ಬೆಂಗಳೂರು-ಚಿಕ್ಕಬಳ್ಳಾಪುರದಲ್ಲಿ ಒಂದು ಹಾಗೂ ಹುಬ್ಬಳ್ಳಿ-ಧಾರವಾಡ ಅಥವಾ ಬೆಳಗಾವಿಯಲ್ಲಿ ಒಂದು ಸೇರಿದಂತೆ ಒಟ್ಟು ಎರಡು ಏರೋಸ್ಪೇಸ್ ಕಾರಿಡಾರ್ ನಿರ್ಮಿಸುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಮನವಿ ಮಾಡಿದ್ದೇವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಹುಬ್ಬಳ್ಳಿ (ಆ.07): ಬೆಂಗಳೂರು-ಚಿಕ್ಕಬಳ್ಳಾಪುರದಲ್ಲಿ ಒಂದು ಹಾಗೂ ಹುಬ್ಬಳ್ಳಿ-ಧಾರವಾಡ ಅಥವಾ ಬೆಳಗಾವಿಯಲ್ಲಿ ಒಂದು ಸೇರಿದಂತೆ ಒಟ್ಟು ಎರಡು ಏರೋಸ್ಪೇಸ್ ಕಾರಿಡಾರ್ ನಿರ್ಮಿಸುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಮನವಿ ಮಾಡಿದ್ದೇವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಈ ಕುರಿತು ಮಾತನಾಡಿದರು. ನಮ್ಮಲ್ಲಿಯೇ ಏರೋಸ್ಪೇಸ್ ಕಾರಿಡಾರ್ ನಿರ್ಮಿಸಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ.
ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಅಮೆರಿಕಾ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯೆ ಉತ್ತಮ ಗೆಳೆತನವಿತ್ತು. ಆದರೆ, ಈಗೇಕೆ ಗೆಳೆತನ ಕೆಟ್ಟಿದೆ ಎಂಬುದು ಗೊತ್ತಾಗುತ್ತಿಲ್ಲ. ಟ್ರಂಪ್ ವಿವಿಧ ರೀತಿಯ ತೆರಿಗೆಗಳನ್ನು ದೇಶದ ಮೇಲೆ ಪ್ರಯೋಗಿಸುತ್ತಿದ್ದಾರೆ. ಅದು ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ದೇಶಕ್ಕೆ ಪರಿಣಾಮ ಬೀರುತ್ತದೆ ಎಂದರು. ಮೆಟ್ರೋ ಉದ್ಘಾಟನೆಗೆ ಬರುತ್ತಿರುವ ಮೋದಿಯವರಿಗೆ ಸ್ವಾಗತ.
ಆದರೆ, ಬೆಂಗಳೂರು ಮೆಟ್ರೋ ನಿರ್ಮಾಣದಲ್ಲಿ ಕೇವಲ ಕೇಂದ್ರ ಸರ್ಕಾರದ ಪಾಲು ಮಾತ್ರ ಇಲ್ಲ. ಕೇಂದ್ರ ಸರ್ಕಾರವೇ ನೋಟ್ ಪ್ರಿಂಟ್ ಮಾಡಿ, ಎಲ್ಲ ಕಾಮಗಾರಿಗೆ ಅನುದಾನ ನೀಡಲ್ಲ. ರಾಜ್ಯ ಸರ್ಕಾರದ ತೆರಿಗೆ ಹಣವನ್ನೇ ಅಭಿವೃದ್ಧಿ ಕಾಮಗಾರಿಗೆ ಅನುದಾನದ ರೂಪದಲ್ಲಿ ನೀಡಲಾಗುತ್ತದೆ. ಅದರಲ್ಲಿ ರಾಜ್ಯ ಸರ್ಕಾರದೂ ಪಾಲು ಇದೆ ಎಂದರು. ಸುಪ್ರೀಂಕೋರ್ಟ್ ಯಾವತ್ತಿದ್ದರೂ ಸುಪ್ರೀಂ. ಆದರೆ, ರಾಹುಲ್ ಗಾಂಧಿಯವರ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡು ರಿಮಾರ್ಕ್ ಮಾಡುವುದು ಸರಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ಪಾಟೀಲ್ ಪ್ರತಿಕ್ರಿಯಿಸಿದರು.
