ನೀವು ಸಂತೋಷದಲ್ಲಿ ಇದ್ದಾಗ ಕುರುಬರನ್ನು ಒದ್ದಿದ್ದೀರಿ. ನಿಮಗೆ ಕಷ್ಟ ಬಂದಿದೆ ಅಂತ ಕುರುಬರನ್ನು ಬನ್ನಿ ಬನ್ನಿ ಅಂತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ತು ಸದಸ್ಯ ಅಡಗೂರು ಎಚ್.ವಿಶ್ವನಾಥ್ ಆಕ್ರೋಶವನ್ನು ವ್ಯಕ್ತಪಡಿಸಿದರು.

ಮೈಸೂರು (ಸೆ.16): ನೀವು ಸಂತೋಷದಲ್ಲಿ ಇದ್ದಾಗ ಕುರುಬರನ್ನು ಒದ್ದಿದ್ದೀರಿ. ನಿಮಗೆ ಕಷ್ಟ ಬಂದಿದೆ ಅಂತ ಕುರುಬರನ್ನು ಬನ್ನಿ ಬನ್ನಿ ಅಂತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ತು ಸದಸ್ಯ ಅಡಗೂರು ಎಚ್.ವಿಶ್ವನಾಥ್ ಆಕ್ರೋಶವನ್ನು ವ್ಯಕ್ತಪಡಿಸಿದರು. ಕುರುಬ ಸಮುದಾಯ ಎಸ್‌ಟಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಹೋರಾಟಕ್ಕೆ ಸಿದ್ದರಾಮಯ್ಯ ವಿರುದ್ಧ ಇದ್ದವರು. ಕಾಗಿನೆಲೆಯಿಂದ ಬೆಂಗಳೂರಿಗೆ 350 ಕಿ.ಮೀ. ಪಾದಯಾತ್ರೆ ನಡೆಯಿತು. ಪಾದಯಾತ್ರೆ ಯಾಕೆ ಬೇಕಿತ್ತು ಎಂದು ಕೇಳಿದ್ದರು. ಈಗ ಕುರುಬರನ್ನು ಎಸ್‌ಟಿಗೆ ಸೇರಿಸಬೇಕೆಂದು ಶಿಫಾರಸು ಮಾಡಿದ್ದಾರೆ.

ರಿಜಿಸ್ಟರ್ ಜನರಲ್ ಆಫ್ ಇಂಡಿಯಾ(ಆರ್‌ಜಿಐ)ಗೆ ಶಿಫಾರಸು ಮಾಡಬೇಕಿತ್ತು. ಆದರೆ ನೇರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕುರುಬರನ್ನು ಸಿದ್ದರಾಮಯ್ಯ ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಗಿನೆಲೆ ಕನಕಗುರು ಪೀಠಾಧ್ಯಕ್ಷರನ್ನು ಬೀದಿಗೆ ಕಳುಹಿಸಲಿದ್ದಾರೆ. ಸ್ವಾಮೀಜಿ ಅವರೇ, ನೀವು ಸಿದ್ದರಾಮಯ್ಯ ಅವರ ಕಾಲಾಳು ಅಲ್ಲ. ಕಾಂಗ್ರೆಸ್ ಜೀತದಾಳು ಅಲ್ಲ. ಇಲ್ಲವಾದರೆ ಪರಿಸ್ಥಿತಿ ಬೇರೆ ರೀತಿ ಆಗುತ್ತೆ. ಬೀದಿಗಳಿದು ಹೋರಾಟಕ್ಕಿಳಿದರೆ ನಿಮ್ಮ ತಲೆದಂಡ ಆಗಲಿದೆ ಎಂದರು. ನಮಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಷ್ಟೆ ನಿಮಗೆ ಅಧಿಕಾರ ಇರೋದು.

ನೀವ್ ಯಾಕೆ ಪ್ರಧಾನ ಮಂತ್ರಿಗಳ ಬಳಿ ಇದರ ಬಗ್ಗೆ ಧ್ವನಿ ಎತ್ತಲಿಲ್ಲ. ಖರ್ಗೆ ಮತ್ತೆ ಖರ್ಗೆ ಮಗನಿಗೂ ಮೀಸಲಾತಿ. ತಮಟೆ ಬಾರಿಸುವ ಜನ ಸಾಮಾನ್ಯನಿಗೂ ಮೀಸಲಾತಿ. ನನಗೂ ಮೀಸಲಾತಿ, ಸಾಮಾನ್ಯ ಕುರಿ ಕಾಯುವ ಜನರಿಗೂ ಮೀಸಲಾತಿ. ಅಂಬೇಡ್ಕರ್ ಹೇಳಿದ್ದು ಮೀಸಲಾತಿ ಪಡೆದವರು ಬೇರೆಯವರಿಗೆ ಬಿಡಬೇಕು ಅಂದಿದ್ರು. ರಾಜಕಾರಣಿಗಳು ಬೊಗಳೆ ಭಾಷಣ ಮಾಡೋದಲ್ಲ. ಉಳ್ಳವರು ಮೀಸಲಾತಿ ಮೂಲಕ ಮೇಲಕ್ಕೆ ಬಂದವರು, ಮೀಸಲಾತಿ ಪಡೆಯದವರಿಗೆ ಬಿಟ್ಟು ಕೊಡಿ. ನಾನು ಮೀಸಲಾತಿ ಬಿಟ್ಟುಕೊಡಲು ಮುಂದಾಗಿದ್ದೇನೆ ಎಂದು ಹೇಳಿದರು.

ಹೈಕೋರ್ಟ್ ಹಸಿರು ನಿಶಾನೆ

ಬಾನು ಮುಷ್ತಾಕ್ ದಸರಾ ಮಹೋತ್ಸವ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದು ಸ್ವಾಗತಾರ್ಹ. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೀಗ ನ್ಯಾಯಾಲಯ ಅನುಮತಿ ನೀಡಿದೆ. ಇದು ಸ್ವಾಗತಾರ್ಹ ಎಂದು ವಿಶ್ವನಾಥ್ ತಿಳಿಸಿದರು.