ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ನಮೂದು ಕಾಲಂನಲ್ಲಿ ಯಾವುದೇ ಹೊಸ ಜಾತಿಗಳನ್ನು ಸೃಷ್ಟಿ ಮಾಡಲು ಆಗಲ್ಲ. 1931ರ ಮದ್ರಾಸ್‌ ಗೆಜೆಟ್‌ನಲ್ಲಿ ಯಾವ ಜಾತಿಗಳು ಇದ್ದವೋ ಅವನ್ನೇ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

ಬೆಂಗಳೂರು (ಸೆ.18): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ನಮೂದು ಕಾಲಂನಲ್ಲಿ ಯಾವುದೇ ಹೊಸ ಜಾತಿಗಳನ್ನು ಸೃಷ್ಟಿ ಮಾಡಲು ಆಗಲ್ಲ. 1931ರ ಮದ್ರಾಸ್‌ ಗೆಜೆಟ್‌ನಲ್ಲಿ ಯಾವ ಜಾತಿಗಳು ಇದ್ದವೋ ಅವನ್ನೇ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾವುದೇ ಜಾತಿಯ ಜನ ಮತಾಂತರಗೊಂಡಾಗ ಅವರ ಜಾತಿ ಹೆಸರನ್ನು ಧರ್ಮದ ಹೆಸರಿನಲ್ಲಿ ಸೇರಿಸುತ್ತಿರುವುದು ಧರ್ಮ ಒಡೆಯುವ ಕೆಲಸ ಎಂದು ಆರೋಪಿಸಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದರು.

1931 ಮದ್ರಾಸ್ ಗೆಜೆಟ್‌ನಲ್ಲಿ ಯಾವ ಜಾತಿಗಳು ಇವೆಯೋ ಅವೇ ಈಗಲೂ ಇವೆ ಎಂದರು. ಹಿಂದೂವಾಗಿ ಹುಟ್ಟಿದ್ದರೂ ಸಾಯೋವಾಗ ಹಿಂದೂವಾಗಿ ಸಾಯಲಾರೆ ಅಂತ ಅಂಬೇಡ್ಕರ್ ಹೇಳಿದ್ದರು. ಅದರಂತೆ ಅವರು ಬೌದ್ಧ ಧರ್ಮ ಸ್ವೀಕರಿಸಿ ಸಾವನ್ನಪ್ಪಿದರು. ಒಂದು ಧರ್ಮದಲ್ಲಿ ಸಮಾನತೆ ಇಲ್ಲ ಎಂದು ಯಾರಿಗಾದರೂ ಅನಿಸಿದರೆ ಅವರು ಬೇರೆ ಯಾವ ಧರ್ಮಕ್ಕಾದರೂ ಹೋಗಬಹುದು ಎಂದು ಹೇಳಿದರು.

ದಸರಾ ಉದ್ಘಾಟನೆ ಬಳಿಕ ಯಾರು ಎಲ್ಲಿಗಾದರೂ ಹೋಗಲಿ: ಇದೇ ಸೆಪ್ಟೆಂಬರ್‌ 22ಕ್ಕೆ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಬಾನು ಮುಷ್ತಾಕ್‌ ಉದ್ಘಾಟಿಸಲಿದ್ದಾರೆ. ಆ ನಂತರ ಇದನ್ನು ಪ್ರಶ್ನಿಸಿ ಯಾರು ಎಲ್ಲಿಗಾದರೂ ಹೋಗಲಿ ಎಂದು ಇದೇ ವೇಳೆ ಮೈಸೂರು ಉಸ್ತುವಾರಿ ಸಚಿವರೂ ಆದ ಎಚ್‌.ಸಿ.ಮಹದೇವಪ್ಪ ಹೇಳಿದರು. ಬಾನು ಮುಷ್ತಾಕ್‌ ಅವರಿಂದ ದಸರಾ ಉದ್ಘಾಟಿಸುವುದನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ ಎಂಬ ಪ್ರಶ್ನೆಗೆ, ಈಗಾಗಲೇ ದಸರಾ ಸಿದ್ಧತೆ ಚೆನ್ನಾಗಿ ನಡೆದಿದೆ. ಏರ್‌ಶೋ, ಹೆಲಿಕಾಪ್ಟರ್‌ ಶೋ ಎಲ್ಲಾ ಇರುತ್ತದೆ. ಸೆ.22ಕ್ಕೆ ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುತ್ತಾರೆ. ಆ ಮೇಲೆ ಯಾರು ಎಲ್ಲಿಗೆ ಬೇಕಾದರೂ ಹೋಗಲಿ ಎಂದರು.

ದಸರಾ ಅದ್ಧೂರಿ ಆಚರಣೆ

ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಅದ್ಧೂರಿಯಾಗಿ ದಸರಾ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅದರಂತೆ ದಸರಾ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು. ದಸರಾ ಮಹೋತ್ಸವ ಆಚರಣೆ ಸಂಬಂಧ ಅಧಿಕಾರಿಗಳ ಸಭೆ ಮಾಡಿ, ದಸರಾ ಯಶಸ್ವಿಯಾಗಿ ನಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು. ಈ ಬಾರಿಯೂ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರುತ್ತದೆ. 3- 4 ವಾರಗಳ ಮುಂಚಿತವಾಗಿಯೇ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲು ಸೂಚಿಸಿದ್ದೇವೆ. ಡ್ರೋನ್ ಶೋ ಟಿಕೆಟ್ 3 ಸಾವಿರ ನಿಗದಿ ಮಾಡಲಾಗಿದೆ. ಈ ಬಾರಿ ದಸರಾ ಏರ್ ಶೋ ಇರುತ್ತದೆ ಎಂದು ಅವರು ಹೇಳಿದರು. ಗಾಂಧಿ ಜಯಂತಿ ದಿನವೇ ಜಂಬೂಸವಾರಿ ಮೆರವಣಿಗೆ ‌ನಡೆಯಲಿದೆ. ಹೀಗಾಗಿ, ಗಾಂಧಿಜಿಯವರ ಸಂದೇಶ ಸಾರುವಂತಹ ದಸರಾ ಆಗಲಿದೆ ಎಂದರು.