ನನಗೆ ಮಂತ್ರಿಯಾಗುವ ಅವಕಾಶವಿತ್ತು. ಆದರೆ, ಪಕ್ಷಕ್ಕಾಗಿ ತ್ಯಾಗ ಮಾಡಿ ಲೋಕಸಭೆಗೆ ಸ್ಪರ್ಧಿಸಿದೆ. ಇದೆಲ್ಲವೂ ಪಕ್ಷದ ಹೈಕಮಾಂಡ್‌ಗೆ ಗೊತ್ತಿದೆ. ಹೀಗಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಸಂಸದ ಈ.ತುಕಾರಾಂ ತಿಳಿಸಿದರು.
ಬಳ್ಳಾರಿ (ಅ.14): ನನಗೆ ಮಂತ್ರಿಯಾಗುವ ಅವಕಾಶವಿತ್ತು. ಆದರೆ, ಪಕ್ಷಕ್ಕಾಗಿ ತ್ಯಾಗ ಮಾಡಿ ಲೋಕಸಭೆಗೆ ಸ್ಪರ್ಧಿಸಿದೆ. ಇದೆಲ್ಲವೂ ಪಕ್ಷದ ಹೈಕಮಾಂಡ್‌ಗೆ ಗೊತ್ತಿದೆ. ಹೀಗಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಸಂಸದ ಈ.ತುಕಾರಾಂ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾಡಿರುವ ತ್ಯಾಗ ಪಕ್ಷಕ್ಕೆ ಗೊತ್ತಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಕೇಳದಿದ್ದರೂ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಕಾಂಗ್ರೆಸ್ ಸಂಸ್ಕೃತಿಯೇ ಹಾಗೆ. ಕೇಳದೇ ನೀಡುತ್ತದೆ ಎನ್ನುವ ಮೂಲಕ ಪತ್ನಿ ಈ.ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ನಿಷೇಧ ವಿಚಾರ ಕುರಿತು ಕೇಳಿದ ಪ್ರಶ್ನೆಗೆ, ದೇಶದ ಭವಿಷ್ಯದ ದೃಷ್ಟಿಯಿಂದ ಚಿಂತನೆ ನಡೆಯುತ್ತಿದೆ. ಗಾಂಧೀಜಿಯನ್ನು ಕೊಂದದ್ದು ಯಾರು? ಗೋಡ್ಸೆ ಅಲ್ವೇ? ಎಂದು ಪ್ರಶ್ನಿಸಿದರು. ಈ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಮುಂದೆ ಯಾವ ಅವಘಡ ಆಗದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಪ್ರಿಯಾಂಕ್ ಹೇಳಿಕೆಯನ್ನು ಸಮರ್ಥಿಸಿದರು.
ದೀಪಾವಳಿ ಬಳಿಕ ರೇಡಿಯೋಪಾರ್ಕ್ ರೈಲ್ವೆ ಮೇಲ್ಸೇತುವೆಗೆ ಭೂಮಿಪೂಜೆ
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಗರದ ರೇಡಿಯೋ ಪಾರ್ಕ್ ನ 2ನೇ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪುನಾರಂಭಕ್ಕೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ದೀಪಾವಳಿ ಹಬ್ಬದ ನಂತರ ಭೂಮಿಪೂಜೆ ನೆರವೇರಿಸುವರು.ಇದಕ್ಕೆ ಅರಣ್ಯ ಇಲಾಖೆಯ ಜಾಗಕ್ಕೆ ಸಂಬಂಧಿಸಿದಂತೆ ಹಣ ಪಾವತಿಸಿದರೆ ಕಾಮಗಾರಿ ಆರಂಭವಾಗಲಿದೆ. ಈ ಕುರಿತು ರೈಲ್ವೆ ಕೇಂದ್ರ ಕಚೇರಿಯ ಗಮನಕ್ಕೆ ತರಬೇಕು. ಇದಕ್ಕೆ ಬೇಕಾದ ಅಗತ್ಯ ಅನುದಾನ ಕೂಡ ಒದಗಿಸಲಾಗುವುದು. ಹಾಗಾಗಿ ಪರಿಷ್ಕೃತ ರೈಲ್ವೆ ಅಲೈನ್ಮೆಂಟ್ ಯೋಜನಾ ವರದಿ ಸಲ್ಲಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸಂಸದ ಈ.ತುಕಾರಾಂ ಸೂಚಿಸಿದರು.
ನಗರದೊಳಗೆ ಭಾರೀ ಗಾತ್ರದ ವಾಹನಗಳು ಸಂಚಾರಕ್ಕೆ ಕಡಿವಾಣ ಹಾಕಲು ಈಗಾಗಲೇ ಪ್ರಗತಿಯಲ್ಲಿರುವ ರಿಂಗ್ ರೋಡ್ ಕಾಮಗಾರಿಯು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಬಳ್ಳಾರಿ- ಹೊಸಪೇಟೆಗೆ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ಕೇವಲ 4-5 ಕಿ.ಮೀ. ಉದ್ದ ಬಾಕಿ ಇದ್ದು, ತ್ವರಿತವಾಗಿ ಪೂರ್ಣಗೊಳಿಸಬೇಕು. ಸಿರುಗುಪ್ಪಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಗೆ ಸಹ ವೇಗ ನೀಡಬೇಕು. ನಗರ ಹೊರವಲಯದ ಬಿಐಟಿಎಂ ಎಂಜಿನಿಯರಿಂಗ್ ಕಾಲೇಜು ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಸುಧಾಕ್ರಾಸ್ ವರೆಗೆ ಕೈಗೊಳ್ಳಲು ಉದ್ದೇಶಿಸಲಾಗಿರುವ 4 ಲೈನ್ ರಸ್ತೆಗೆ ಸೂಕ್ತ ಸರ್ವೇ ನಡೆಸಿ ನಡೆಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಹತ್ತಿರದ ಶಾಲೆಯ ಖಾಲಿ ಇರುವ ಕೊಠಡಿಗಳಿಗೆ ಸ್ಥಳಾಂತರಿಸಬೇಕು. ಜಿಲ್ಲೆಯ ಬಹುತೇಕ ಶಾಲೆಗಳ ಶೌಚಾಲಯಗಳು ನಿರ್ವಹಣೆಯಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಗಮನ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
