ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ದೆಹಲಿ ಭೇಟಿಯ ಕುರಿತಾದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಇದು ಸಂಪೂರ್ಣವಾಗಿ ಖಾಸಗಿ ಭೇಟಿಯೆಂದು ಸ್ಪಷ್ಟಪಡಿಸಿದ್ದಾರೆ. ಹಿರಿಯ ನಾಯಕಿ ಅಂಬಿಕಾ ಸೋನಿ ಅವರಿಗೆ ಸಾಂತ್ವನ ಹೇಳಲು ಹೋಗಿದ್ದಾಗಿ ತಿಳಿಸಿದರು.

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿ ಭೇಟಿ ನೀಡಿದರ ಬಗ್ಗೆ ಇಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ದೆಹಲಿಯ ಪ್ರಯಾಣದ ಕುರಿತು ಸ್ಪಷ್ಟನೆ ನೀಡಿದರು. ನಾನು ನಮ್ಮ ಪಕ್ಷದ ಹಿರಿಯ ವರ್ಕಿಂಗ್ ಕಮಿಟಿ ಸದಸ್ಯೆ ಅಂಬಿಕಾ ಸೋನಿ ಅವರ ಮನೆಗೆ ಭೇಟಿ ನೀಡಿದ್ದೆ. ಅವರ ಮನೆಯವರು ಇತ್ತೀಚೆಗೆ ತೀರಿಕೊಂಡಿದ್ದರು. ಆದ್ದರಿಂದ ಸಾಂತ್ವನ ಸೂಚಿಸಲು ನಾನು ಖಾಸಗಿಯಾಗಿ ಅವರ ಮನೆಗೆ ಹೋಗಿದ್ದೆ ಎಂದರು.

ಮುಂದುವರಿಸಿ ಮಾತನಾಡಿದ ಡಿಕೆಶಿ “ನಾನು ತಿಹಾರ್ ಜೈಲಿನಲ್ಲಿ ಇದ್ದಾಗ ಅಂಬಿಕಾ ಸೋನಿ ಹಾಗೂ ಸೋನಿಯಾ ಗಾಂಧಿ ಇಬ್ಬರೂ ಬಂದು ನನ್ನನ್ನು ಭೇಟಿಯಾದರು. ಅವರೊಂದಿಗೆ ನನಗೆ ಬಹಳ ಆತ್ಮೀಯ ಸಂಬಂಧವಿದೆ. ಅಂಬಿಕಾ ಸೋನಿ ಅವರು ನಮ್ಮ ಪಕ್ಷದ ಹಿರಿಯ ನಾಯಕಿ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರು ಪಕ್ಷದ ಜನರಲ್ ಸೆಕ್ರೆಟರಿಯಾಗಿದ್ದರು. ಆಗಿನಿಂದಲೇ ಅವರು ನನ್ನನ್ನು ತಮ್ಮನಂತೆ ಪ್ರೋತ್ಸಾಹಿಸುತ್ತಿದ್ದರು. ಆದ್ದರಿಂದ ನನ್ನ ಈ ಭೇಟಿಯು ಸಂಪೂರ್ಣವಾಗಿ ಖಾಸಗಿಯಾಗಿತ್ತು ಎಂದರು.

ಹೈಕಮಾಂಡ್ ಭೇಟಿಯ ಚರ್ಚೆ ಕುರಿತು ಸ್ಪಷ್ಟನೆ

ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ಹೋಗಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ “ಅದಕ್ಕೆ ಸಂಬಂಧಿಸಿದಂತೆ ಯಾರೇನು ಚರ್ಚೆ ಮಾಡಬೇಕೋ ಮಾಡಲಿ. ಚರ್ಚೆ ಏನು ಬೇಕಿದ್ರು ಮಾಡಿಕೊಳ್ಳಲಿ. ಚರ್ಚೆ ಮಾಧ್ಯಮಗಳು ಮಾಡಿಕೊಳ್ಳಿ ಜನನೂ ಮಾಡಿಕೊಳ್ಳಲಿ. ಆದರೆ ನಾನು ಹೋಗಿದ್ದದ್ದು ಖಾಸಗಿ ಕೆಲಸಕ್ಕಾಗಿ ಮಾತ್ರ. ಅದಕ್ಕಿಂತ ಹೆಚ್ಚು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯ ಹೇಳಿಕೆ ಕುರಿತು ಪ್ರತಿಕ್ರಿಯೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಹೈಕಮಾಂಡ್ ತೀರ್ಮಾನಿಸಿದರೆ ನಾನು ಪೂರ್ಣಾವಧಿ 5 ವರ್ಷದ ಮುಖ್ಯಮಂತ್ರಿಯಾಗುತ್ತೇನೆ” ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಸಿಎಂ ಹೇಳಿದ ಮೇಲೆ ಇನ್ನೇನಿದೆ. ಅವರು ಹೇಗೆ ಹೇಳ್ತಾರೋ, ನಾವು ಹಾಗೆ ನಡೆದುಕೊಳ್ಳುತ್ತೇವೆ ಎಂದು ಉತ್ತರಿಸಿದರು.

ಈ ಮೂಲಕ ಡಿಕೆ ಶಿವಕುಮಾರ್ ಅವರು ತಮ್ಮ ದೆಹಲಿಯ ಭೇಟಿಗೆ ರಾಜಕೀಯ ಅರ್ಥ ನೀಡಬಾರದು ಎಂಬುದನ್ನು ಸ್ಪಷ್ಟಪಡಿಸಿದ್ದು, ತಮ್ಮ ಭೇಟಿಯು ಕೇವಲ ವೈಯಕ್ತಿಕ ಸಾಂತ್ವನ ಭೇಟಿಯಷ್ಟೆ ಎಂಬುದನ್ನು ಮಾಧ್ಯಮಗಳ ಮುಂದೆ ಮತ್ತೊಮ್ಮೆ ಖಾತ್ರಿಪಡಿಸಿದರು.

ಉದಯ್ ಸೋನಿಗೆ ಡಿಕೆಶಿ ಸಂತಾಪ

ಶ್ರೀಮತಿ ಅಂಬಿಕಾ ಸೋನಿ ಅವರು ಅವರನ್ನು ಭೇಟಿಯಾಗಿ ಶ್ರೀ ಉದಯ್ ಸೋನಿ ಅವರು ಅವರ ನಿಧನಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಸೂಚಿಸಿದೆ. ಅವರು ಭಾರತೀಯ ವಿದೇಶಾಂಗ ಸೇವೆಯ ಸದಸ್ಯರಾಗಿ ರಾಷ್ಟ್ರಕ್ಕೆ ವಿಶಿಷ್ಟ ಮತ್ತು ಘನತೆಯಿಂದ ಸೇವೆ ಸಲ್ಲಿಸಿದ್ದಾರೆ. ಈ ದುಃಖದ ಕ್ಷಣದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಮತ್ತು ಅವರ ಕುಟುಂಬದೊಂದಿಗೆ ಇವೆ.