ಗೊಂದಲಗಳು, ಸಮಸ್ಯೆಗೆ ಇತಿಶ್ರೀ ಹಾಡುವ ಕರ್ತವ್ಯ ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಇದೆ. ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ನಮ್ಮ ಪರಿಶಿಷ್ಟ ಸಮುದಾಯ ಇದೆ ಎಂದರು.
ಬೆಂಗಳೂರು (ಆ.20): ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ 101 ಉಪಜಾತಿಗಳಿದ್ದು, ಒಳ ಮೀಸಲಾತಿ ಜಾರಿ ಮಾಡುವಾಗ ಯಾವುದೇ ಉಪಜಾತಿಗೆ ಅನ್ಯಾಯ ಆಗದಂತೆ ನಿರ್ಣಯ ತೆಗೆದುಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ನೀವು ರಾಜ್ಯದ ಮುಖ್ಯಮಂತ್ರಿಗಳು. ಒಳ ಮೀಸಲಾತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ಉಪಜಾತಿಗೆ ಅನ್ಯಾಯ ಆಗದಂತೆ ನಿರ್ಣಯ ತೆಗೆದುಕೊಳ್ಳಬೇಕು. ನೀವು ತೆಗೆದುಕೊಳ್ಳುವ ತೀರ್ಮಾನದಿಂದ ನಾಳೆ ಇತರ ಜಾತಿಗಳವರು, ಎಸ್ಸಿ ಸಮುದಾಯದವರು ಬೀದಿಗಿಳಿದು ಹೋರಾಟ ಮಾಡದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಲ್ಲ ಗೊಂದಲಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣಕರ್ತರು. ಗೊಂದಲಗಳು, ಸಮಸ್ಯೆಗೆ ಇತಿಶ್ರೀ ಹಾಡುವ ಕರ್ತವ್ಯ ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಇದೆ. ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ನಮ್ಮ ಪರಿಶಿಷ್ಟ ಸಮುದಾಯ ಇದೆ ಎಂದರು. ರಾಜ್ಯದಲ್ಲಿ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಪರಿಶಿಷ್ಟ ಜಾತಿಗೆ ಶೇ.15 ಮೀಸಲು ಇದ್ದುದನ್ನು ಶೇ.17ಕ್ಕೆ ಏರಿಸಲಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಶೇ.3 ಇದ್ದುದನ್ನು ಶೇ.7ಕ್ಕೆ ಹೆಚ್ಚಿಸಲಾಗಿತ್ತು. ಈಗ ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿನ ಅಂಶಗಳು ಏನಿದೆಯೋ ಅದನ್ನೇ ಬಿಜೆಪಿ ಈ ಹಿಂದೆ ಜಾರಿ ಮಾಡಿತ್ತು ಎಂದು ತಿಳಿಸಿದರು.
ಮುಸುಕುಧಾರಿ ಹಿಂದಿರುವ ವ್ಯಕ್ತಿ ಸಮಗ್ರ ತನಿಖೆ ನಡೆಸಿ: ಧರ್ಮಸ್ಥಳ ಗ್ರಾಮ ಪ್ರಕರಣದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮುಸುಕುಧಾರಿಯು ಧರ್ಮಸ್ಥಳದ ವಿಷಯದಲ್ಲಿ ಸಾಕಷ್ಟು ಪ್ರಚಾರ ತೆಗೆದುಕೊಂಡು ರಾಜ್ಯ ಸರ್ಕಾರ ಎಸ್ಐಟಿ ಸ್ಥಾಪಿಸುವ ಮಟ್ಟಕ್ಕೂ ಹೋಗಿದ್ದ. ಕಳೆದ 2-3 ವಾರಗಳಿಂದ ತನಿಖೆ ಜೊತೆಗೆ ಧರ್ಮಸ್ಥಳ, ಮಂಜುನಾಥೇಶ್ವರನ ಕ್ಷೇತ್ರದ ಕುರಿತು ಸಾಕಷ್ಟು ಅಪಪ್ರಚಾರಗಳು ನಡೆದಿದ್ದವು. ರಾಜ್ಯ-ರಾಷ್ಟ್ರೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಒಳಗಾಗಿತ್ತು ಎಂದರು.
ರಾಜ್ಯ ಸರ್ಕಾರದ ಕ್ರಮ ಹಿಟ್ ಆ್ಯಂಡ್ ರನ್ ಆಗಬಾರದು. ದೂರುದಾರ, ದೂರುದಾರನ ಹಿಂದಿರುವ ಪ್ರಭಾವಿ ವ್ಯಕ್ತಿಗಳೇ ಇರಬಹುದು; ಎಡಪಂಥೀಯ ಸಂಘಟನೆಗಳೇ ಇರಬಹುದು. ಇವರೆಲ್ಲರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಪ್ರತಿಪಾದಿಸಿದರು. ಕೆಲವು ವ್ಯಕ್ತಿಗಳು ಸಂಘಟನೆ ಮಾಡಿಕೊಂಡು ಧರ್ಮಸ್ಥಳದ ವಿರೋಧವಾಗಿ ಚರ್ಚೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಆರೋಪ ಮಾಡಿದ್ದಾರೆ. ಆರೆಸ್ಸೆಸ್ ಪ್ರಚಾರಕರ ಬಗ್ಗೆ ಆಗಲಿ ಅಥವಾ ಸಂತೋಷ್ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದು ನನ್ನನ್ನೂ ಒಳಗೊಂಡಂತೆ ರಾಜ್ಯದ ಅನೇಕ ಸ್ವಯಂಸೇವಕರಿಗೆ ನೋವಾಗಿದೆ. ಪ್ರಚಾರಕರು, ಆರ್‌ಎಸ್‌ಎಸ್‌ಗೆ ಅಗೌರವ ತರುವುದನ್ನು ನೋಡಿಕೊಂಡು ರಾಜ್ಯ ಸರ್ಕಾರ ಸುಮ್ಮನೇ ಕೂಡಬಾರದು. ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
