ರಾಜ್ಯದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡುವ ಯಾವುದೇ ಚರ್ಚೆ ನಡೆದಿಲ್ಲ, ಆದರೆ ಸರ್ಕಾರಿ ಜಾಗಗಳಲ್ಲಿ ಅದರ ಚಟುವಟಿಕೆಗಳಿಗೆ ನಿರ್ಬಂಧವಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಪ್ರಹ್ಲಾದ್ ಜೋಶಿ ಕೇಂದ್ರದಿಂದ ರಾಜ್ಯಕ್ಕೆ ಕೊಡುಗೆ ತಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚಿತ್ರದುರ್ಗ (ಅ.17): ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಘಟನೆಯ ಬ್ಯಾನ್ ಯಾರೊಬ್ಬರೂ ಹೇಳಿಕೆ ನೀಡಿಲ್ಲ. ಈ ಬಗ್ಗೆ ಚರ್ಚೆಗಳನ್ನೂ ಮಾಡಲಾಗಿಲ್ಲ. ಕೇವಲ ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಡೆಸದಂತೆ ಕ್ರಮವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮದಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್. ಬ್ಯಾನ್ ಮಾಡಬೇಕು ಎಂದು ಯಾರಾದರೂ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ ಸಚಿವರು, ಆ ಬಗ್ಗೆ ಯಾರೂ ಹೇಳಿಲ್ಲ, ಚರ್ಚೆಯೇ ಮಾಡಿಲ್ಲ ಎಂದು ಖಚಿತಪಡಿಸಿದರು. ಸಂವಿಧಾನದ ಅನ್ವಯ ಎಲ್ಲರಿಗೂ ಮುಕ್ತವಾದ ಅವಕಾಶವಿದೆ. ಆದರೆ, ಆರ್.ಎಸ್.ಎಸ್. ಒಂದು ರಾಜಕೀಯ ಸಂಘಟನೆ ಎಂಬ ಬಗ್ಗೆ ಸಂದೇಹವಿಲ್ಲ ಎಂದ ಅವರು, ಈ ಕಾರಣಕ್ಕೆ ಸರ್ಕಾರಿ ಸ್ಥಳ, ಶಾಲೆಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಡೆಸಬಾರದು ಎಂದು ಒತ್ತಿ ಹೇಳಿದರು.
ಶಾಲೆ, ಕಾಲೇಜುಗಳಲ್ಲಿ ರಾಜಕೀಯವನ್ನು ತರುವುದು ಸರಿಯಲ್ಲ. ಯಾವುದೇ ಸಂಸ್ಥೆಯಾಗಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದುಕೊಳ್ಳಬೇಕು ಮತ್ತು ಅದನ್ನು ಆರ್.ಎಸ್.ಎಸ್. ಶಾಖೆಗಳಿಗಾಗಿ ಉಪಯೋಗಿಸಬಾರದು ಎಂದು ತಿಳಿಸಿದರು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ ಸರ್ಕಾರಿ ಜಾಗವನ್ನು ಯಾರೂ ಬಳಸಬಾರದೆಂದು ಆದೇಶವಿತ್ತು. ಸರ್ಕಾರಿ ಜಾಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ಶಾಲಾ-ಕಾಲೇಜು ಆವರಣಗಳಲ್ಲಿ ಯಾವುದೇ ರಾಜಕೀಯ ಸಂಘಟನೆಗಳ ಚಟುವಟಿಕೆಗೆ ಅವಕಾಶ ನೀಡಬಾರದು ಎಂಬುದು ಆದೇಶದ ಉದ್ದೇಶವಾಗಿದೆ ಎಂದರು.
ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ: ರಾಜ್ಯಕ್ಕೆ ಕೇಂದ್ರದ ಕೊಡುಗೆ ಶೂನ್ಯ
ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸಚಿವ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದರು. ಪ್ರಹ್ಲಾದ್ ಜೋಶಿ ಮತ್ತು ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಮಾಡಿದ್ದಾರೆ? ರಾಜ್ಯಕ್ಕೆ ಅನ್ಯಾಯವಾದಾಗ ಜೋಶಿ ಅವರಿಗೆ ಬಾಯಿ ಇರಲಿಲ್ಲವೇ? ನಾವು ಕೋರ್ಟ್‌ಗೆ ಹೋಗಿ ಕೇಂದ್ರದಿಂದ ಹಣ ಕಿತ್ತುಕೊಂಡು ಬರಬೇಕಾಯಿತು ಎಂದು ಆರೋಪಿಸಿದರು. ದೇಶದಲ್ಲೇ ರಾಜ್ಯವು ಜಿಡಿಪಿ (GDP) ಮತ್ತು ಇನ್ವೆಸ್ಟ್‌ಮೆಂಟ್‌ನಲ್ಲಿ (Investment) ನಂಬರ್ 1 ಸ್ಥಾನದಲ್ಲಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಅನುಕೂಲ ಮಾಡುವ ನಯಾಪೈಸೆ ಕೆಲಸವನ್ನು ಜೋಶಿ ಮಾಡಿಸುತ್ತಿಲ್ಲ. ಕೇವಲ ಪ್ರೆಸ್ ಮೀಟ್ ಮಾಡಿ ಟೀಕೆ ಮಾಡುವ ಚಪಲ ಅವರಿಗೆ ಇದೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಶಾಸಕರ ರಿಟ್ ಅರ್ಜಿ ನ್ಯಾಯಾಲಯದಲ್ಲಿ ಮಾನ್ಯತೆ ಇಲ್ಲ:
ಇದೇ ಸಂದರ್ಭದಲ್ಲಿ, ಜೆಡಿಎಸ್ ಶಾಸಕ ಶ್ರೀನಿವಾಸ್ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯ ಕುರಿತು ಮಾತನಾಡಿದ ಗುಂಡೂರಾವ್, ಅಭಿವೃದ್ಧಿ ಕಾಮಗಾರಿಗಳು ಹೈಕೋರ್ಟ್ ವ್ಯಾಪ್ತಿಗೆ ಬರುತ್ತವೆಯೇ ಎಂದು ಪ್ರಶ್ನಿಸಿದರು. ಈ ವಿಚಾರಕ್ಕೆ ನ್ಯಾಯಾಲಯದಲ್ಲಿ ಯಾವುದೇ ಮಾನ್ಯತೆ ಸಿಗುವುದಿಲ್ಲ. ಒಟ್ಟಾರೆಯಾಗಿ, ರಾಜ್ಯ ಸರ್ಕಾರದ ಮೇಲೆ ಇಲ್ಲಸಲ್ಲದ ಟೀಕೆಗಳನ್ನು ಮಾಡುವ ವಿರೋಧ ಪಕ್ಷಗಳ ನಾಯಕರಿಗೆ ಸಚಿವ ದಿನೇಶ್ ಗುಂಡೂರಾವ್ ಸೂಕ್ತ ತಿರುಗೇಟು ನೀಡಿದರು.
