ಕಲ್ಯಾಣ ಕರ್ನಾಟಕಕ್ಕೆ ನೀಡಿದ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಭಾಗಕ್ಕೂ ಪ್ರತ್ಯೇಕ ಅನುದಾನ ನೀಡುವುದು ಅಗತ್ಯವಿದ್ದು, ಇದಕ್ಕಾಗಿ ಈ ಭಾಗದ 34 ಶಾಸಕ, ಸಚಿವರು ಸೇರಿ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ದು ಒತ್ತಾಯಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು.

ಹುಬ್ಬಳ್ಳಿ (ಅ.07): ಕಲ್ಯಾಣ ಕರ್ನಾಟಕಕ್ಕೆ ನೀಡಿದ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಭಾಗಕ್ಕೂ ಪ್ರತ್ಯೇಕ ಅನುದಾನ ನೀಡುವುದು ಅಗತ್ಯವಿದ್ದು, ಇದಕ್ಕಾಗಿ ಈ ಭಾಗದ 34 ಶಾಸಕ, ಸಚಿವರು ಸೇರಿ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ದು ಒತ್ತಾಯಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿತ್ತೂರು ಕರ್ನಾಟಕ ಭಾಗವೂ ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ. ಇಲ್ಲೂ ಅಭಿವೃದ್ಧಿಗೆ ಹಣಕಾಸಿನ ಅವಶ್ಯಕತೆ ಇದೆ.

ಹಾಗಾಗಿ ಎಲ್ಲ ಜನಪ್ರತಿನಿಧಿಗಳು ಕುಳಿತು ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು. ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತಿದ್ದು, ಅ.15ರ ನಂತರ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು. ಮೊದಲ ಹಂತದಲ್ಲಿ ಗುಂಡಿ ಮುಚ್ಚಲು ₹ 700 ಕೋಟಿ ನೀಡಲಾಗಿದೆ. ನಂತರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಸೂಚಿ ತಯಾರಿಸಲಾಗುವುದು ಎಂದು ಸಚಿವರು ಹೇಳಿದರು.

ನನ್ನ ಸಹಮತ: ಜಾತಿ ಜನಗಣತಿಯ 60 ಪ್ರಶ್ನಾವಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ ಸುಸ್ತಾಗಿ ಸರಳೀಕರಣ ಮಾಡಲು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ನನ್ನದು ಸಹಮತ ಇದೆ. ಪ್ರಶ್ನೆಗಳನ್ನು ಕಡಿಮೆ ಮಾಡಬೇಕು. ಅಲ್ಲದೇ ಜನರು ತಮಗೆ ಇಷ್ಟ ಇರುವ ಪ್ರಶ್ನೆಗೆ ಮಾತ್ರ ಉತ್ತರಿಸಬಹುದಾಗಿದೆ. ಪ್ರಶ್ನಾವಳಿ ತಯಾರಿಸಿದ್ದು ಆಯೋಗದವರು. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅವರು ಸರ್ಕಾರಕ್ಕೆ ಎಲ್ಲವನ್ನೂ ತಿಳಿಸಬೇಕೆಂದಿಲ್ಲ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಾವು, ನಮ್ಮ ಪಕ್ಷ ಭಾಗಿಯಾಗಿಲ್ಲ. ಕಳೆದ ಸಲ ನಮ್ಮ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿತ್ತು ಎಂದು ಉತ್ತರಿಸಿದರು. ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೈನ ಧರ್ಮ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ

ಜೈನ ಧರ್ಮ, ವ್ಯಾಪಾರ, ಉದ್ಯೋಗ, ಕೃಷಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದೆ ಎಂದು ಹೇಳಿದರು. ಜೈನ ಧರ್ಮ ವಿಶ್ವಕ್ಕೆ ಶಾಂತಿ, ಅಹಿಂಸೆಯನ್ನು ಸಾರುತ್ತ ಸಮಾಜದ ಒಳಿತಿಗೆ ಕಾರ್ಯನಿರ್ವಹಿಸುತ್ತ ಬಂದಿದೆ. ಹೊರರಾಜ್ಯಗಳಲ್ಲಿ ಕನ್ನಡ ಉಳಿಸಿ ಬೆಳೆಸುತ್ತಾ ಬಂದಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ ಮಾತನಾಡಿ, ಜೈನ ಧರ್ಮ ಅಹಿಂಸೆಯನ್ನು ಸಾರಿ ಅದರಂತೆ ನಡೆದುಕೊಂಡಿದೆ. ಮಹತ್ಮಾ ಗಾಂಧೀಜಿ ಅವರು ಅಹಿಂಸಾ ಮಾರ್ಗದಿಂದ ಸ್ವತಂತ್ರ ಪಡೆಯಲು ಪ್ರೇರಣೆ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಜೋತಿ ಬೆಳಗಿಸಿ ಮಾತನಾಡಿ, ಜೈನಧರ್ಮದಿಂದ ಪ್ರಕೃತಿ ಉಳಿದಿದೆ. ಅಹಿಂಸೆಯ ಮಾರ್ಗದಿಂದ ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ದಯೆಯನ್ನು ಧರ್ಮ ಹೇಳಿದೆ. ಜೈನ ಧರ್ಮದ ಐದು ತತ್ವಗಳನ್ನು ಅಳವಡಿಸಿಕೊಂಡರೇ ವಿಶ್ವವೇ ಸುಂದರ ತೋಟದಂತೆ ಕಂಗೊಳಿಸುತ್ತದೆ. ಸಾಮಾಜಿಕ ಮೌಲ್ಯಗಳನ್ನು ನೀಡಿದ್ದಲ್ಲದೆ, ಅದರಂತೆ ನಡೆದು ತೊರಿಸಿದೆ ಎಂದ ಅವರು, ಜೈನಧರ್ಮಕ್ಕೆ ಪ್ರತ್ಯೆಕ ನಿಗಮ ಮಂಡಲಿ ಸ್ಥಾಪಿಸಲು ಮನವಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.