ಮುಸುಕುಧಾರಿ ಬಂಧನ ಮುಖ್ಯವಲ್ಲ. ಆತನ ಹಿಂದೆ ಯಾರಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಲು ಎಸ್‌ಐಟಿ ರಚಿಸಬೇಕು. ಇಲ್ಲವೇ ಎನ್‌ಐಎ ತನಿಖೆಗೆ ವಹಿಸಿ ಎಂದು ಆರ್.ಅಶೋಕ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರು (ಆ.24): ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಮುಸುಕುಧಾರಿ ಬಂಧನ ಮುಖ್ಯವಲ್ಲ. ಆತನ ಹಿಂದೆ ಯಾರಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಲು ಎಸ್‌ಐಟಿ ರಚಿಸಬೇಕು. ಇಲ್ಲವೇ ಎನ್‌ಐಎ ತನಿಖೆಗೆ ವಹಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಬೀದಿಗೆ ಇಳಿದು ಹೋರಾಟ ಮಾಡದಿದ್ದಲ್ಲಿ ಬುರುಡೆ ಪ್ರಕರಣ ಬೇರೆ ರೀತಿ ಮಾಡುಲಾಗುತ್ತಿತ್ತು. ನಮಗೆ ಮಾಸ್ಕ್ ಮ್ಯಾನ್ ಮುಖ್ಯವಲ್ಲ. ಅವರ ಹಿಂದೆ ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬುದು ಗೊತ್ತಾಗಬೇಕು ಎಂದರು.
ಸಮೀರ್ ಒಬ್ಬ ಮುಸ್ಲಿಂ ಆಗಿದ್ದು, ಆತನಿಗೆ ಇದರಲ್ಲೇಕೆ ಆಸಕ್ತಿ?, ಅನೇಕ ಮಸೀದಿಗಳ ಮೇಲೆ ದೂರು ಬಂದಿದ್ದರೂ ಯಾವುದೇ ಮಸೀದಿ ಬಳಿ ನೆಲ ಅಗೆದಿಲ್ಲ. ಈ ಷಡ್ಯಂತ್ರದ ಹಿಂದೆ ಸಮೀರ್ ಇದ್ದು, ಕೂಡಲೇ ಆತನನ್ನು ಬಂಧಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ. ಮಾಸ್ಕ್ ಮ್ಯಾನ್‌ಗೆ ಆಮಿಷವೊಡ್ಡಿ ಇದೆಲ್ಲಾ ಮಾಡಿಸಿದ್ದಾರೆ ಎಂದು ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ. ಇಷ್ಟು ದಿನ ಅವನಿಗೆ ಬಿರಿಯಾನಿ ಕೊಟ್ಟು, ಸೆಕ್ಯುರಿಟಿ ಕೊಟ್ಟು ಸಾಕಿ ಈಗ ಜೈಲಿಗೆ ಕಳುಹಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸರ್ಕಾರಕ್ಕೆ ಗೌರವ ಇದ್ದರೆ ಷಡ್ಯಂತ್ರದ ಹಿಂದಿರುವವರ ಪತ್ತೆಗೆ ಎಸ್‌ಐಟಿ ರಚಿಸಬೇಕು. ಇಲ್ಲವೇ ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಆತುರದ ನಿರ್ಧಾರದಿಂದ ಭಕ್ತರ ಭಾವನೆಗೆ ಧಕ್ಕೆ: ನಾವು ಆರಂಭದಿಂದಲೂ ಧರ್ಮಸ್ಥಳ ಪ್ರಕರಣದ ಹಿಂದೆ ಷಡ್ಯಂತ್ರ ಇದೆ ಎಂದು ಹೇಳುತ್ತಿದ್ದೆವು. ಆದರೆ, ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡಿತು. ದೂರು ಕೊಟ್ಟ ದೂರುದಾರ ಎಲ್ಲಿಂದ ಬಂದ? ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಯೋಚಿಸಲಿಲ್ಲ. ಇಷ್ಟೆಲ್ಲ ಆದ ಮೇಲೆ ಬರೀ ಬರುಡೆ ಬಂತು. ಸಿದ್ಧರಾಮಯ್ಯ ಅವರ ಆತುರದ ನಿರ್ಧಾರದಿಂದ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಎಲ್ಲವನ್ನೂ ಎಸ್‌ಐಟಿಗೆ ಕೊಡುತ್ತಾ ಹೋದರೆ, ಪೊಲೀಸ್ ಇಲಾಖೆಗೆ ಕೆಲಸವೇ ಇರುವುದಿಲ್ಲ. ಒಬ್ಬ ಸಬ್ ಇನ್ಸ್‌ಪೆಕ್ಟರ್ ದೂರುದಾರನ ವಿಚಾರಣೆ ಮಾಡಿದ್ದರೆ ಎಲ್ಲವೂ ಹೊರಗೆ ಬರುತ್ತಿತ್ತು ಎಂದರು.
