HC Mahadevappa Defends Caste Census Hindu religion ಜಾತಿಗಣತಿ ಮೂಲಕ ಹಿಂದು ಧರ್ಮ ಒಡೆಯಲಾಗುತ್ತಿದೆ ಎಂಬ ಬಿಜೆಪಿಯ ಆರೋಪವನ್ನು ಸಚಿವ ಎಚ್‌ಸಿ ಮಹದೇವಪ್ಪ ತಳ್ಳಿಹಾಕಿದ್ದಾರೆ. ಇದು ಜಾತಿಗಳ ಸ್ಥಿತಿಗತಿ ಅಧ್ಯಯನವೇ ಹೊರತು ಧರ್ಮ ಒಡೆಯುವ ಕೆಲಸವಲ್ಲ ಎಂದಿದ್ದಾರೆ. 

ಮೈಸೂರು (ಸೆ.20): ಜಾತಿಗಣತಿ ಮೂಲಕ ಸಿದ್ಧರಾಮಯ್ಯ ಹಿಂದು ಧರ್ಮ ಒಡೆಯುತ್ತಿದ್ದಾರೆ ಎನ್ನುವ ಆರೋಪದ ಬಗ್ಗೆ ಮಾತನಾಡಿರುವ ಸಚಿವ ಎಚ್‌ಸಿ ಮಹದೇವಪ್ಪ, ಹಿಂದು ಧರ್ಮ ಒಡೆಯುತ್ತೇವೆ ಎಂಬುದು ಶುದ್ಧ ಸುಳ್ಳು. ಸಿದ್ದರಾಮಯ್ಯ ಯಾಕೆ ಹಿಂದು ಧರ್ಮ ಒಡೆಯುತ್ತಾರೆ. ಹಿಂದು ಧರ್ಮ ಪ್ರಶ್ನೆಯೇ ಇಲ್ಲ. ನಾವು ಜಾತಿ ಗಣತಿ ಮಾಡುತ್ತಿರುವುದು ಜಾತಿಗಳ ಸ್ಥಿತಿಗಳ ಅಧ್ಯಯನಕ್ಕಾಗಿ. ಧರ್ಮ ಒಡೆಯುವುದು ನಮ್ಮ ಕೆಲಸ ಅಲ್ಲ. ಅದು ಬಿಜೆಪಿಯ ಕೆಲಸ ಎಂದು ಹೇಳಿದ್ದಾರೆ.

ಮೈಸೂರಿನ ಪುರ ಭವನದಲ್ಲಿ ಅಂಬೇಡ್ಕರ್ ಸಂವಿಧಾನದ ಪೀಠಿಕೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಎಚ್‌ಸಿ ಮಹದೇವಪ್ಪ, 'ಬಿಜೆಪಿ ಸುಳ್ಳು ಹಬ್ಬಿಸುತ್ತಿದೆ. ಯಾರಾದರು ಮತಾಂತರ ಆಗುತ್ತೇವೆ ಎಂದರೆ ಅದನ್ನ ತಡೆಯುವ ಹಕ್ಕು ಯಾರಿಗೂ ಇಲ್ಲ. ಅದು ಅವರವರ ಸ್ವಾತಂತ್ರ್ಯ. ಆ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಲು ನಾವ್ಯಾರು. ಅಂಬೇಡ್ಕರ್ ಅವರೇ ನಾನು ಹಿಂದುವಾಗಿ ಹುಟ್ಟಿದ್ದೇನೆ. ಹಿಂದುವಾಗಿ ಸಾಯಲ್ಲ ಎಂದಿದ್ದರು. ಕೆಲವರು ಅದನ್ನ ಪರಿಪಾಲನೆ ಮಾಡುತ್ತಿರಬಹುದು. ನಾವು ಹೊಸ ಜಾತಿಗಳನ್ನ ಸೃಷ್ಟಿ ಮಾಡುತ್ತಿಲ್ಲ. ಹೊಸ ಜಾತಿಗಳನ್ನ ಸೃಷ್ಟಿ ಮಾಡಲು ಸಾಧ್ಯ ಇದ್ಯಾ ಹೇಳಿ. ಮತಾಂತರ ಆಗಿದ್ದವರ ಮೂಲ ಜಾತಿಯನ್ನ ನಮೂದಿಸಿದ್ದೇವೆ ಅಷ್ಟೇ. ಅದರಲ್ಲಿ ತಪ್ಪೇನಿದೆ. ಬಿಜೆಪಿ ನಮ್ಮ ಎಲ್ಲಾ ಒಳ್ಳೆಯ ಕೆಲಸಗಳಿಗೆ ವಿವಾದ ಸೃಷ್ಟಿಸುವ ಕೆಲಸ‌ ಮಾಡುತ್ತಿದೆ. ಅದು ಅವರ ಮನಸ್ಥಿತಿ ಎಂದು ಮಹದೇವಪ್ಪ ಹೇಳಿದ್ದಾರೆ.

