ನವೆಂಬರ್ 21 ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಡಿಕೆಶಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.  

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ ನವೆಂಬರ್ 21ರಂದು ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ಮಾತು. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಹರಿದಾಡುತ್ತಿದ್ದಂತೆಯೇ, ಪತ್ರಕರ್ತರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಪತ್ರಕರ್ತರೊಬ್ಬರು “ನವೆಂಬರ್ 21 ರಂದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಸುದ್ದಿ ಬಂದಿದೆ. ಅದರಲ್ಲಿ ಎಷ್ಟು ಸತ್ಯ?” ಎಂದು ಕೇಳಿದಾಗ, ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾದ್ರು , ಏರು ಧ್ವನಿಯಲ್ಲಿ ಅ ಪ್ರತಿಕ್ರಿಯಿಸಿ “ನಿನಗೆ ಹೇಳಿದ್ರಾ? ನಿನ್ಗೆ ಹೇಗೆ ಗೊತ್ತಾಯ್ತು? ಯಾವ ಪತ್ರಿಕೆಯಲ್ಲಿ ನೋಡಿದೀಯಾ? ನಾನು ಎಲ್ಲ ಪತ್ರಿಕೆ ಓದುತ್ತೇನೆ. ನಾನು ಎಲ್ಲೂ ನೋಡಿಲ್ಲ ಎಂದು ತೀವ್ರ ಪ್ರತಿಕ್ರಿಯೆ ನೀಡಿದರು. ಈ ಹೇಳಿಕೆಯಿಂದ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಒಳರಾಜಕೀಯ ಮಾತುಗಳಿಗೆ ಮತ್ತಷ್ಟು ಪುಷ್ಟಿ ನೀಡುಂತಾಗಿದೆ.

ನವೆಂಬರ್‌ನಲ್ಲಿ ಕ್ರಾಂತಿ? ಡಿಕೆಶಿ ಕಡೆಯಿಂದ ಹೈಕಮಾಂಡ್‌ಗೆ ಸಂದೇಶ

ಪಕ್ಷದ ಆಂತರಿಕ ವರದಿಗಳ ಪ್ರಕಾರ, ಡಿಕೆ ಶಿವಕುಮಾರ್ ಅವರು ಹೈಕಮಾಂಡ್‌ಗೂ, ತಮ್ಮ ಆಪ್ತ ಶಾಸಕರಿಗೂ ನವೆಂಬರ್‌ನಲ್ಲಿ ಕ್ರಾಂತಿಯಾಗಬೇಕೆಂದು ಆಗಬೇಕೆಂಬ ಸಂದೇಶವನ್ನು ರವಾನಿಸಿರುವುದಾಗಿ ತಿಳಿದುಬಂದಿದೆ. ಡಿಕೆಶಿ ಅವರು ನವೆಂಬರ್ 21ರೊಳಗೆ ತಾನೇ ಸಿಎಂ ಆಗಬೇಕು ಎಂದು ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದ್ದಾರಂತೆ. ಅಷ್ಟೇ ಅಲ್ಲದೆ, ಡಿಕೆಶಿ ಅವರು ಸಿದ್ದರಾಮಯ್ಯ ಆಪ್ತರೊಬ್ಬರಿಗೂ ಕರೆ ಮಾಡಿ “ನಿಗದಿತ ದಿನಾಂಕದೊಳಗೆ ಬದಲಾವಣೆ ಆಗದಿದ್ದರೆ ಮುಂದೇನು ಮಾಡಬೇಕೆಂದು ನನಗೆ ಗೊತ್ತಿದೆ” ಎಂದು ಹೇಳಿರುವ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಹೈಕಮಾಂಡ್‌ನ ಬಳಿಗೂ ಮೆಸೇಜ್ ಪಾಸ್?

ವರದಿ ಪ್ರಕಾರ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರ ಅತ್ಯಂತ ಆಪ್ತರ ಬಳಿಗೂ ಇದೇ ಸಂದೇಶವನ್ನು ರವಾನಿಸಿದ್ದಾರಂತೆ. “ಪಕ್ಷದ ಹಿತಕ್ಕಾಗಿ ತೀರ್ಮಾನ ತೆಗೆದುಕೊಳ್ಳಬೇಕು” ಎಂಬ ಭಾವನಾತ್ಮಕ ಮನವಿ ಅವರಿಂದ ಹೈಕಮಾಂಡ್‌ಗೆ ಹೋಗಿರುವುದಾಗಿ ವರದಿಯಾಗಿದೆ.

ಸಿದ್ದರಾಮಯ್ಯ ಪಾಳೆಯದಲ್ಲಿ ಚರ್ಚೆಯ ಅಲೆ

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪಾಳೆಯದಲ್ಲಿಯೂ ಚರ್ಚೆಯ ಅಲೆ ಎದ್ದಿದೆ. “ಡಿಕೆಶಿ ನಿಗದಿಪಡಿಸಿರುವ ಡೆಡ್‌ಲೈನ್ ಮಾತು ನಿಜವೇ?”, “ಹೈಕಮಾಂಡ್ ಇದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು?” ಎಂಬ ಪ್ರಶ್ನೆಗಳು ಕಾಂಗ್ರೆಸ್ ಮ ಸಿದ್ದರಾಮಯ್ಯ ಅವರ ಬಳಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಪಕ್ಷದ ಹಿರಿಯ ನಾಯಕರು ಈ ಕುರಿತು ನಿಶ್ಚಿತ ಅಭಿಪ್ರಾಯ ನೀಡದಿದ್ದರೂ, ಸಿಎಂ ಸಿದ್ದರಾಮಯ್ಯ ಅವರ ತೀವ್ರ ಪ್ರತಿಕ್ರಿಯೆಯು ವಿಷಯಕ್ಕೆ ಹೊಸ ತಿರುವು ನೀಡಿದೆ.

ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯೇ?

ಡಿಕೆ ಶಿವಕುಮಾರ್ ಅವರು ನವೆಂಬರ್‌ನಲ್ಲಿ ಮೂರು ದಿನಾಂಕಗಳನ್ನು ನಿಗದಿ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಆದರೆ ಯಾವ ದಿನಾಂಕ ಅಂತಿಮವಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಸಿಎಂ ಸ್ಥಾನ ಬದಲಾವಣೆಯ ಮಾತುಗಳು ಹೈಕಮಾಂಡ್ ಹಂತದಲ್ಲಿ ಎಷ್ಟು ಗಂಭೀರವಾಗಿ ಪರಿಗಣನೆಗೆ ಒಳಪಡುತ್ತದೆ ಎಂಬುದೇ ಈಗ ರಾಜ್ಯ ರಾಜಕೀಯದ ಹಾಟ್ ಟಾಪಿಕ್ ಆಗಿದೆ. ಒಟ್ಟಿನಲ್ಲಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಅಧಿಕಾರ ಹಂಚಿಕೆ ವಿವಾದ ಈಗ ಕಾಂಗ್ರೆಸ್ ಬಳಗದಲ್ಲಿ ಮತ್ತೆ ಕಿಚ್ಚು ಹಚ್ಚಿದ್ದು, ನವೆಂಬರ್ ತಿಂಗಳು ರಾಜ್ಯ ರಾಜಕೀಯಕ್ಕೆ ಮತ್ತೊಂದು ತಿರುವು ನೀಡುವ ಸಾಧ್ಯತೆ ಇದೆ.