ಇದರ ಹಿಂದೆ ಮತಾಂತರದ ಉದ್ದೇಶ: ಆತನಿಗೆ ಇನ್ನೂ ಏಕೆ ಮಾಸ್ಕ್ ಹಾಕಿ ಇರಿಸಿಕೊಂಡಿದ್ದೀರಿ? ಆತನ ಪತ್ನಿಯೇ ಹೊರ ಬಂದು ಹೇಳಿಕೆ ಕೊಟ್ಟಿದ್ದಾಳೆ. ಸಮಾಜಘಾತುಕರ ತಂಡ, ಪ್ರಗತಿಪರರ ತಂಡ ಎಲ್ಲಾ ಪ್ಲ್ಯಾನ್ ಮಾಡಿ ಇದೆಲ್ಲಾ ನಡೆಸಿದ್ದಾರೆ. ಸಮೀರ್ ಎಂಬಾತನೇ ಇದಕ್ಕೆಲ್ಲ ಮೂಲ. ನಂತರ ಎಲ್ಲರೂ ಸೇರಿ ಪ್ಲ್ಯಾನ್ ಮಾಡಿದ್ದಾರೆ. ಮತಾಂತರ ಮಾಡುವ ಉದ್ದೇಶದಿಂದ ಇದೆಲ್ಲಾ ಆಗಿದೆ. ಹಿಂದೂಗಳ ಟಾರ್ಗೆಟ್ ಮಾಡಲು ಇದನ್ನೆಲ್ಲ ಮಾಡಿದ್ದಾರೆ. ಪ್ರಗತಿಪರರು ಎಸ್‌ಎಸ್‌ಟಿಗೆ ಹೀಗೆ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಬೆಟ್ಟ ಅಗೆದು ಇಲಿ ಕೂಡಾ ಸಿಗಲಿಲ್ಲ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಇಂತಹ ಪ್ರಹಸನ ಎಲ್ಲೂ ಆಗಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಇರುವ ಧರ್ಮಸ್ಥಳದ ಮೇಲೆ ನಡೆದ ಕುತಂತ್ರ ಇದು ಕಿಡಿಕಾರಿದರು.
ಮತಾಂತರ ಜಿಹಾದ್ ಶಂಕೆ: ಮೊದಲೇ ತನಿಖೆ ಮಾಡಿದ್ದರೆ ಒಂದು ದಿನದಲ್ಲಿ ಇದರ ಬಗ್ಗೆ ಗೊತ್ತಾಗುತ್ತಿತ್ತು. ಪೊಲೀಸರು ಮೂಳೆ ಸಿಕ್ತಾ? ಬರುಡೆ ಸಿಕ್ತಾ ನೋಡಿ ಎನುವುದಕ್ಕಷ್ಟೇ ಸೀಮಿತ ಆಯಿತು. ಈಗ ಒಬ್ಬೊಬ್ಬರೇ ಸತ್ಯ ಒಪ್ಪಿಕೊಳ್ಳುತ್ತಿದ್ದಾರೆ. ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅನನ್ಯಾ ಭಟ್ ಎಳೆದು ತಂದರು. ಲವ್ ಜಿಹಾದ್ ರೀತಿಯಲ್ಲಿ ಮತಾಂತರ ಜಿಹಾದ್ ಇದರಲ್ಲಿ ನಡೆಯುತ್ತಿರುವ ಶಂಕೆ ಇದೆ. ಹೀಗಾಗಿ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಬೇಕು. ಇಲ್ಲವಾದರೆ, ರಾಜ್ಯ ಸರ್ಕಾರವೇ ಇದರ ಹಿಂದೆ ಎಂದು ಸಾಬೀತಾಗಲಿದೆ ಎಂದು ಆರ್.ಅಶೋಕ್ ಹೇಳಿದರು.