ನಾವು ಆರ್‌ಎಸ್‌ಎಸ್‌ ಟಾರ್ಗೆಟ್ ಮಾಡಿಲ್ಲ. ಎಲ್ಲಾ ಸಂಘಟನೆಗಳಿಗೂ ಅನ್ವಯ ಆಗುವಂತೆ ಆದೇಶ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮೈಸೂರು (ಅ.19): ನಾವು ಆರ್‌ಎಸ್‌ಎಸ್‌ ಟಾರ್ಗೆಟ್ ಮಾಡಿಲ್ಲ. ಎಲ್ಲಾ ಸಂಘಟನೆಗಳಿಗೂ ಅನ್ವಯ ಆಗುವಂತೆ ಆದೇಶ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗೆ ನಿರ್ಬಂಧ ಹೇರಿರುವ ಕುರಿತು ಪ್ರತಿಕ್ರಿಯಿಸಿ, ಯಾವುದೇ ಸಂಘ-ಸಂಸ್ಥೆಗಳಿರಲಿ, ಸಾರ್ವಜನಿಕ ಸ್ಥಳಗಳಲ್ಲಿ ಅವು ಚಟುವಟಿಕೆಗಳನ್ನು ನಡೆಸುವಾಗ ಜನಸಾಮಾನ್ಯರಿಗೆ ತೊಂದರೆಯಾಗುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯುವಂತೆ ಆದೇಶ ಮಾಡಿದ್ದೇವೆ.

ಇದರಲ್ಲಿ ಯಾವುದೇ ಸಂಘ-ಸಂಸ್ಥೆಗಳನ್ನು ಗುರಿಯಾಗಿಸಿಲ್ಲ ಎಂದು ಹೇಳಿದರು. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ, ಅಂದಿನ ಸಿಎಂ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದಂತೆ, ನಮ್ಮ ಸರ್ಕಾರವೂ ಆದೇಶ ಹೊರಡಿಸಿದೆ. ಬಿಜೆಪಿ ಸರ್ಕಾರ ಹೊರಡಿಸಿದ್ದ ಆ ಆದೇಶಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಈಗ ಈ ಆದೇಶದಲ್ಲಿ ಸರ್ಕಾರ ಯಾವುದೇ ನಿಗದಿತ ಸಂಘ-ಸಂಸ್ಥೆಯನ್ನು ಗುರಿ ಮಾಡಿಲ್ಲ. ಬಿಜೆಪಿಯವರು ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಸಮಾಜದಲ್ಲಿ ಶಾಂತಿಭಂಗವಾಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ ಎಂದರು.

ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ಇಲ್ಲ

‘ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಎಂಬುದು ಮಾಧ್ಯಮದ ಸೃಷ್ಟಿ. ಅಂತಹ ಯಾವುದೇ ಕ್ರಾಂತಿ ನಡೆಯಲ್ಲ. ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಯಾವುದೇ ಕೂಗು ಇಲ್ಲ. ಅದೆಲ್ಲವೂ ಊಹಾಪೋಹ’ ಎಂದು ಸ್ಪಷ್ಟನೆ ನೀಡಿದ್ದಾರೆ. ನವೆಂಬರ್ ಕ್ರಾಂತಿ ಕುರಿತು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಡಿದ ಸಿಎಂ, ‘ಯಾವ ಕ್ರಾಂತಿಯೂ ಇಲ್ಲ, ಅದು ಮಾಧ್ಯಮಗಳ ಭ್ರಾಂತಿ. ಮಾಧ್ಯಮಗಳದ್ದೇ ಸೃಷ್ಟಿ. ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಶಾಸಕರು, ಸಚಿವರು, ನಾವು ಆಗಾಗ ಸೇರುತ್ತೇವೆ. ಪಕ್ಷದ ವಿಷಯ ಚರ್ಚಿಸುತ್ತೇವೆ. ಜೊತೆಯಾಗಿ ಊಟ ಮಾಡುತ್ತೇವೆ. ಅದರಲ್ಲಿ ರಾಜಕೀಯ ಅರ್ಥ ಹುಡುಕುವುದು ಬೇಡ’ ಎಂದು ಸ್ಪಷ್ಟನೆ ನೀಡಿದರು.

ಕಳೆದ ಮೂರಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಕೋರ್ಟ್‌ನಿಂದ ಹಸಿರು ನಿಶಾನೆ ಬಂದ ತಕ್ಷಣ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಪ್ರಜಾಪ್ರಭುತ್ವ ಬಲವಾಗಬೇಕಾದರೆ ನಿಯಮಿತ ಚುನಾವಣೆಗಳು ನಡೆಯಲೇಬೇಕು ಎಂದರು. ಜೆಡಿಎಸ್ ಶಾಸಕರು ಅನುದಾನ ತಾರತಮ್ಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಕ್ಕೆ ಗರಂ ಆದ ಸಿಎಂ, ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಮ್ಮ ಶಾಸಕರಿಗೆ ಎಷ್ಟು ಅನುದಾನ ನೀಡಿದರು? ನಾವು ಎಷ್ಟು ಕೊಡಬೇಕೋ ಅಷ್ಟು ಕೊಟ್ಟಿದ್ದೇವೆ ಎಂದರು.