ಹುಟ್ಟುಹಬ್ಬದ ಪ್ರಯುಕ್ತ ಸಚಿವ ಡಾ। ಜಿ.ಪರಮೇಶ್ವರ್ ಅವರು ಆಂಧ್ರಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ಬೆಂಗಳೂರು (ಆ.07): ಹುಟ್ಟುಹಬ್ಬದ ಪ್ರಯುಕ್ತ ಸಚಿವ ಡಾ। ಜಿ.ಪರಮೇಶ್ವರ್ ಅವರು ಆಂಧ್ರಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಪತ್ನಿಯ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪರಮೇಶ್ವರ್ ಅವರೊಂದಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್, ಎಂಎಲ್‌ಸಿ ರಾಮೋಜಿಗೌಡ, ಟಿಟಿಡಿ ಸದಸ್ಯ ದರ್ಶನ್ ಉಪಸ್ಥಿತರಿದ್ದರು. ಇನ್ನು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಅವರ ಅಭಿಮಾನಿಗಳು, ಕಾಂಗ್ರೆಸ್ ಅಭಿಮಾನಿಗಳು ವಿವಿಧ ಸಂಘಟನೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಹುಟ್ಟುಹಬ್ಬ ಆಚರಿಸಿದರು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಂಪಲು, ಹಾಲು, ಬ್ರೆಡ್ ವಿತರಿಸಿ ಶುಭ ಹಾರೈಸಿದರು.
ಪರಂ ಸಿಎಂ ಆದರೆ ಅಭಿವೃದ್ಧಿ ಸಾಧ್ಯ: ಭವಿಷ್ಯದ ತುಮಕೂರು ಹೇಗಿರಬೇಕು ಎಂಬ ದೂರದೃಷ್ಟಿ ಹಿನ್ನೆಲೆಯಲ್ಲಿ ಹಾಲಪ್ಪ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶೃಂಗಸಭೆಯಲ್ಲಿ ಬಹುತೇಕ ಸ್ವಾಮೀಜಿಗಳು ಈ ಜಿಲ್ಲೆಗೆ ಗಟ್ಟಿ ನಾಯಕತ್ವ ಅಗತ್ಯವಿದೆ. ಗೃಹ ಸಚಿವರಾಗಿರುವ ಡಾ। ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾದರೆ, ಜಿಲ್ಲೆಯ ಅಭಿವೃದ್ದಿ ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಆರಂಭದಲ್ಲಿ ಶೃಂಗಸಭೆ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ, ಬೆಂಗಳೂರು ಹೌಸ್‌ಫುಲ್ ಆಗಿದೆ. ಅಲ್ಲಿಯ ಒತ್ತಡ ಕಡಿಮೆ ಆಗಬೇಕೆಂದರೆ ಹತ್ತಿರದಲ್ಲಿಯೇ ಇರುವ ತುಮಕೂರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯಬೇಕು.
ಇಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದರೆ ಐಟಿ ಕಂಪನಿಗಳಿಗೆ ಜಾಗ ಒದಗಿಸಿದರೆ ಹೆಚ್ಚು ಬೆಳವಣಿಗೆಯನ್ನು ನಿರೀಕ್ಷಿಸಬಹುದು ಎಂದರು. ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದಜೀ ಮಾತನಾಡಿ, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗೃಹ ಮಂತ್ರಿಗಳಾಗಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಇನ್ನು ಹೆಚ್ಚಿನ ಅಧಿಕಾರ ಸಿಕ್ಕು, ರಾಜ್ಯಕ್ಕೆ ಉತ್ತಮ ನಾಯಕತ್ವ ಲಭಿಸುವಂತಾಗಲಿ ಎಂದರು.
ಶ್ರೀರಾಮಕೃಷ್ಣ-ವಿರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಕುಂಚಟಿಗ ಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇಚ್ಚಾಸಕ್ತಿ ಇರುವ ರಾಜಕಾರಣಿಗಳ ಅಗತ್ಯವಿದೆ. ಗೃಹ ಸಚಿವರಾಗಿರುವ ಡಾ। ಜಿ.ಪರಮೇಶ್ವರ ದೂರದೃಷ್ಟಿಯುಳ್ಳ ರಾಜಕಾರಣಿ. ಅವರಿಗೆ ಒಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಕೈತಪ್ಪಿದೆ. ಅವರು ಮುಖ್ಯಮಂತ್ರಿಯಾದರೆ ಇಂದು ನಾವು ಹೆಸರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಮೆಟ್ರೋ,ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಜಿಲ್ಲೆಯ ದೊರೆಯಲಿವೆ ಎಂಬ ವಿಶ್ವಾಸವಿದೆ ಎಂದರು.
