ಸಮುದಾಯದ ಸಭೆಯಲ್ಲಿ ಕುಳಿತು ವಿಜಯೇಂದ್ರ ನನ್ನ ಜತೆ ಸಂಪರ್ಕದಲ್ಲಿದ್ದಾರೆ ಎಂದು ಯಾರು ಹೇಳಿದ್ದರು? ನಮಗೆ ವಿಜಯೇಂದ್ರ ಸೇರಿ ಯಾರೂ ಸಂಪರ್ಕ ಇಲ್ಲ. ಹೀಗಾಗಿ ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಸತ್ಯಾಂಶ ಹೊರಗೆ ಬರುತ್ತದೆ ಎಂದರು.
ಬೆಂಗಳೂರು (ಸೆ.03): ‘ಬಿ.ವೈ. ವಿಜಯೇಂದ್ರ ನನ್ನ ಜತೆ ಸಂಪರ್ಕದಲ್ಲಿದ್ದಾರೆ, ನನಗೆ ಫೋನ್ ಮಾಡುತ್ತಿದ್ದಾರೆ ಎಂದು ಹೇಳಿರುವುದು ಯಾರು ಎಂದು ಹೇಳಲಿ. ಬ್ರೈನ್‌ಮ್ಯಾಪಿಂಗ್‌ಗೆ ನಾನು ಸಿದ್ಧನಿದ್ದೇನೆ. ಇಬ್ಬರಿಗೂ ಒಟ್ಟಿಗೇ ಬ್ರೈನ್ ಮ್ಯಾಪಿಂಗ್ ಮಾಡಿಸಲಿ. ಬಿಜೆಪಿಗೆ ಯಾರು ಹೋಗುತ್ತಾರೆ ಗೊತ್ತಾಗಲಿದೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಸಮುದಾಯದ ಸಭೆಯಲ್ಲಿ ಕುಳಿತು ವಿಜಯೇಂದ್ರ ನನ್ನ ಜತೆ ಸಂಪರ್ಕದಲ್ಲಿದ್ದಾರೆ ಎಂದು ಯಾರು ಹೇಳಿದ್ದರು? ನಮಗೆ ವಿಜಯೇಂದ್ರ ಸೇರಿ ಯಾರೂ ಸಂಪರ್ಕ ಇಲ್ಲ. ಹೀಗಾಗಿ ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಸತ್ಯಾಂಶ ಹೊರಗೆ ಬರುತ್ತದೆ ಎಂದರು.
ತೆವಲಿಗೆ ಮಾತನಾಡುವುದು ಬೇಡ ಎಂಬ ರಾಜೇಂದ್ರ ಹೇಳಿಕೆಗೆ, ‘ತೆವಲಿಗೆ ಮಾತಾಡಿ ಅಧಿಕಾರ ಕಳೆದುಕೊಂಡವರು ಯಾರು? ನಾನು ಕಳೆದುಕೊಂಡಿದ್ದೇನಾ? ಡಾ.ಜಿ. ಪರಮೇಶ್ವರ್ ಅವರು ಡಿಸಿಎಂ ಆಗಿದ್ದಾಗ ಝೀರೋ ಟ್ರಾಫಿಕ್ ಮಿನಿಸ್ಟರ್ ಎಂದು ನಾನು ಕರೆದಿದ್ದೆನಾ?’ ಎಂದು ತಿರುಗೇಟು ನೀಡಿದರು.
ಇನ್ನು ಸೆಪ್ಟೆಂಬರ್ ಕ್ರಾಂತಿ ವಿಚಾರವಾಗಿ ನಾನು ಮಾತನಾಡಿಲ್ಲ. ಅದನ್ನು ಮಾತನಾಡಿರುವುದು ರಾಜಣ್ಣ. ನಾನು ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎಂದಿದ್ದೇನೆಯೇ ಹೊರತು ಕ್ರಾಂತಿ ಆಗುತ್ತದೆ ಎಂದಿಲ್ಲ. ಡಿ.ಕೆ. ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೋರಿ ದೊಡ್ಡತನ ಮೆರೆದಿದ್ದಾಗಿದೆ. ನಿಮ್ಮ ರೀತಿಯಲ್ಲಿ ನಾವು ಯಾವ ಪಕ್ಷದ ಅಧೀನದಲ್ಲೂ ಇಲ್ಲ ಎಂದು ಶಿವಕುಮಾರ್ ಅವರು ಹೇಳಿಲ್ಲ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.