ಮಹದೇವಪ್ಪ ಮುಂದಿನ ಸಿಎಂ ಕೂಗು

ಇನ್ನು ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಹೆಚ್.ಸಿ.ಮಹಾದೇವಪ್ಪ ಮುಂದಿನ ಸಿಎಂ ಎನ್ನುವ ಕೂಗು ಎದ್ದಿದೆ. ಮಹದೇವಪ್ಪ ಬೆಂಬಲಿಗರು, ಎಚ್‌ಸಿ ಮಹದೇವಪ್ಪ ಮುಂದಿನ ಸಿಎಂ ಎಂದು ಕೂಗಿದಿದ್ದಾರೆ. ಸಿಎಂ ಕುರ್ಚಿ ಖಾಲಿ ಇಲ್ಲ ಅಂತಾ ಹೆಚ್.ಸಿ. ಮಹದೇವಪ್ಪ ಹೇಳಿದಾಗಲೂ ಬೆಂಬಲಿಗರಿಂದ ಈ ಕೂಗು ಮುಂದುವರಿದಿದೆ. ಮುಗುಳುನಗೆಯೊಂದಿಗೆ ಇದೆಲ್ಲ ಅಭಿಮಾನಿಗಳ ಆಸೆ ಎಂದು ಮಹದೇವಪ್ಪ ಹೇಳಿದ್ದಾರೆ. ಸಿಎಂ ಖುರ್ಚಿ ಕಾಲಿ ಇಲ್ಲ, ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಹೈ ಕಮಾಂಡ್ ನನಗೆ ಯಾವುದೇ ಜವಬ್ದಾರಿ ನೀಡಿದರು ನಿಭಾಯಿಸಿದ್ದೇನೆ. ಮುಂದೆ ಎನು ಆಗುತ್ತೆ ಗೊತ್ತಿಲ್ಲ. ಜವಬ್ದಾರಿ ಕೊಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

ದಸರಾ ಎಲ್ಲಾ ಜನರ ಹಬ್ಬ

ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, ಬಾನು ಮುಷ್ತಾಕ್ ಹೆಸರು ವಿರೋಧ ಮಾಡಿದವರಿಗೆ ನ್ಯಾಯಾಲಯ ಸಂವಿಧಾನದ ಮೂಲಕವೇ ಬಾಯಿಗೆ ಬೀಗ ಹಾಕಿದೆ. ಇನ್ನಾದರು ಆ ರೀತಿಯ ವಿರೋಧವನ್ನ ನಿಲ್ಲಿಸಬೇಕು. ನ್ಯಾಯಾಲಯ ಹೇಳಿದ ಮೇಲೂ ಆ ಹೆಸರಿಗೆ ವಿರೋಧ ಮಾಡುವುದು ಸರಿಯಲ್ಲ. ನಾನು ಎಲ್ಲರನ್ನು ಮುಕ್ತ ಮನಸ್ಸಿನಿಂದ ದಸರಾಗೆ ಆಹ್ವಾನ ನೀಡುತ್ತಿದ್ದೇನೆ. ಇದು ಎಲ್ಲಾ ಧರ್ಮ ಜನರ ನಾಡಹಬ್ಬ. ಇದನ್ನು ಸಂತೋಷದಿಂದ ಆಚರಿಸೋಣ ಎಂದಿದ್ದಾರೆ.