ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವರ ವಿಶೇಷ ಡಿನ್ನರ್ ಸಭೆ ನಡೆಯಲಿದೆ. ಬಿಹಾರ ಚುನಾವಣಾ ತಂತ್ರಗಾರಿಕೆ ಮತ್ತು ಸಂಪುಟ ಪುನರ್‌ರಚನೆ ಕುರಿತು ಮಹತ್ವದ ಚರ್ಚೆಗಳು ನಡೆಯುವ ನಿರೀಕ್ಷೆಯಿದ್ದು, ಸಚಿವರ ಆಪ್ತ ಸಿಬ್ಬಂದಿಗೂ ಪ್ರವೇಶ ನಿರಾಕರಿಸಿರುವುದು ಕುತೂಹಲ ಹೆಚ್ಚಿಸಿದೆ.
ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿರುವ ಮಹತ್ವದ ಸಚಿವರ ಡಿನ್ನರ್ ಸಭೆ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಸಭೆಗೆ ರಾಜ್ಯದ ಎಲ್ಲಾ ಸಚಿವರಿಗೆ ಆಹ್ವಾನ ನೀಡಲಾಗಿದ್ದು, ಸರ್ಕಾರ ಮತ್ತು ಪಕ್ಷದ ಪಾಳಯದಲ್ಲಿ ಈ ಸಭೆಯ ಕುರಿತು ಗಂಭೀರ ಚರ್ಚೆ ಆರಂಭವಾಗಿದೆ. ಸಚಿವರಿಗೆ ಕಳುಹಿಸಲಾದ ಸೂಚನೆಯಲ್ಲಿ, ಸಭೆಗೆ ಕೇವಲ ಸಚಿವರಿಗೇ ಮಾತ್ರ ಪ್ರವೇಶವಿರುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಸಚಿವರ ಆಪ್ತ ಸಹಾಯಕರು, ಖಾಸಗಿ ಕಾರ್ಯದರ್ಶಿಗಳು (ಪಿಎಸ್) ಸೇರಿದಂತೆ ಯಾವುದೇ ಅಧಿಕಾರಿಗಳಿಗೆ ಈ ಸಭೆಗೆ ಹಾಜರಾಗುವ ಅವಕಾಶ ಇರುವುದಿಲ್ಲ. ಈ ಕ್ರಮವು ಸಭೆಯ ಗಂಭೀರತೆ ಮತ್ತು ಆಂತರಿಕ ವಿಚಾರ ಚರ್ಚೆಯ ಮಹತ್ವವನ್ನು ತೋರುತ್ತದೆ. ಈ ಡಿನ್ನರ್ ಸಭೆಯಲ್ಲಿ ಮುಖ್ಯವಾಗಿ ಎರಡು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪಕ್ಷದ ವಲಯಗಳಲ್ಲಿ ತಿಳಿದುಬಂದಿದೆ.
ಬಿಹಾರ ಚುನಾವಣೆಯ ಕುರಿತು ತಂತ್ರ ಚರ್ಚೆ
ಮೊದಲನೆಯದಾಗಿ, ಸಭೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿನ ಪಕ್ಷದ ತಂತ್ರಗಳು ಮತ್ತು ಸಚಿವರ ಪಾತ್ರ ಕುರಿತು ಚರ್ಚೆ ನಡೆಯಲಿದೆ. ಹೈಕಮಾಂಡ್‌ನ ಸೂಚನೆ ಮೇರೆಗೆ ಈ ಸಭೆ ಆಯೋಜನೆಯಾಗಿದ್ದು, ಬಿಹಾರ ಚುನಾವಣಾ ಪ್ರಚಾರದಲ್ಲಿ ಸಚಿವರ ನಿಯೋಜನೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಚಾರ ಮಾಡಲು ಸಮರ್ಥರಾದ ಕೆಲವು ಪ್ರಮುಖ ಸಚಿವರಿಗೆ ವಿಶೇಷ ಜವಾಬ್ದಾರಿ ನೀಡುವ ಪ್ರಸ್ತಾಪ ಇದೆ. ಆಯ್ಕೆಯಾದ ಸಚಿವರು ಒಂದು ವಾರದ ಕಾಲ ಬಿಹಾರದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಈ ಬಾರಿ ಪ್ರಚಾರ ಕಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ತೆರಳುವ ಸಾಧ್ಯತೆ ಇದೆ. ಚುನಾವಣಾ ಪ್ರಚಾರದ ವೇಳಾಪಟ್ಟಿ, ಜವಾಬ್ದಾರಿಗಳ ಹಂಚಿಕೆ ಮತ್ತು ತಂತ್ರ ರೂಪಣೆ ಕುರಿತು ಈ ಡಿನ್ನರ್ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ನಡೆಯಲಿದೆ.
