ರಾಜ್ಯ ಸರ್ಕಾರವು ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧವೂ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರು (ಆ.24): ರಾಜ್ಯ ಸರ್ಕಾರವು ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧವೂ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ನಾವು ಹೇಳಿದ್ದು ಈಗ ನಿಜವಾಗಿದೆ. ದೂರುದಾರ ಮುಸುಕುಧಾರಿಯ ಬಂಧನ ಸತ್ಯದ ಮೇಲೆ ಬೆಳಕು ಚೆಲ್ಲಿದೆ. ಕಪೋಲ ಕಲ್ಪಿತ ದೂರು ನೀಡಿ ಸಿಕ್ಕಿಬಿದ್ದಿರುವ ಈತನ ಹಿಂದಿರುವ ಶಕ್ತಿಗಳು ಯಾವುದು?
ಷಡ್ಯಂತ್ರ ರೂಪಿಸಿದ ವಿಕೃತಿಗಳು ಯಾರು? ಇವರೆಲ್ಲರ ಮುಖವಾಡಗಳು ಬಯಲಾಗಬೇಕು ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಒತ್ತಾಯಿಸಿದ್ದಾರೆ. ಇಡೀ ರಾಜ್ಯದ ಹಾಗೂ ದೇಶದ ಗಮನ ಕೇಂದ್ರೀಕರಿಸುವಂತೆ ಮಾಡಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರ ಪವಿತ್ರ ಧರ್ಮಸ್ಥಳವನ್ನು ಅಪವಿತ್ರಗೊಳಿಸಲು ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಬಿತ್ತರಗೊಂಡ ಈ ಅಪಪ್ರಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ ತಳ್ಳಿಹಾಕಲಾಗದು ಎಂದಿದ್ದಾರೆ.
ಪ್ರಕರಣವನ್ನು ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರವೆಂದು ಸೀಮಿತಗೊಳಿಸದೆ, ಇದು ಭಾರತೀಯರ ಭಾವನೆಗಳು ಹಾಗೂ ಪರಂಪರೆ ಮೇಲೆ ನಡೆದ ವ್ಯವಸ್ಥಿತ ಪಿತೂರಿ ಎಂದು ಪರಿಗಣಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರ ಎಡಪಂಥೀಯರ ಒತ್ತಾಯಕ್ಕೆ ಮಣಿದು ಹೇಗೆ ಎಸ್‌ಐಟಿ ರಚಿಸಿ ತನಿಖೆ ನಡೆಸಿತೋ, ಅದೇ ಮಾದರಿಯಲ್ಲಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧವೂ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಅಪಪ್ರಚಾರಕ್ಕೆ ಸರ್ಕಾರ ಕಡಿವಾಣ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಬಗ್ಗೆ ಕಳೆದ ಕೆಲವು ದಿನಗಳಿಂದ ಎಸ್‌ಐಟಿ ತನಿಖೆಯ ನೆಪದಲ್ಲಿ ನಡೆಯುತ್ತಿರುವ ಅಪಪ್ರಚಾರಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಧರ್ಮಸ್ಥಳ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತೇಜೋವಧೆ ಬಗ್ಗೆ ಆಧಾರ ರಹಿತ ಸುಳ್ಳು ವದಂತಿಗಳ ಅಪಪ್ರಚಾರದಿಂದ ಅಸಂಖ್ಯಾತ ಭಕ್ತರು ಹಾಗೂ ಅಭಿಮಾನಿಗಳಲ್ಲಿ ಗೊಂದಲದ ವಾತಾವರಣ ಮೂಡಿದೆ ಎಂದರು.
ಎಸ್‌ಐಟಿ ತನಿಖೆಯನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದ ಅವರು, ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಅವರು ಬಹಿರಂಗಪಡಿಸಿಲ್ಲ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ತನಿಖೆಯಾಗಬೇಕು. ಜತೆಗೆ ದೂರುದಾರನ ಹಿನ್ನೆಲೆ ಹಾಗೂ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ಬಗ್ಗೆಯೂ ತನಿಖೆಯಾಗಲಿ ಎಂದು ಆಶಿಸಿದರು.
