ಎಂಎಲ್‌ಸಿ ರಮೇಶ್ ಬಾಬು ಅವರು, ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್ ಪತ್ರಕ್ಕೆ ವೈಯಕ್ತಿಕ ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜಿಬಿಎ ಸಭೆಯ ವಿವಾದವನ್ನು ಅನಗತ್ಯವಾಗಿ ಬೆಳೆಸಲಾಗುತ್ತಿದೆ ಬಿಜೆಪಿ ವಿವಾದಗಳನ್ನು ಮರೆತು ಮಾತನಾಡುತ್ತಿದೆ ಎಂದರು.
ಬೆಂಗಳೂರು: ಕಳೆದ ಒಂದು ವಾರದಿಂದ ಬಿಜೆಪಿ ಹಾಗೂ ಸಂಘಪರಿವಾರ ನಾಯಕರು ಕಾಂಗ್ರೆಸ್ ವಿರುದ್ಧ ನಿರಂತರ ಟೀಕೆಗಳನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಎಂಎಲ್‌ಸಿ ರಮೇಶ್ ಬಾಬು ಅವರು ಸುದ್ದಿಗೋಷ್ಠಿ ನಡೆಸಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಅವರು ಮಾತನಾಡುತ್ತಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಾಸಕರನ್ನು ವೇದಿಕೆಗೆ ಆಹ್ವಾನಿಸಿದ ಸನ್ನಿವೇಶವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ವಿಸ್ತರಿಸಿ ಕಾಂಗ್ರೆಸ್ ವಿರುದ್ಧ ಸುಮ್ಮನೇ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಬಿಜೆಪಿಗರ ಭಾಷೆ ಬಳಕೆಯಿಂದಲೇ ಗೊತ್ತಾಗ್ತಿದೆ
ರಮೇಶ್ ಬಾಬು ಅವರು ಬಿಜೆಪಿ ನಾಯಕರು ಬಳಸಿದ ಭಾಷೆಯನ್ನು ತೀವ್ರವಾಗಿ ಟೀಕಿಸಿದರು. “ಬಿಜೆಪಿಗರು ಮಾತನಾಡುವ ಭಾಷೆ ಅವರ ತರಬೇತಿಯ ಮಟ್ಟವನ್ನೇ ತೋರಿಸುತ್ತಿದೆ. ಡಿಕೆಶಿ ಅವರು ವೇದಿಕೆಗೆ ಕರೆದಾಗ ಕೆಲವರು ಸಾಂಕೇತಿಕವಾಗಿ ಕುಳಿತರು. ಆದರೆ ‘ಕರಿ ಟೋಪಿ’ ಹಾಗೂ ‘ಚೆಡ್ಡಿ’ ಎಲ್ಲಿಂದ ಬಂದವು ಎಂಬುದರ ಬಗ್ಗೆ ಅವರಿಗೆ ತಾನೆ ಗೊತ್ತಿಲ್ಲ. ಮೊದಲು ಅದರ ಮೂಲ ತಿಳಿದುಕೊಂಡು ನಂತರ ಟೀಕೆ ಮಾಡಲಿ,” ಎಂದು ಹೇಳಿದರು.
ಆರ್‌ಎಸ್‌ಎಸ್ ಕುರಿತ ಖರ್ಗೆಯ ಪತ್ರ, ಉತ್ತರದ ಬದಲು ವೈಯಕ್ತಿಕ ಟೀಕೆ
“ಇಂದಿನ ಅತ್ಯಂತ ಗಂಭೀರ ವಿಷಯ ಎಂದರೆ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಬರೆದಿರುವ ಪತ್ರ. ಅದಕ್ಕೆ ಬಿಜೆಪಿ ಉತ್ತರ ನೀಡಬೇಕಿತ್ತು. ಆದರೆ ಅವರು ಅದಕ್ಕೆ ತಕ್ಕ ಸಮರ್ಥ ಪ್ರತಿಕ್ರಿಯೆ ನೀಡುವ ಬದಲು, ವೈಯಕ್ತಿಕ ದಾಳಿಗೆ ಇಳಿದಿದ್ದಾರೆ,” ಎಂದು ರಮೇಶ್ ಬಾಬು ಹೇಳಿದರು.
ಅವರು ಮುಂದುವರೆದು, “ಚೀಟಿ ರವಿ (ಸಿಟಿ ರವಿ) ಮಾತನಾಡುತ್ತಾರೆ, ಅವರ ವಿರುದ್ಧದ ಹಳೆಯ ವಿವಾದಗಳು ಎಲ್ಲರಿಗೂ ಗೊತ್ತು. ₹26 ಕೋಟಿಯ ಅಕ್ರಮ ಆರೋಪ ಹೊತ್ತಿರುವ ವಿಜಯೇಂದ್ರ ಮಾತನಾಡುತ್ತಾರೆ. ಸದನದಲ್ಲಿ ಅಸಭ್ಯ ದೃಶ್ಯಾವಳಿಗಳನ್ನು ನೋಡಿದ ಮಾಜಿ ಸಚಿವ ಸಿ.ಸಿ. ಪಾಟೀಲ್ ಇದ್ದಾರೆ. ನೋಟ್ ಮಷೀನ್ ಈಶ್ವರಪ್ಪ ಇದ್ದಾರೆ. ಇವರೆಲ್ಲರೂ ಸೇರಿ ಖರ್ಗೆಯ ವಿರುದ್ಧ ಮುಗಿಬಿದ್ದಿದ್ದಾರೆ,” ಎಂದು ಕಿಡಿಕಾರಿದರು.
