ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿಗಳಿಗೆ ಫೇಕ್ ಸರ್ಟಿಫಿಕೇಟ್ ಮೂಲಕ ಸಮರ್ಥನೆ ಮಾಡಿಕೊಳ್ಳಲು ಹೊರಟಿದೆ. ಜನರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಚಿಕ್ಕಮಗಳೂರು (ಅ.18): ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿಗಳಿಗೆ ಫೇಕ್ ಸರ್ಟಿಫಿಕೇಟ್ ಮೂಲಕ ಸಮರ್ಥನೆ ಮಾಡಿಕೊಳ್ಳಲು ಹೊರಟಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಎನ್ನುವ ಹೆಸರಿನಲ್ಲಿ ಒಂದು ಸರ್ಟಿಫಿಕೇಟ್ ಸಿಕ್ಕಿದೆ ಎಂದು ಸಾರಿಗೆ ಸಚಿವರು, ಸಾರಿಗೆ ಇಲಾಖೆಯವರು ಹೇಳುತ್ತಿದ್ದಾರೆ. ಹೆಸರು ಲಂಡನ್ ಬುಕ್ ವರ್ಲ್ಡ್ ರೆಕಾರ್ಡ್ ಆದರೆ ಅದರ ಹೆಡ್ ಆಫೀಸ್ ಕ್ರುವೇಶಿಯಾ ಎಂದು ತೋರಿಸುತ್ತಿದೆ. ₹5 ಸಾವಿರ ಕೊಟ್ಟರೆ ಗೋಲ್ಡನ್ ಸರ್ಟಿಫಿಕೇಟ್ ಸಿಗುತ್ತದೆ. ₹ 6 ಸಾವಿರ ಕೊಟ್ಟರೆ ಡೈಮಂಡ್ ಸರ್ಟಿಫಿಕೇಟ್ ಸಿಗುತ್ತದೆ. ₹10 ಸಾವಿರ ಕೊಟ್ಟರೆ ಪ್ಲಾಟಿನಂ ಸರ್ಟಿಫಿಕೇಟ್ ಸಿಗುತ್ತದೆ ಎಂದು ಹೇಳಿದರು.

ಈ ಸರ್ಕಾರಕ್ಕೆ ಎಂತಹ ದುಸ್ಥಿತಿ ಬಂದಿದೆ ಎಂದರೆ, ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಇವರು ಫೇಕ್ ಸರ್ಟಿಫಿಕೇಟ್ ತೋರಿಸಿ ಕೊಂಡು ಗುಲಾಮಗಿರಿಯ ಸಂಭ್ರಮದಲ್ಲಿ ತೊಡಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಜನ ಸರ್ಟಿಫಿಕೇಟ್ ಕೊಡ ಬೇಕು. ಚುನಾವಣೆ ಬಂದಾಗ ಹಣೇಬರಹ ಗೊತ್ತಾಗುತ್ತದೆ. ಗ್ಯಾರಂಟಿಯನ್ನ ಮೆಚ್ಚಿದ್ದಾರೋ ಇಲ್ಲವೋ ಅಥವಾ ಬೆಲೆ ಏರಿಕೆಗೆ, ಕೆಟ್ಟ ಆಡಳಿತಕ್ಕೆ ಬರೆ ಹಾಕುತ್ತಾರೋ ಎಲ್ಲವೂ ಗೊತ್ತಾಗುತ್ತದೆ ಎಂದರು. ಸರ್ಕಾರದ ಗ್ಯಾರಂಟಿಯೇ ಕೆಲಸ ಮಾಡುವುದಾದರೆ ಲೋಕಸಭೆ ಚುನಾವಣೆಯಲ್ಲಿ ಪೂರ್ತಿ ಸ್ಥಾನ ಅವರೇ ಗೆಲ್ಲಬೇಕು. ಆದರೆ 19 ಸ್ಥಾನಗಳಲ್ಲಿ ಸೋತರು. ಈಗ ಫೇಕ್ ಸರ್ಟಿಫಿಕೇಟ್ ಇಟ್ಟುಕೊಂಡು ಹೊರಟ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಏನೂ ಇಲ್ಲದಂತಾಗಿದೆ ಎಂದು ಟೀಕಿಸಿದರು.

