ಮುಸುಕುಧಾರಿಯ ಬಂಧನವಾಗಿದ್ದು, ಅವನ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಬೆಂಗಳೂರು (ಆ.24): ಧರ್ಮಸ್ಥಳ ಗ್ರಾಮದ ಆರೋಪಕ್ಕೆ ಸಂಬಂಧಿಸಿ ಮುಸುಕುಧಾರಿಯ ಬಂಧನವಾಗಿದ್ದು, ಅವನ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಸುಕುಧಾರಿ ಹೇಳಿದಂತೆ ಅನೇಕ ಕಡೆ ಎಸ್‌ಐಟಿ ಕಷ್ಟಪಟ್ಟು ಶೋಧ ನಡೆಸಿದರೂ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಕಾಡಿನಲ್ಲಿ ಆತ ತೋರಿಸಿದ ಸ್ಥಳದಲ್ಲೆಲ್ಲ ಹುಡುಕಾಡಿದ್ದು ಜನರಿಗೆ ಸತ್ಯ ತಿಳಿಯುತ್ತಿದೆ ಎಂದರು. ಅನಾಮಿಕನ ಬಂಧನವಾಗಿದ್ದು ಈತ ಯಾರು? ಅವನ ಹಿಂದೆ ಯಾರಿದ್ದಾರೆ? ಎಂಬುದು ಸೇರಿ ಎಲ್ಲವನ್ನೂ ತನಿಖೆ ನಡೆಸಿ ನಮ್ಮ ಸರ್ಕಾರ ಹೊರ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರು ತನಿಖೆಯ ಕ್ರೆಡಿಟ್ ಪಡೆಯಲು, ರಾಜಕೀಯಕ್ಕಾಗಿ ಧರ್ಮಸ್ಥಳ ಚಲೋ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವುದು ಬಿಜೆಪಿಗೆ ಚೆನ್ನಾಗಿ ತಿಳಿದಿದೆ ಎಂದು ಟೀಕಿಸಿದರು.
250 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಅರಗ ಜ್ಞಾನೇಂದ್ರ ತಂಡ ಭೇಟಿ: ತೀರ್ಥಹಳ್ಳಿಯಿಂದ ಧರ್ಮಸ್ಥಳಕ್ಕೆ ೨೫೦ ಕಾರುಗಳಲ್ಲಿ ಶಾಸಕ ಅರಗ ಜ್ಞಾನೇಂದ್ರ ನೇತೃತ್ವದ ತಂಡದವರು ಭಕ್ತರೊಂದಿಗೆ ಬಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಗೌರವ ಅರ್ಪಿಸಿದರು. ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಎಂಟು ಶತಮಾನಗಳಿಂದ ಸತ್ಯ, ಧರ್ಮ, ನ್ಯಾಯ, ನೀತಿ, ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮಿಯರ ಶ್ರದ್ಧಾ ಕೇಂದ್ರವಾಗಿದೆ. ಬುರುಡೆ ಪ್ರಕರಣದಲ್ಲಿ ಎಡಪಂಥೀಯರ ಕೈವಾಡವಿದೆ. ಆರಂಭದಲ್ಲೇ ದೂರುದಾರನನ್ನು ಬಾಯಿ ಬಿಡಿಸಿದ್ದರೆ ಸತ್ಯ ವಿಚಾರ ತಿಳಿಯುತ್ತಿತ್ತು.
ಸುಜಾತ ಭಟ್ ಪಾತ್ರವಂತೂ ಸಿನಿಮಾಕ್ಕಿಂತಲೂ ಅದ್ಭುತವಾಗಿದೆ. ಅವರು ಸಿನಿಮಾ ತಯಾರಿಸುತ್ತಿದ್ದರೆ ಪ್ರಚಾರವೂ ಸಿಗುತ್ತಿತ್ತು. ಅಪಾರ ಹಣವನ್ನೂ ಸಂಪಾದಿಸಬಹುದಿತ್ತು ಎಂದು ವ್ಯಂಗ್ಯವಾಡಿದರು. ಪವಿತ್ರ ಕ್ಷೇತ್ರದ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಅಪಪ್ರಚಾರವಾಗುತ್ತಿದ್ದು, ದೇಶ-ವಿದೇಶಗಳಲ್ಲಿರುವ ಧರ್ಮಸ್ಥಳದ ಲಕ್ಷಾಂತರ ಮಂದಿ ಭಕ್ತರು ಹಾಗೂ ಅಭಿಮಾನಿಗಳಿಗೆ ತೀವ್ರ ಆತಂಕವಾಗಿದೆ. ದೇವರ ಅನುಗ್ರಹದಿಂದ ಈಗ ಸತ್ಯಹೊರಬಂದಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ರಾಜ್ಯ ಸರ್ಕಾರ ಜನತೆಯ ಕ್ಷಮೆಯಾಚಿಸಬೇಕು ಎಂದರು.
