ಸಾಲ ಮನ್ನಾದಿಂದ ಎಷ್ಟು ಮಂದಿಗೆ ಅನುಕೂಲವಾಗುತ್ತದೆ? ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಶೇಕಡ 95ರಷ್ಟು ಜನರಿಗೆ ಸೌಲಭ್ಯ ದೊರೆಯುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಪಾದಿಸಿದರು.

ಮೈಸೂರು (ಸೆ.27): ರೈತರ ಸಾಲ ಮನ್ನಾ ಮಾಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಸಾಲ ಮನ್ನಾದಿಂದ ಎಷ್ಟು ಮಂದಿಗೆ ಅನುಕೂಲವಾಗುತ್ತದೆ? ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಶೇಕಡ 95ರಷ್ಟು ಜನರಿಗೆ ಸೌಲಭ್ಯ ದೊರೆಯುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಪಾದಿಸಿದರು. ನಗರದ ಜೆ.ಕೆ.ಮೈದಾನದಲ್ಲಿರುವ ಎಂಎಂಸಿ ಅಲ್ಯುಮಿನಿ ಭವನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಕಾರ್ಯಕ್ರಮವನ್ನು ಭತ್ತ ಕುಟ್ಟುವ ಮೂಲಕ, ಹೊಂಬಾಳೆ ಅರಳಿಸುವ ಮೂಲಕ ಅವರು ಉದ್ಘಾಟಿಸಿ, ಮಾತನಾಡಿದರು.

ರೈತರಿಗೆ ಸಾಲ ಮನ್ನಾಕ್ಕಿಂತ ಪಂಚ ಗ್ಯಾರಂಟಿ ಯೋಜನೆಯಿಂದ ಹೆಚ್ಚು ಅನುಕೂಲವಾಗಿದೆ. ಹಿಂದಿನ ಸರ್ಕಾರಗಳು ಸಾಲಮನ್ನಾಕ್ಕೆ 5 ರಿಂದ 12 ಸಾವಿರ ಕೋಟಿ ರು.ವ್ಯಯಿಸರಬಹುದು. ಆದರೆ, ಗ್ಯಾರಂಟಿ ಯೋಜನೆಗಳಿಗೆ ಎರಡೂವರೆ ವರ್ಷದಲ್ಲಿ ₹3 ಲಕ್ಷ ಕೋಟಿ ಖರ್ಚು ಮಾಡಲಾಗಿದೆ. ಸೊಸೈಟಿಗೆ ಸರಿಯಾಗಿ ಸಾಲ ಪಾವತಿಸದವರು ಮಾತ್ರ ಮನ್ನಾ ಮಾಡುವಂತೆ ಕೇಳುತ್ತಾರೆ. ಇದು ಸರಿಯಲ್ಲ ಎಂದರು.

ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ

ಇಡೀ ರಾಷ್ಟ್ರದಲ್ಲಿ ರಸಗೊಬ್ಬರದ ಕೊರತೆಯಿದೆ. ಆಮದು, ಉತ್ಪಾದನೆಯಿಲ್ಲದಂತಾಗಿ ಪೂರೈಕೆಯ ಕೊರತೆ ಎದುರಾಗಿದೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿಯಾದರೂ, ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿಯವರು ಸುಳ್ಳು ಹೇಳಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರವೇ ಜಿಎಸ್ಟಿ ಜಾರಿಗೆ ತಂದು, ಈಗ ಕಡಿಮೆ ಮಾಡಿದ್ದಾರೆ. ನಾವ್ಯಾಕೆ ಅವರನ್ನು ಅಭಿನಂದಿಸಬೇಕು? ಇಲ್ಲಿ ಯಾರೂ ಶಾಶ್ವತವಲ್ಲ, ಎಲ್ಲರಿಗೂ ಕೊನೆಯಿದೆ ಎಂದರು.

ಆರಂಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮಹತ್ವ ಜನರಿಗೆ ಅರ್ಥವಾಗುತ್ತಿಲ್ಲ ಎಂಬ ಬೇಸರವಿತ್ತು. ಆದರೆ, ಕಳೆದ ಎರಡೂವರೆ ವರ್ಷದಲ್ಲಿ ಜನರಿಗೆ ನಿಧಾನವಾಗಿ ಗ್ಯಾರಂಟಿ ಯೋಜನೆಯ ಮಹತ್ವ ಅರ್ಥವಾಗುತ್ತಿದೆ. ಇದರಿಂದ ನಮಗೆ ಈಗ ತೃಪ್ತಿ ಇದೆ. ಹಿಂದಿನ ಸರ್ಕಾರ ಹಾಗೂ ಈಗಿನ ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ಜನ ಮನೆಯಲ್ಲಿ ಕುಳಿತು ಯೋಚಿಸಬೇಕು. ಆಗ ಯಾರು ಸರಿ ಎಂಬುದು ನಿಮಗೇ ಗೊತ್ತಾಗುತ್ತದೆ.
-ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ.