ಯಶಸ್ವಿ ದಸರಾ ಮಾಡಿದ್ದೇವೆ. ಈ ಬಾರಿ ಜನರ ದಸರಾ ಆಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ। ಎಚ್.ಸಿ.ಮಹದೇವಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ದಿನದಲ್ಲಿ ಒಂದು ಸಾವಿರ ಟನ್ ಕಸ ಸಂಗ್ರಹ ಆಗಿತ್ತು.
ಮೈಸೂರು (ಅ.05): ಯಶಸ್ವಿ ದಸರಾ ಮಾಡಿದ್ದೇವೆ. ಈ ಬಾರಿ ಜನರ ದಸರಾ ಆಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ। ಎಚ್.ಸಿ.ಮಹದೇವಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ದಿನದಲ್ಲಿ ಒಂದು ಸಾವಿರ ಟನ್ ಕಸ ಸಂಗ್ರಹ ಆಗಿತ್ತು. ಪೌರಕಾರ್ಮಿಕರ ಪರಿಶ್ರಮದಿಂದ ಇಡೀ ನಗರ ಸ್ವಚ್ಛವಾಗಿದೆ. ಪೌರಕಾರ್ಮಿಕರಿಗೆ ನನ್ನ ಮೊದಲ ಕೃತಜ್ಞತೆಗಳು ಎಂದು ಹೇಳಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲರು ತಮ್ಮ ಮನೆಯ ಹಬ್ಬದ ರೀತಿ ದಸರಾ ಮಾಡಿದರು. ಆರಂಭದಲ್ಲಿ ಸ್ವಲ್ಪ ಗೊಂದಲ ಇತ್ತು. ಅದನ್ನೆಲ್ಲ ಬಗೆಹರಿಸಿಕೊಂಡು ಯಶಸ್ವಿಯಾಗಿ ದಸರಾ ಮಾಡಿದ್ದೇವೆ. ನಮಗೆ ದಸರಾದಲ್ಲಿ ಯಾವ ರಾಜಕೀಯ ಅಜೆಂಡಾ ಇರಲಿಲ್ಲ. ಹೀಗಾಗಿ, ಆತಂಕವಿಲ್ಲದೆ ದಸರಾ ಮಾಡಿದ್ದೇವೆ ಎಂದು ಹೇಳಿದರು.
ತಮ್ಮ ಮೊಮ್ಮಗನನ್ನು ತೆರೆದ ಜೀಪ್ ನಲ್ಲಿ ಕರೆದುಕೊಂಡ ಹೋದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಲ್ಲಿ ಯಾವ ಪ್ರೋಟೋಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೋಕಾಲ್ ವ್ಯಾಪ್ತಿಗೆ ಬರುವುದೇ ಇಲ್ಲ. ಅದು ಪೇರೆಡ್ ಅಲ್ಲ ಮತ್ತು ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಕೆಆರ್‌ಎಸ್ ಕಟ್ಟಿಸಿದ್ದೇ ಟಿಪ್ಪು ಅಂತ ಹೇಳಿಲ್ಲ
ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್)ವನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು ಎಂದು ನಾನೆಲ್ಲೂ ಹೇಳಿಲ್ಲ. ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ನನ್ನ ಹೇಳಿಕೆಯನ್ನು ತಿರುಚಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ತುಂಬಾ ದೊಡ್ಡದಿದೆ. ಅವರೇ ಕೆಆರ್‌ಎಸ್ ಅಣೆಕಟ್ಟನ್ನೂ ನಿರ್ಮಿಸಿದ್ದರು. ಟಿಪ್ಪು ಸುಲ್ತಾನ್ ಅವರು ಕಟ್ಟಿಸಿದ್ದರು ಎಂದು ನಾನೆಲ್ಲೂ ಹೇಳಿಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1911ರಲ್ಲಿ ಕೆಆರ್‌ಎಸ್ ನಿರ್ಮಾಣ ಕಾರ್ಯ ಶುರು ಮಾಡಿದ್ದರು. ಆ ವೇಳೆ ಅಲ್ಲಿ ಒಂದು ಶಿಲಾಶಾಸನ ಪತ್ತೆಯಾಗಿತ್ತು. 1794ನೇ ಇಸವಿಯ ಶಿಲಾಶಾಸನದಲ್ಲಿ ಪರ್ಷಿಯನ್ ಬರಹ ಇತ್ತು. ಇದನ್ನು ಕನ್ನಡ ಮತ್ತು ಇಂಗ್ಲೀಷ್‌ಗೆ ತರ್ಜುಮೆ ಮಾಡಿ ಈಗಲೂ ಅಲ್ಲೇ ಇಡಲಾಗಿದೆ. ಇದರಿಂದ ಟಿಪ್ಪು ಸುಲ್ತಾನ್ ಅವರಿಗೂ ಕಾವೇರಿ ನೀರನ್ನು ನಿಲ್ಲಿಸಿ ರೈತರ ಉಪಯೋಗಕ್ಕೆ ಏನಾದರೂ ಮಾಡಬೇಕು ಎಂಬ ಯೋಚನೆ ಇತ್ತು ಎಂಬುದು ಗೊತ್ತಾಗುತ್ತದೆ. ಅದನ್ನಷ್ಟೇ ನಾನು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
