ಸದ್ಯಕ್ಕೆ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ಈ ವಿಷಯ ಚರ್ಚೆಗೆ ಬಂದಿಲ್ಲ. ಈಗ ನಾನೇ ಅಧ್ಯಕ್ಷನಾಗಿದ್ದೇನೆ ಎಂದು ಜೆಡಿಎಸ್‌ನ ಹಾಲಿ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಅ.24): ಸದ್ಯಕ್ಕೆ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ಈ ವಿಷಯ ಚರ್ಚೆಗೆ ಬಂದಿಲ್ಲ. ಈಗ ನಾನೇ ಅಧ್ಯಕ್ಷನಾಗಿದ್ದೇನೆ ಎಂದು ಜೆಡಿಎಸ್‌ನ ಹಾಲಿ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ ಅವರಿಗೆ ಜವಾಬ್ದಾರಿ ಕೊಡಬೇಕು ಅಂತ ಇದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಆಗಿಲ್ಲ. ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ತಿಳಿಸಿದರು. ಸಮನ್ವಯ ಸಮಿತಿ ರಚನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಆಗಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತಿತರ ಬಿಜೆಪಿ ನಾಯಕರು ಬಂದು ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ರಚನೆ ಬಗ್ಗೆ ತೀರ್ಮಾನ ಆಗಿದೆ. ಒಂದು ವಾರ ಅಥವಾ 10 ದಿನಗಳಲ್ಲಿ ಅದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಕೋರ್ ಕಮಿಟಿ ಪುನಃ ರಚನೆ ವಿಚಾರ ಸಂಬಂಧ ಮಾತನಾಡಿ, ಕೋರ್ ಕಮಿಟಿ ಪುನಃ ರಚನೆ ಬಗ್ಗೆ ನಮ್ಮ ಪಕ್ಷದಲ್ಲಿ ಒಂದು ಸಭೆ ಆಗಿದೆ. ಕೋರ್ ಕಮಿಟಿ ಮತ್ತು ಕಾರ್ಪೋರೇಷನ್ ಚುನಾವಣೆ ಸಂಬಂಧ ಪಕ್ಷ ಸಂಘಟನೆಗೆ ಸಮಿತಿ ಮಾಡುವ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಕೈಗಾರಿಕೆಗಳ ಸ್ಥಾಪನೆಗೆ ಸಮನ್ವಯತೆ ಮುಖ್ಯ
ಜಿಲ್ಲೆಯ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಏನಾದರೊಂದು ಕೈಗಾರಿಕೆ ಸ್ಥಾಪನೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ನನ್ನಲ್ಲಿದೆ. ಅದು ಸಾಧ್ಯವಾಗಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಇರಬೇಕಿರುವುದು ಬಹಳ ಮುಖ್ಯ. ಪರಸ್ಪರರನ್ನು ತೆಗಳುವುದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಹಿಂದೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಸ್ಥಾಪಿಸಿದ ಎಚ್‌ಎಂಟಿ, ಬಿಎಚ್‌ಇಎಲ್, ಎನ್‌ಜಿಎಫ್, ಐಟಿಐನಂತಹ 42 ಸಾರ್ವಜನಿಕ ಉದ್ದಿಮೆಗಳಲ್ಲಿ ಉಳಿದುಕೊಂಡಿರುವುದು ಬಿಎಚ್‌ಇಎಲ್ ಮಾತ್ರ.
ನಾನು ಕೇಂದ್ರ ಸಚಿವನಾದ ಬಳಿಕ ಎಚ್‌ಎಂಟಿ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ವಹಿಸುತ್ತಿದ್ದೇನೆ. ಅದೇ ರೀತಿ ಭದ್ರಾವತಿಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗೂ ಕಾಯಕಲ್ಪ ನೀಡಲಾಗಿದ್ದು ಇನ್ನೊಂದು ವಾರದಲ್ಲಿ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದರು. ಕೈಗಾರಿಕೆಗಳ ಸ್ಥಾಪನೆಗೆ ಜಾಗದ ಕೊರತೆ ತುಂಬಾ ಇದೆ. ರಾಜ್ಯ ಸರ್ಕಾರ ಜಾಗ ಗುರುತಿಸಿ ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಅದನ್ನು ಬಿಟ್ಟು ಪರಸ್ಪರ ನಿಂದಿಸಿಕೊಂಡು ಕುಳಿತರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು.
