ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸ್ಪೀಕರ್ ಅಬ್ದುಲ್ ರಹೀಮ್ ರಾಥೇರ್ ಅವರು ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಇದು ಕೇವಲ ಸೌಹಾರ್ದಯುತ ಭೇಟಿ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಹಾಸನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರದ ಬಗ್ಗೆಯೂ ಚರ್ಚಿಸಿದ್ದಾರೆ.
ಬೆಂಗಳೂರು (ಸೆ.14): ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸ್ಪೀಕರ್ ಅಬ್ದುಲ್ ರಹೀಮ್ ರಾಥೇರ್ ಅವರು ಭೇಟಿಯಾದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರು ನಮ್ಮ ಪಾಲುದಾರರು, ಇಂಡಿಯಾ ಪಾಲುದಾರರು. ಇದು ಸೌಹಾರ್ದಯುತ ಭೇಟಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನಲ್ಲಿರುವ ಸದಾಶಿವ ನಗರದ ಮನೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸ್ಪೀಕರ್ ಅಬ್ದುಲ್ ರಹೀಮ್ ರಾಥೇರ್ ಅವರು ಆಗಮಿಸಿ, ಚರ್ಚೆ ಮಾಡಿದ್ದಾರೆ. ಈ ಭೇಟಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು, ಇದು ಕೇವಲ 'ಕಮಿಟಿ ಕಾಲ್'. ಅವರು ನಮ್ಮ ಪಾಲುದಾರರು, ಇಂಡಿಯಾ ಪಾಲುದಾರರು. ಅವರು ಸಾಕಷ್ಟು ಇಲಾಖೆಗಳಲ್ಲಿ ಮಂತ್ರಿಗಳಾಗಿದ್ದವರು. ಆ ದೃಷ್ಟಿಯಿಂದ ಇದು ಕೇವಲ ಸೌಹಾರ್ದಯುತ ಭೇಟಿ ಅಷ್ಟೇ, ಎಂದು ಹೇಳಿದರು.
ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಪ್ರತಿಕ್ರಿಯೆ ನಿರಾಕರಣೆ: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಕೇಳಿದಾಗ, 'ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಅದನ್ನು ಅವರಿಗೆ ಬಿಟ್ಟುಬಿಡುತ್ತೇನೆ. ಇನ್ನು ಜಾತಿ ಜನಗಣತಿ ಕಾಲಂನಲ್ಲಿ ಹಿಂದೂ ಜಾತಿಗಳಿಗೆ ಕ್ರಿಶ್ಚಿಯನ್ ಸೇರ್ಪಡೆ ಮಾಡಿರುವ ವಿಚಾರದ ಬಗ್ಗೆ ಕೇಳಿದಾಗ, 'ನಾನು ಇನ್ನೂ ನೋಡಿಲ್ಲ, ಕಾಗದಪತ್ರಗಳು ಬಂದಿವೆ. ನೋಡಿದ ನಂತರ ಮಾತನಾಡುತ್ತೇನೆ' ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಹಾಸನ ದುರಂತ: ಪರಿಹಾರ ಹೆಚ್ಚಳದ ಬಗ್ಗೆ ಮಾಹಿತಿ
ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಟ್ರಕ್ ಹರಿದು ಮೃತಪಟ್ಟ 10 ಜನ ಗಣೇಶನ ಭಕ್ತರ ಕುಟುಂಬಗಳಿಘೆ ಪರಿಹಾರ ಹೆಚ್ಚಳದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಹಾಸನ ಜಿಲ್ಲೆ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರು ಬೆಳಿಗ್ಗೆಯೇ ಈ ಬಗ್ಗೆ ಮಾತನಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಹೋಗಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ನಾವು ಈಗಾಗಲೇ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಉಳಿದ ವಿಷಯಗಳನ್ನು ನಂತರ ಚರ್ಚಿಸೋಣ' ಎಂದು ಹೇಳಿದರು.
ಉಸ್ತುವಾರಿ ನೇಮಕ ಮತ್ತು ಬಿಪಿಎಲ್ ಕಾರ್ಡ್ ರದ್ದು:
ಪಕ್ಷದ ಶಾಸಕರಿಗೆ ಉಸ್ತುವಾರಿ ನೇಮಕದ ಬಗ್ಗೆ ಮಾತನಾಡಿದ ಡಿಕೆಶಿ, 'ನಮ್ಮ ಪಕ್ಷದ ಶಾಸಕರು ಪಕ್ಷದ ಕೆಲಸಗಳನ್ನು ಮಾಡಬೇಕು. ಅವರ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರ ಜವಾಬ್ದಾರಿ. ಅದಕ್ಕಾಗಿ ಅವರಿಗೆಲ್ಲಾ ಜವಾಬ್ದಾರಿ ವಹಿಸಿದ್ದೇವೆ. ಇಂದಿನಿಂದಲೇ ಅವರು ಹೊಸ ನಾಯಕರನ್ನು ತಯಾರಿ ಮಾಡಬೇಕು. ಮುಂದಿನ ದಿನಗಳಲ್ಲಿ 'ಶಾಡೋ ಮೇಯರ್'ಗಳನ್ನು ಸಿದ್ಧಪಡಿಸಬೇಕು. ಅದಕ್ಕಾಗಿ ಯಾರು ಸೂಕ್ತ ವ್ಯಕ್ತಿಗಳು ಎಂಬುದನ್ನು ಗುರುತಿಸಲು ಸೂಚಿಸಲಾಗಿದೆ,' ಎಂದು ಮಾಹಿತಿ ನೀಡಿದರು. ಇನ್ನು ಬಿಪಿಎಲ್ ಕಾರ್ಡ್ ರದ್ದು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಅದಕ್ಕೆ ಸಂಬಂಧಪಟ್ಟ ಇಲಾಖೆ ಇದೆ, ಅವರು ಆ ಬಗ್ಗೆ ನೋಡಿಕೊಳ್ಳುತ್ತಾರೆ' ಎಂದು ಹೇಳಿದರು.
