ರಾಷ್ಟ್ರೀಯ ಪಕ್ಷವಾಗಿ ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಸಹಿಸಲಾಗದು. ಧರ್ಮಸ್ಥಳ ಚಲೋ ಕರೆಗೆ ರಾಜ್ಯವ್ಯಾಪಿ ಸಹಸ್ರಾರು ಜನರು ಬಂದಿದ್ದು ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ತೀರ್ಥಹಳ್ಳಿ (ಸೆ.03): ರಾಷ್ಟ್ರೀಯ ಪಕ್ಷವಾಗಿ ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಸಹಿಸಲಾಗದು. ಧರ್ಮಸ್ಥಳ ಚಲೋ ಕರೆಗೆ ರಾಜ್ಯವ್ಯಾಪಿ ಸಹಸ್ರಾರು ಜನರು ಬಂದಿದ್ದು ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಅಸಂಖ್ಯಾತ ಭಕ್ತರನ್ನು ಹೊಂದಿರುವ ಧರ್ಮಸ್ಥಳದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದವರೆಗೂ ನಡೆದಿರುವ ಅಪಪ್ರಚಾರವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದರು.

ಶ್ರೀ ಕ್ಷೇತ್ರದ ವಿರುದ್ಧ ನಡೆದಿರುವ ಷಡ್ಯಂತ್ರವನ್ನು ತಡೆಯುವಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ಎಚ್ಚರ ನೀಡುವ ಕೆಲಸ ಮಾಡಿದ್ದೇವೆ. ಮತ್ತು ಒಂದು ರಾಷ್ಟ್ರೀಯ ಪಕ್ಷವಾಗಿ ಇದನ್ನು ನೋಡಿ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಹಿಂದೂಗಳನ್ನು ಕೆಣಕದೇ ದುಷ್ಟ ಷಡ್ಯಂತರವನ್ನು ನಿಯಂತ್ರಿಸುವಂತೆ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಮಂಜುನಾಥ ಸ್ವಾಮಿ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ನುಡಿದರು. ಸೌಜನ್ಯ ಹತ್ಯೆ ನಡೆದು ಹನ್ನೆರಡು ವರ್ಷಗಳೇ ಸಂದಿದ್ದರೂ ಆ ಕುಟುಂಬಕ್ಕೆ ನ್ಯಾಯ ದೊರಕದಿರುವುದು ವಿಷಾದನೀಯ ಸಂಗತಿಯಾಗಿದೆ. ಆ ಕುಟುಂಬದ ನೋವಿನೊಂದಿಗೆ ನಾವುಗಳೂ ಭಾಗಿಯಾಗಿದ್ದೇವೆ ಎಂದರು.

ಎನ್‌ಐಎಗೆ ವಹಿಸಿ: ಧರ್ಮಸ್ಥಳದ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡ ರೀತಿ ಸರಿಯಲ್ಲ. ಹೀಗಾಗಿ ಧರ್ಮಸ್ಥಳ ಭಕ್ತರ ಸಹನೆ ಕಟ್ಟೆ ಒಡೆದಿದೆ. ಭಕ್ತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ದೇಶದ್ರೋಹಿಗಳು ಈ ಪ್ರಕರಣದಲ್ಲಿದ್ದಾರೆ. ಹೊರದೇಶದಿಂದ ಹಣ ಪಡೆದು ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ನಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಹೀಗಾಗಿ ಸಿಬಿಐ ಅಥವಾ ಎನ್‌ಐಎ ತನಿಖೆ ಆಗಲೇಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು. ಧರ್ಮಸ್ಥಳ ಚಲೋ ಮಾಡುತ್ತೇವೆ ಎಂದಾಗ ಇದನ್ನು ರಾಜಕೀಯ ಅಂದರು. ಆದರೆ ಇಲ್ಲಿ ಪಕ್ಷದ ಧ್ವಜ ಇದೆಯಾ ಎಂದು ಗಮನಿಸಬೇಕು. ಇದು ಸ್ವಾಭಿಮಾನಿ ಹಿಂದೂ ಕಾರ್ಯಕರ್ತರ ಹೋರಾಟ. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ಅಪಮಾನವಾಗುತ್ತಿದೆ. ಇದೀಗ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಅಪಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಹಿಂದೆ ಸುಹಾಸ್ ಹತ್ಯೆ ಆದಾಗ ಗೃಹ ಸಚಿವರು ಮಂಗಳೂರಿಗೆ ಬಂದಿದ್ದರೂ ಸಾಂತ್ವನ ಹೇಳಲಿಲ್ಲ. ಕಾಂಗ್ರೆಸ್ ಕೇವಲ ದುಷ್ಟರಿಗೆ ಶಕ್ತಿ ಕೊಡುವ ಪಕ್ಷವಾಗಿದೆ. ಕಳೆದ ಒಂದು ತಿಂಗಳಿನಿಂದ ತಾಳ್ಮೆಯಲ್ಲಿದ್ದೆವು. ಪ್ರಾಮಾಣಿಕತೆ ಇದೆ, ಅಪಪ್ರಚಾರ ತಡೆಯುತ್ತದೆ ಎಂದು ಎಸ್‌ಐಟಿಯನ್ನೂ ಸ್ವಾಗತಿಸಿದೆವು. ಆದರೆ ಪ್ರಾಥಮಿಕ ತನಿಖೆಯನ್ನೂ ಮಾಡದೆ ಅಗೆತ ಮಾಡಿದರು. ಕಿಂಚಿತ್ ಕಾಳಜಿ ಇರುತ್ತಿದ್ದರೆ ಅಪಪ್ರಚಾರ ಮಾಡಿದವರನ್ನು 24 ಗಂಟೆಯೊಳಗೆ ಒಳಗೆ ಹಾಕಬೇಕಾಗಿತ್ತು. ಸೌಜನ್ಯ ಪ್ರಕರಣವನ್ನು ಬೇಕಾದರೆ ಮರು ತನಿಖೆ ಮಾಡಲಿ. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಲಿ. ಇದಕ್ಕಾಗಿ ಅಕ್ವಿಟಲ್ ಕಮಿಟಿ ಘೋಷಣೆ ಮಾಡಿ. ಬಿಜೆಪಿ ಸಂಪೂರ್ಣ ಬೆಂಬಲಿಸುತ್ತದೆ ಎಂದರು.