ಬಿಡದಿಯಲ್ಲಿ ನಿರ್ಮಿಸಲಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (ಜಿಬಿಐಟಿ)ಗೆ ಶೇ. 82ರಷ್ಟು ರೈತರು ತಮ್ಮ ಜಮೀನು ನೀಡಲು ಒಪ್ಪಿಗೆ ನೀಡಿದ್ದು, ಶೇ. 18ರಷ್ಟು ರೈತರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು (ಸೆ.06): ಬಿಡದಿಯಲ್ಲಿ ನಿರ್ಮಿಸಲಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (ಜಿಬಿಐಟಿ)ಗೆ ಶೇ. 82ರಷ್ಟು ರೈತರು ತಮ್ಮ ಜಮೀನು ನೀಡಲು ಒಪ್ಪಿಗೆ ನೀಡಿದ್ದು, ಶೇ. 18ರಷ್ಟು ರೈತರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭೂಮಿ ನೀಡಿದ ರೈತರಿಗೆ ಉತ್ತಮ ಪರಿಹಾರ ನೀಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಿಬಿಐಟಿ ವಿಚಾರವಾಗಿ ರೈತರೊಂದಿಗೆ ಏರುಧ್ವನಿಯಲ್ಲಿ ಮಾತನಾಡಿದ ಕುರಿತಂತೆ ಬಿಜೆಪಿ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಜನ, ನಮ್ಮ ರೈತರು, ನಮ್ಮ ಊರಿನವರೊಂದಿಗೆ ಮಾತನಾಡುವ ಹಕ್ಕು ನನಗಿದೆ. ಇನ್ನು, ನನ್ನ ಬಳಿಗೆ ಬಂದವರು ಯಾವ ಪಕ್ಷದವರು, ಯಾವ ಬಾವುಟ ಹಾಕಿಕೊಂಡಿದ್ದರು ನನಗೆ ಗೊತ್ತಿದೆ. ಯೋಜನೆಗಾಗಿ ಈಗಾಗಲೇ ಶೇ. 82ರಷ್ಟು ಭೂಮಾಲೀಕರು ಭೂಮಿ ನೀಡಿದ್ದಾರೆ. ಶೇ. 18ರಷ್ಟು ಜನರು ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದರು.
ಜಿಬಿಐಟಿ ಯೋಜನೆಗೆ ಭೂಮಿ ನೀಡುವ ರೈತರಿಗೆ ಉತ್ತಮ ಪರಿಹಾರವನ್ನೇ ನೀಡಿದ್ದೇವೆ. ಅದಕ್ಕೂ ಮೀರಿ ಕೊಡಬೇಕಾದರೆ ಇಡೀ ರಾಜ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪರಿಹಾರ ನೀಡಬೇಕಾಗುತ್ತದೆ. ಹೀಗಾಗಿ ಅದಕ್ಕಿಂತ ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ. ಇನ್ನು ಯೋಜನೆ ಬೇಡವಾಗಿದ್ದರೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗಲೇ ಡಿನೋಟಿಫಿಕೇಷನ್ ಮಾಡಬಹುದಿತ್ತು. ಆದರೆ, ವಿಚಾರ ಸುಪ್ರೀಂಕೋರ್ಟ್‌ನಲ್ಲಿದ್ದು ಅಲ್ಲಿ ಅಂತಿಮ ತೀರ್ಮಾಣ ಬರುವವರೆಗೆ ಡಿನೋಟಿಫಿಕೇಷನ್ ಮಾಡಲಾಗುವುದಿಲ್ಲ ಎಂದು ಹೇಳಿದರು.
ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲನೆ: ನಗರದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಗುಣಮಟ್ಟವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಿಶೀಲನೆ ನಡೆಸಿದರು. ಯಲಹಂಕ, ಬಾಗಲೂರು ರಸ್ತೆ, ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಸ್ಯಾಂಕಿ ರಸ್ತೆ ಸೇರಿದಂತೆ ಹಲವೆಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿ, ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಸ್ತೆ ಗುಂಡಿ ಕುರಿತಂತೆ ಸಾರ್ವಜನಿಕರು, ಶಾಸಕರು ದೂರು ನೀಡುತ್ತಿದ್ದರು. ಅದರಂತೆ ಗುಂಡಿ ಮುಚ್ಚಲಾಗುತ್ತಿದೆ. ಅಲ್ಲದೆ ರಸ್ತೆ ಗುಂಡಿ ಕುರಿತಂತೆ ಸಾರ್ವಜನಿಕರು ದೂರು ನೀಡಲು ಫಿಕ್ಸ್ ಮೈ ಸ್ಟ್ರೀಟ್ ಹೆಸರಿನಲ್ಲಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.
ಸಾರ್ವಜನಿಕರು ಅದರಲ್ಲಿ ರಸ್ತೆ ಗುಂಡಿಗಳ ಫೋಟೋ ಸಹಿತ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಅದರ ಆಧಾರದ ಮೇಲೆ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದರು.ನಗರದಲ್ಲಿ 5 ಸಾವಿರಕ್ಕೂ ಹೆಚ್ಚಿನ ಗುಂಡಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಮೊದಲಿಗೆ 4,400 ಗುಂಡಿ ಮುಚ್ಚಲು ಸೂಚಿಸಲಾಗಿತ್ತು. ಅದರಂತೆ ಕಳೆದ ನಾಲ್ಕೈದು ದಿನಗಳಲ್ಲಿ 2200 ಗುಂಡಿಗಳನ್ನು ಮುಚ್ಚಲಾಗಿದೆ. ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಸೇರಿದಂತೆ ಗುಂಡಿ ಮುಚ್ಚಲು ಎಲ್ಲ ಅವಕಾಶ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