RSS ಕುರಿತು ಖರ್ಗೆಯ ಪತ್ರ ಓದಿ
ಚಲವಾದಿ ಅವರು ದಲಿತ ಎಂಬ ಪದ ಬಳಕೆ ಬಗ್ಗೆ ಹೇಳಿದ್ದು ನಿಮ್ಮ ಮೇಲೂ ಅನ್ವಯಿಸುತ್ತದೆ. ನಿಮಗೆ ಸಿದ್ಧಾಂತಗಳಿದ್ದರೆ, ಖರ್ಗೆಯವರು ಬರೆದ ಪತ್ರವನ್ನು ಮತ್ತೆ ಓದಿ. ಅವರು ಸ್ಪಷ್ಟವಾಗಿ ಬರೆದಿದ್ದಾರೆ.‘ಆರ್‌ಎಸ್‌ಎಸ್ ಹೆಸರಿನಡಿ ರಾಜಕೀಯ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಿ’ ಎಂದು. ಅದಕ್ಕಾಗಿ ಸಿಎಂ ಅವರು ವರದಿ ತರಿಸಬೇಕೆಂದು ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು. ರಮೇಶ್ ಬಾಬು ಅವರು ಬಿಜೆಪಿ ನಾಯಕರ ಬಗ್ಗೆ ಕಿಡಿಕಾರುತ್ತಾ, “ನೀವೆಲ್ಲ ನಾಥೂರಾಮ್ ಗೋಡ್ಸೆಯ ವಂಶಸ್ಥರು ನಿಮ್ಮ ಡಿಎನ್‌ಎಯಲ್ಲಿ ಅದೇ ತತ್ವ ಇದೆ ಎಂದರು.
ವಿರೋಧ ಪಕ್ಷದ ನಾಯಕರ ಟೀಕೆಗೆ ಕಟುವಾಗಿ ಪ್ರತಿಕ್ರಿಯೆ
ರಮೇಶ್ ಬಾಬು ಅವರು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆ ನೀಡಿದರು. “ಅಶೋಕ್ ಅವರು ಸರ್ಕಾರಕ್ಕೆ ದಮ್ಮು ಇಲ್ಲ ಎಂದು ಹೇಳುತ್ತಾರೆ. ಆದರೆ ವಿರೋಧ ಪಕ್ಷದ ವೈಫಲ್ಯ ನಾಯಕರಲ್ಲಿ ಅಶೋಕ್ ಅವರೇ ಮೊದಲಿಗರು. ಅವರು ಸದನದಲ್ಲಿ ಜನರ ಪರವಾಗಿ ಮಾತನಾಡಬೇಕಾದರೆ, ರೇವಣ್ಣ ಅವರೇ ನಿಂಬೆಹಣ್ಣು ತರಬೇಕೆಂದು ಹೇಳುತ್ತಾರೆ,” ಎಂದು ಟೀಕಿಸಿದರು. ಇಂದಿರಾ ಗಾಂಧಿ ಅವರ ಕಾಲದಲ್ಲಿ RSS ನಿಷೇಧಿತವಾಗಿತ್ತು. ಇಂದು ವಿರೋಧ ಪಕ್ಷದ ನಾಯಕರು ಸಿಎಂಗೆ ಏಕವಚನದಲ್ಲಿ ಪ್ರಶ್ನೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಕೆಳ ಮಟ್ಟದ ಭಾಷೆ ಬಳಸಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದರು.
ನೀಲಿ ಚಿತ್ರದ ನಾಯಕರು, ಸಿಟಿ ರವಿ, ಮುನಿರತ್ನ
ಇಲ್ಲಿಯವರೆಗೂ ಸಮರ್ಥ ಉತ್ತರ ನೀಡದ ಅಶ್ವತ್ಥ ನಾರಾಯಣ ಕೂಡ ಮಾತನಾಡುತ್ತಿದ್ದಾರೆ. ನೀಲಿ ಚಿತ್ರದ ನಾಯಕ ಸಿ.ಸಿ. ಪಾಟೀಲ್, ಮುನಿರತ್ನ ಮುಂತಾದವರನ್ನು ಮುಂದಿಟ್ಟುಕೊಂಡು ಬಿಜೆಪಿ ದಾಳಿ ನಡೆಸುತ್ತಿದೆ ಎಂದು ರಮೇಶ್ ಬಾಬು ವ್ಯಂಗ್ಯವಾಡಿದರು. ಜಗನ್ನಾಥ ಭವನದಲ್ಲಿ ಅರ್ಧ ಗಂಟೆ ಮಾತನಾಡುತ್ತೀರಿ. ಮೊದಲು ಆ ಜಗನ್ನಾಥ ಯಾರು ಎಂದು ತಿಳಿದುಕೊಳ್ಳಿ ಎಂದು ಕಟುವಾಗಿ ಹೇಳಿದರು.
ಎಂಎಲ್‌ಸಿ ರಮೇಶ್ ಬಾಬು ಅವರ ಹೇಳಿಕೆಗಳಲ್ಲಿ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆಯ ಪತ್ರಕ್ಕೆ ರಾಜಕೀಯವಾಗಿ ಸಮರ್ಥ ಉತ್ತರ ನೀಡದಿರುವುದು, ಹಾಗೂ ಅಸಭ್ಯ ಭಾಷೆ ಮತ್ತು ವಿವಾದಾಸ್ಪದ ನಾಯಕರ ಮೂಲಕ ದಾಳಿ ನಡೆಸುತ್ತಿರುವ ಬಗೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಜಿಬಿಎ ವಿವಾದದ ಸನ್ನಿವೇಶದಲ್ಲಿಯೇ ಇದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
