ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ 65 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಭೂಮಿ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಬೆಂಗಳೂರು (ಸೆ.05): ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ 65 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಭೂಮಿ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಮನಗರದಲ್ಲಿ ರಾಜೀವ್‌ಗಾಂಧಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಮಂಜೂರಾತಿ ನೀಡಿತ್ತು. ಬಳಿಕ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.

ಆಗ ಡಿ.ಕೆ.ಶಿವಕುಮಾರ್‌ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿಯೇ ಸ್ಥಾಪಿಸುತ್ತೇನೆ ಎಂದು ಶಪಥಗೈದಿದ್ದರು. ಇದೀಗ ಅದರಲ್ಲಿ ಯಶಸ್ವಿಯಾಗಿದ್ದು, ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲೆಯ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಅಧಿಕೃತ ಚಾಲನೆ ನೀಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಭೂಮಿ ಖರೀದಿಸಲು ಕರ್ನಾಟಕ ಗೃಹ ಮಂಡಳಿಯಿಂದ ಭೂಮಿ ಖರೀದಿಗೆ 65 ಕೋಟಿ ರು. ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ: ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ. ಹೀಗಾಗಿ ನಾನು ಮಾತನಾಡದಿರುವುದೇ ಉತ್ತಮ ಎಂದು ಹೇಳಿದ್ದಾರೆ. ಸದನದಲ್ಲಿ ಆರ್‌ಎಸ್‌ಎಸ್‌ ಪ್ರಾರ್ಥನೆ, ಚಾಮುಂಡೇಶ್ವರಿ ದೇವಸ್ಥಾನ ಕುರಿತ ಹೇಳಿಕೆಗಳು ಸೇರಿ ಪದೇಪದೆ ತಮ್ಮ ಹೇಳಿಕೆಗಳು ವಿವಾದಕ್ಕೀಡಾಗುತ್ತಿವೆ. ಹೀಗಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸದಿರಲು ತೀರ್ಮಾನಿಸಿರುವ ಅವರು ಇಂಥದ್ದೊಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ದಸರಾ ಉದ್ಘಾಟಕರ ಆಯ್ಕೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಪ್ರತಿಕ್ರಿಯೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶಿವಕುಮಾರ್‌, ನಾನು ಸದನ ಸೇರಿ ಎಲ್ಲಿಯೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಕೆಲವರ ಕೆಲಸವಾಗಿದೆ. ರಾಜಕೀಯದವರು, ಮಾಧ್ಯಮಗಳು, ರಾಜಮನೆತನದ ಪ್ರಮೋದಾದೇವಿ, ಸಂಸದ ಯದುವೀರ್‌ ಹೀಗೆ ಎಲ್ಲರೂ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಲೇಸು ಎಂದೆನಿಸುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಲು ಬೇರೆ ನಾಯಕರು ಮತ್ತು ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಕೇಳಿ ಎಂದು ಹೇಳಿದರು.