ಸಿದ್ದು ಪ್ರಾಯಶ್ಚಿತ್ತಕ್ಕಾಗಿ ಧರ್ಮಸ್ಥಳಕ್ಕೆ ಹೋಗಿ ಪೂಜೆ ಮಾಡಲಿ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿಚಾರದಲ್ಲಿ ಯಾರದೋ ಮಾತನ್ನು ಕೇಳಿ ರಾಜ್ಯದ 7 ಕೋಟಿ ಜನರ ಮನಸ್ಸಿಗೆ ನೋವುಂಟು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಯಶ್ಚಿತ್ತಕ್ಕಾಗಿ ಧರ್ಮಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ ಬರಲಿ ಎಂದು ಕೇಂದ್ರ ಸಚಿವ ಸೋಮಣ್ಣ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸತ್ಯಕ್ಕೆ ಎಂದಿಗೂ ಮನ್ನಣೆ ಇದ್ದೇ ಇರುತ್ತದೆ. ಪಾಪದ ಕೃತ್ಯಗಳು ನಡೆದಿದೆ ಎಂದು ಸುಳ್ಳು ವದಂತಿ ಹಬ್ಬಿಸುವವರ ಬಗ್ಗೆ ಮೊದಲು ಗಮನ ಹರಿಸಬೇಕು.
ಸಿಎಂ ಹಾಗೂ ಸಚಿವರು ಮೊದಲು ಧರ್ಮಸ್ಥಳಕ್ಕೆ ಹೋಗಿ ಒಂದೆರಡು ದಿನ ಅಲ್ಲೇ ಇದ್ದು ಶ್ರೀ ಮಂಜುನಾಥನ ದರ್ಶನಾಶೀರ್ವಾದ ಪಡೆದು ತಪ್ಪಾಯಿತು ಎಂದು ಕೇಳಿಕೊಂಡು ಬಂದರೆ ಒಳ್ಳೆಯದಾಗುತ್ತದೆ ಎಂದರು. ಯಾರೋ ಒಬ್ಬ ಹೇಳಿದ ಮಾತನ್ನು ಕೇಳಿಕೊಂಡು ಎಸ್‌ಐಟಿ ರಚಿಸಿ ತನಿಖೆ ನಡೆಸುವ ಮೂಲಕ ರಾಜ್ಯದ 7 ಕೋಟಿ ಜನರ ಭಾವನೆಯನ್ನು ಕೆಣಕಿ ಮನಸ್ಸಿಗೆ ನೋವುಂಟು ಮಾಡಲಾಗಿದೆ. ಧರ್ಮಸ್ಥಳದ ವಿಷಯದಲ್ಲಿ ತಪ್ಪು ಮಾಡಿರುವ ರಾಜ್ಯ ಸರ್ಕಾರ, ಸಿದ್ದರಾಮಯ್ಯ ಸೇರಿದಂತೆ ಸಚಿವರು ಒಂದಿಲ್ಲೊಂದು ದಿನ ಬೆಲೆ ತೆರೆಬೇಕಾಗುತ್ತದೆ. ಎಸ್‌ಐಟಿ ತನಿಖೆ ಹಾಗೂ ರಾಜ್ಯ ಸರ್ಕಾರದ ನಾಟಕಕ್ಕೆ ತೆರೆ ಎಳೆಯುವ ಕಾಲ ಈಗ ಬಂದಿದೆ ಎಂದು ಕುಟುಕಿದರು.