ಸಂಪುಟ ಪುನರ್‌ರಚನೆ ಕುರಿತು ಸೂಚನೆಗಳ ಸಾಧ್ಯತೆ
ಡಿನ್ನರ್ ಸಭೆಯ ಮತ್ತೊಂದು ಪ್ರಮುಖ ಅಜೆಂಡಾ ಸಂಪುಟ ಪುನರ್‌ರಚನೆ ಕುರಿತ ವದಂತಿಗಳು. ಇತ್ತೀಚೆಗೆ ಸಂಪುಟದಲ್ಲಿ ಬದಲಾವಣೆ ಸಾಧ್ಯತೆ ಬಗ್ಗೆ ಪಕ್ಷದ ಒಳಗಡೆ ಚರ್ಚೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ, ಸಭೆಯಲ್ಲಿ ಮುಖ್ಯಮಂತ್ರಿಗಳು ಸಚಿವರಿಗೆ ಪುನರ್‌ರಚನೆ ಕುರಿತು ಸ್ಪಷ್ಟ ಸಂದೇಶ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೆಲವು ಇಲಾಖೆಗಳ ಕಾರ್ಯಪದ್ಧತಿಯಲ್ಲಿ ಬದಲಾವಣೆ, ಹೊಸ ಮುಖಗಳಿಗೆ ಅವಕಾಶ ಹಾಗೂ ಹಿರಿಯರಿಗೆ ಹೊಸ ಜವಾಬ್ದಾರಿಗಳ ಹಂಚಿಕೆ ಕುರಿತಾಗಿ ಚರ್ಚೆ ನಡೆಯಬಹುದು.
ರಾಜಕೀಯ ವಲಯದಲ್ಲಿ ಕುತೂಹಲ
ಈ ಸಭೆ ಸಂಪೂರ್ಣವಾಗಿ ಹೈಕಮಾಂಡ್‌ನ ಮಾರ್ಗದರ್ಶನದಡಿ ನಡೆಯುತ್ತಿರುವುದರಿಂದ ರಾಜಕೀಯ ವಲಯದಲ್ಲಿ ಇದರ ಬಗ್ಗೆ ಅಪಾರ ಕುತೂಹಲ ಹುಟ್ಟಿಕೊಂಡಿದೆ. ಬಿಹಾರ ಚುನಾವಣಾ ಕಣ ಹಾಗೂ ಸಂಪುಟ ಪುನರ್‌ರಚನೆಯ ಎರಡೂ ವಿಚಾರಗಳು ರಾಜ್ಯ ರಾಜಕೀಯದ ಮುಂದಿನ ಚಿತ್ರಣವನ್ನು ಬದಲಾಯಿಸುವ ಶಕ್ತಿ ಹೊಂದಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಸಂಜೆ ನಡೆಯಲಿರುವ ಈ ಡಿನ್ನರ್ ಸಭೆಯ ನಂತರ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಬಗ್ಗೆ ಪಕ್ಷದ ಒಳಮಟ್ಟದಲ್ಲಿ ಚರ್ಚೆಗಳು ತೀವ್ರಗೊಂಡಿವೆ.
ಗೃಹ ಸಚಿವ ಪರಮೇಶ್ವರ್ ಹೇಳಿಕೆ
ಇಂದು ಸಚಿವರ ಜೊತೆ ಸಿಎಂ ಡಿನ್ನರ್ ಮೀಟಿಂಗ್ ಇದೆ. ಮುಖ್ಯಮಂತ್ರಿಗಳು ಊಟಕ್ಕೆ ಕರೆಯುತ್ತಾರೆ. ಅಧಿವೇಶನ ಇದ್ದಾಗಲೂ ಅವರು ಕರೆಯುತ್ತಾರೆ. ಕೆಲವರು ಮಂತ್ರಿಗಳು ಕರೆಯುತ್ತಾರೆ. ಅದೇ ರೀತಿ ಈಗ ಸಿಎಂ ಕರೆದಿದ್ದಾರೆ. ನಾನು ಹೇಳೋದು ಇದೇನು ದೊಡ್ಡದಲ್ಲ. ಊಟಕ್ಕೂ, ಎರಡೂವರೆ ವರ್ಷಕ್ಕೂ ಸಂಬಂಧವಿಲ್ಲ ಎಂದರು.
ಇನ್ನು ಬಿಹಾರ ಎಲೆಕ್ಷನ್‌ಗೆ ಕಲೆಕ್ಷನ್ ಮಾಡಲು ಕರೆದಿದ್ದಾರೆಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಹೇಗೆ ಬೇಕಾದ್ರೂ ಮಾತನಾಡಬಹುದು. ಹಾಗೆ ಮಾತನಾಡಬೇಕು ಹೀಗೆ ಅಂತ ಏನಿಲ್ಲ. ಅವರು ಏನು ಬೇಕಾದ್ರೂ ಮಾತನಾಡಬಹುದು ಮಾತಾಡಿಕೊಳ್ಳಲಿ ಎಂದಿದ್ದಾರೆ.
