ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ದ್ವೇಷ ಭಾಷಣ ಮಾಡುವ ಯಾರೇ ಆದರೂ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.

ಮಂಗಳೂರು : ಪಕ್ಷದ ಹೈ ಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ . ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ, ಮುಖ್ಯಮಂತ್ರಿ ಆಗಿ ನೀವೇ ಮುಂದುವರಿಯುತ್ತಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. 

ಸಿಎಂ ಸ್ಥಾನ ಕೇಳೋದು ಹಕ್ಕು

ಹೈಕಮಾಂಡ್ ತೀರ್ಮಾನ ಮಾಡಿದ್ರೆ ನಾನೇ ಸಿಎಂ ಎಂದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆಯಲ್ಲಿರುವವರನ್ನು ತಪ್ಪಿಸಲು ಆಗುವುದಿಲ್ಲ, ಸ್ಪರ್ಧೆಯಲ್ಲಿರಬೇಡಿ ಎಂದು ಹೇಳಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಿಎಂ ಸ್ಥಾನ ಕೇಳೋದು ಅವರ ಹಕ್ಕು. ಹೈಕಮಾಂಡ್ ತೀರ್ಮಾನಿಸಿದರೆ ನಾನೇ ಪೂರ್ಣಾವಧಿ ಮುಖ್ಯಮಂತ್ರಿ , 5 ವರ್ಷ ಸಿದ್ದರಾಮಯ್ಯ ಸಿಎಂ ಎಂಬ ಬೆಂಬಲಿಗರ ಹೇಳಿಕೆ ಅವರ ವೈಯಕ್ತಿಕ. ಅಂತಿಮವಾಗಿ ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಹೇಳಿಕೆ ನೀಡಿದ್ದಾರೆ.

ಕರಾವಳಿಗೆ ಪದೇ ಪದೇ ಭೇಟಿ ಯಾವುದೇ ಟಾರ್ಗೆಟ್ ಇಟ್ಟುಕೊಂಡಿಲ್ಲ

ಎಸ್ ಐಟಿ ವರದಿ ಈ ತಿಂಗಳು ಸಿಗಲಿದೆಯೇ ಎಂಬ ಪ್ರಶ್ನೆಗೆ , ಗೃಹ ಸಚಿವರು ಅ ಬಗ್ಗೆ ಹೇಳಿಕೆ ನೀಡಿದ್ದಾರೆ. ನನಗೆ ತಿಳಿದಿಲ್ಲ ಎಂದರು. ಕರಾವಳಿಗೆ ಪದೇ ಪದೇ ಭೇಟಿ ನೀಡುವ ಬಗ್ಗೆ ಯಾವುದೇ ಟಾರ್ಗೆಟ್ ಇಟ್ಟುಕೊಂಡಿಲ್ಲ. ಕಾರ್ಯಕ್ರಮಕ್ಕೆ ನಮ್ಮನ್ನು ಕರೆದಿದ್ದಾರೆ ಬಂದಿದ್ದೇನೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಮೇಲೆ ಪ್ರಕರಣ ದಾಖಲಾದ ಬಗ್ಗೆ ಪ್ರತಿಕ್ರಿಯಿಸಿ,ಯಾರೇ ದ್ವೇಷ ಭಾಷಣ ಮಾಡಿದರೂ ಕೇಸು ದಾಖಲಾಗುತ್ತೆ. ದ್ವೇಷ ಸಮಾಜದಲ್ಲಿ ಒಡಕು ಸೃಷ್ಟಿಸುತ್ತದೆ ಎಂದು ಹೇಳಿದರು.