮಾಡಲು ಆಗುವುದಿಲ್ಲ. ಈ ದೇಶದ ಸಿದ್ಧಾಂತವೇ ಆರೆಸ್ಸೆಸ್‌ ಸಿದ್ದಾಂತವಾಗಿದೆ. ಇದು ಹಿಂದೂಗಳಿಗೆ ರಾಷ್ಟ್ರ ವಿರೋಧಿ ಸರ್ಕಾರವಾಗಿ ಕಾಣುತ್ತಿದೆ‌ ಎಂದು ಹೇಳಿದರು.

ಅಕ್ರಮ ಚಟುವಟಿಕೆಗಳಿಗೆ ಸರ್ಕಾರದ ಆರ್ಶೀರ್ವಾದವೇ ಕಾರಣ

ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಕಾನೂನು ವ್ಯವಸ್ಥೆ ಸಂಪೂರ್ಣ ಹದಗಟ್ಟಿದೆ. ಅಕ್ರಮ ಚಟುವಟಿಕೆಗಳಿಗೆ ಸರ್ಕಾರದ ಆರ್ಶೀರ್ವಾದವೇ ಕಾರಣ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಅವಳಿ ತಾಲೂಕಲ್ಲಿ ಕಳ್ಳತನ, ಕೊಲೆ, ಸುಲಿಗೆ ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಕಳೆದ ಒಂದು ವರ್ಷದಿಂದ ಪಕ್ಷದ ಚಟುವಟಿಕೆಗಳು ಕುಂಠಿತಗೊಂಡಿವೆ, ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಬೆಳೆಗಳಿಗೆ ಅಧಿಕವಾಗಿ ಹಾನಿಯಾಗಿದ್ದು, ಕೇವಲ 16000 ಹೆಕ್ಟೇರ್ ಪ್ರದೇಶ ಮಾತ್ರ ಹಾನಿಯಾಗಿದೆ ಎಂದು ತೋರಿಸಲಾಗಿದೆ.

ಹಾನಿಯಾದ ರೈತರಿಗೆ ಅನ್ಯಾಯವಾಗುತ್ತಿದ್ದು, ತಕ್ಷಣ ಮರು ಸಮೀಕ್ಷೆ ನಡೆಸಿ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಬೇಕು. ವಿವಿಧ ಘಟಕದ ಪದಾಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿ ನಿರ್ವಹಿಸಬೇಕು ಎಂದರು.ಬಿಜೆಪಿ ಮುಖಂಡ ಭರತ ಬೊಮ್ಮಾಯಿ, ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ಸವಣೂರ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಮುಖಂಡರಾದ ಶಿವಾನಂದ ಮ್ಯಾಗೇರಿ, ಮಲ್ಲೇಶಪ್ಪ ಹರಿಜನ, ಶಿವಾನಂದ ಸೊಬರದ, ರವಿ ಕುಡವಕ್ಕಲಿಗೇರ, ನರಹರಿ ಕಟ್ಟಿ, ಹೊನ್ನಪ್ಪ ಹೂಗಾರ ಇದ್ದರು.