ಆರ್ಥಿಕವಾಗಿ ಸಾಗುವ ಸಂಕಲ್ಪದಿಂದ ಭಾರತ ಬಲಿಷ್ಟ

ಭಾರತ ಉತ್ಪಾದಕರ ರಾಷ್ಟ್ರವಾದರೆ, ದೇಶ ಶ್ರೀಮಂತವಾಗಲಿದೆ. ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕತೆಯಲ್ಲಿ ಒಂದೊಂದು ಹೆಜ್ಜೆ ಮುಂದೆ ಸಾಗುವ ಸಂಕಲ್ಪ ಮಾಡಬೇಕು. ಆಗ ಜಗತ್ತಿನ ಎದುರು ಭಾರತ ಬಲಿಷ್ಟವಾಗಿ ನೆಲೆಯೂರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಮಂಡಲದಿಂದ ಆಯೋಜಿಸಿದ್ಧ ಆತ್ಮನಿರ್ಭರ ಭಾರತ ಅಭಿಯಾನದ ಕಾರ್ಯಾ ಗಾರದಲ್ಲಿ ಮಾತನಾಡಿದ ಅವರು, ಭಾರತೀಯರು ಸಕಾರಾತ್ಮಕವಾಗಿ ಯೋಚಿಸಿ ಗ್ರಾಹಕ ರಾಷ್ಟ್ರದಿಂದ, ಉತ್ಪಾದಕ ರಾಷ್ಟ್ರವಾಗುವ ಮೂಲಕ ಸ್ವದೇಶಿ ಬಳಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.

ಪ್ರತಿ ಕುಟುಂಬದಲ್ಲಿ ಮನುಷ್ಯ ದೈನಂದಿನ ಬಳಸುವ ಸ್ವದೇಶಿ ಹಾಗೂ ವಿದೇಶಿ ವಸ್ತುಗಳನ್ನು ಪಟ್ಟಿ ಮಾಡಬೇಕು. ಹಂತ ಹಂತವಾಗಿ ಸ್ವದೇಶಿ ಉತ್ಪಾದಕತೆಗೆ ಹೆಚ್ಚಿನ ಒತ್ತು ನೀಡಿದರೆ ಸಂಪೂರ್ಣ ಲಾಭಾಂಶ ದೇಶದ ನಾಗರಿಕರಿಗೆ ತಲುಪುತ್ತದೆ. ಹೆಚ್ಚು ವಿದೇಶಿ ವಸ್ತು ಬಳಸಿದರೆ ಲಾಭಾಂಶ ವಿದೇಶಕ್ಕೆ ತೆರಳಿ, ಭಾರತೀಯರು ಗ್ರಾಹಕರಾಗುತ್ತಾರೆ ಎಂದರು.ಪ್ರಪಂಚದ ಎದುರು ಭಾರತ 2ನೇ ಅತಿದೊಡ್ಡ ರಾಷ್ಟ್ರವಾಗಲಿದೆ ಎಂಬುದು ಮನಗಂಡ ಅಮೇರಿಕಾ ಅಧ್ಯಕ್ಷರು, ವಿಪರೀತ ತೆರಿಗೆ ಏರಿಸಿ ದುರ್ಬಲಗೊಳಿಸಲು ಮುಂದಾಗುತ್ತಿದ್ದಾರೆ. ಇದರಿಂದ ಭಾರತೀಯರು ಪರಿಹಾರ ಕಂಡುಕೊಳ್ಳಲು ಸ್ವದೇಶಿ ಯಾಗುವ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.