ಮತದಾರರ ಪಟ್ಟಿಯಿಂದ ಕೈಬಿಡಲು ಅರ್ಜಿ ಸಲ್ಲಿಸಿದ್ದ ನಕಲಿ ವ್ಯಕ್ತಿಗಳು ಯಾರು ಎನ್ನುವ ಮಾಹಿತಿಯನ್ನು ತನಿಖಾ ಸಂಸ್ಥೆಗೆ ನೀಡಲು ನಿರಾಕರಿಸಿರುವ ಕೇಂದ್ರ ಚುನಾವಣಾ ಆಯೋಗದ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ.08): ರಾಜ್ಯ ವಿಧಾನಸಭೆಯ 2023ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ 5,994 ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಅರ್ಜಿ ಸಲ್ಲಿಸಿದ್ದ ನಕಲಿ ವ್ಯಕ್ತಿಗಳು ಯಾರು ಎನ್ನುವ ಮಾಹಿತಿಯನ್ನು ತನಿಖಾ ಸಂಸ್ಥೆಗೆ ನೀಡಲು ನಿರಾಕರಿಸಿರುವ ಕೇಂದ್ರ ಚುನಾವಣಾ ಆಯೋಗದ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಚುನಾವಣಾ ಆಯೋಗ ಪ್ರಜಾಪ್ರಭುತ್ವದ ಸ್ವತಂತ್ರ ರಕ್ಷಕನೋ ಅಥವಾ ಮತ ಕಳ್ಳತನವನ್ನು ಕಾನೂನು ಬದ್ಧಗೊಳಿಸಲು ಇರುವ ಬಿಜೆಪಿಯ ಹಿಂಬಾಗಿಲ ಕಚೇರಿಯೋ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಕರ್ನಾಟಕ ಈ ಮೌನವನ್ನು ಒಪ್ಪುವುದಿಲ್ಲ. ನಾವು ಆಯೋಗದಿಂದ ಹೊಣೆಗಾರಿಕೆ, ಉತ್ತರ ಹಾಗೂ ನ್ಯಾಯವನ್ನು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಆಳಂದದಲ್ಲಿ 2023ರಲ್ಲಿ 5,994 ನೈಜ ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡುವಂತೆ ಕೋರಿ ಯಾರೋ ನಕಲಿ ವ್ಯಕ್ತಿಗಳು ಫಾರ್ಮ್ 7 ಮೂಲಕ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಮತದಾರರೆಲ್ಲರೂ ಬಹುತೇಕ ಕಾಂಗ್ರೆಸ್ ಬೆಂಬಲಿಗರೇ ಆಗಿದ್ದರು. ಅಂತಹವರ ಹೆಸರು ಕೈಬಿಡಲು ನಕಲಿ ವ್ಯಕ್ತಿಗಳು ಅರ್ಜಿ ಸಲ್ಲಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿರುವ ಮತಗಳನ್ನೇ ಕದಿಯುವ ವ್ಯವಸ್ಥಿತ ಪಿತೂರಿ ಬಹಿರಂಗವಾಗಿತ್ತು.
ಆದರೆ, ಸಮಯೋಚಿತವಾಗಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮತಗಳು ಅಳಿಸದಂತೆ ನೋಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. ಆ ನಂತರ ನೈಜ ಮತದಾರರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗವು ಇಂತಹ ಅಪರಾಧ ಕೃತ್ಯ ಎಸಗಿರುವವರ ಪತ್ತೆಗೆ ಅಗತ್ಯ ತಾಂತ್ರಿಕ ಮಾಹಿತಿ ತನಿಖಾ ಸಂಸ್ಥೆಗೆ ನೀಡಲು ನಿರಾಕರಿಸಿರುವುದು ತನಿಖೆಗೆ ಅಡ್ಡಿಯಾಗಿದೆ ಎಂದಿದ್ದಾರೆ.
ಈ ರೀತಿ ಮತ ವಂಚನೆಗೆ ಪ್ರಯತ್ನಿಸಿದವರ ಮಾಹಿತಿಯನ್ನು ಆಯೋಗ ಯಾವ ಕಾರಣಕ್ಕೆ ಮುಚ್ಚಿಟ್ಟಿದೆ. ಅರ್ಜಿ ಸಲ್ಲಿಕೆಯ ಮೂಲ ಪತ್ತೆಗಾಗಿ ಸಂಬಂಧಿಸಿದ ಕಂಪ್ಯೂಟರ್ ಐಪಿ ವಿಳಾಸ ಮತ್ತು ಪೋರ್ಟ್‌ಗಳ ನಂಬರ್‌ನ ಮಾಹಿತಿಯನ್ನು ಏಕೆ ನೀಡುತ್ತಿಲ್ಲ. ಆಯೋಗವು ಸ್ವಂತ ಅಪ್ಲಿಕೇಶನ್‌ಗಳಲ್ಲಿ ದುರ್ಬಲ ಒಟಿಪಿ ಪರಿಶೀಲನೆಯ ಕುರಿತು ಯಾವುದೇ ಉತ್ತರಗಳು ನೀಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
