ಡಿಸೆಂಬರ್‌ ಅಂತ್ಯದೊಳಗೆ ರಾಜ್ಯ ಗುತ್ತಿಗೆದಾರರ ಬಾಕಿ ಬಿಲ್‌ ಅನ್ನು ಹಂತಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ.

ಬೆಂಗಳೂರು (ಅ.19): ಡಿಸೆಂಬರ್‌ ಅಂತ್ಯದೊಳಗೆ ರಾಜ್ಯ ಗುತ್ತಿಗೆದಾರರ ಬಾಕಿ ಬಿಲ್‌ ಅನ್ನು ಹಂತಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ. ಕುಮಾರಪಾರ್ಕ್‌ನಲ್ಲಿನ ಸರ್ಕಾರಿ ವಸತಿಗೃಹದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಾಕಿ ಬಿಲ್‌ ಪಾವತಿಗೆ ಇರುವ ಅಡೆತಡೆಗಳನ್ನು ತಿಳಿಸಿದರು. ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡದೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರಿಂದ ಸಮಸ್ಯೆಯಾಗಿದೆ. ಈಗ ಅನುದಾನ ಲಭ್ಯತೆಗೆ ಅನುಗುಣವಾಗಿ ಬಿಲ್‌ ಪಾವತಿಸುವುದಾಗಿ ತಿಳಿಸಿದರು.

ಅದಕ್ಕೆ ಗುತ್ತಿಗೆದಾರರು, ಬಾಕಿ ಬಿಲ್‌ ಪಾವತಿ ವಿಳಂಬದಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಲ್‌ ಪಾವತಿ ವೇಳೆ ನಿಯಮ ಪಾಲಿಸದೆ ತಾರತಮ್ಯ ಮಾಡಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆಯಲ್ಲೂ ಅನ್ಯಾಯವಾಗುತ್ತಿದೆ ಎಂದು ಅಹವಾಲು ತಿಳಿಸಿದರು. ಈ ವೇಳೆ ಡಿ.ಕೆ. ಶಿವಕುಮಾರ್, ಬಾಕಿ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದಿಂದ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮ ಪರವಾಗಿ ಸರ್ಕಾರವಿದೆ. ಬಿಲ್‌ಗಳು ಪಾವತಿಯಾಗುತ್ತಿವೆ. ಗುತ್ತಿಗೆದಾರರ ಸಮಸ್ಯೆ ಆಲಿಸಲು ಸಭೆ ನಡೆಸುವುದಾಗಿ ಮೊದಲೇ ನಿಗದಿ ಮಾಡಲಾಗಿತ್ತು.

ಆದರೂ, ಸುದ್ದಿಗೋಷ್ಠಿ ನಡೆಸಿದ್ದೇಕೆ? ಸರ್ಕಾರದ ವಿರುದ್ಧ ಕಮಿಷನ್‌ ಆರೋಪ ಮಾಡಿದ್ದೀರಿ. ಕಮಿಷನ್‌ ಪಡೆಯುತ್ತಿದ್ದರೆ ಪೊಲೀಸ್‌, ನ್ಯಾಯಾಲಯದಲ್ಲಿ ದೂರು ನೀಡಿ. ತನಿಖೆ ಮಾಡಿಸುತ್ತೇವೆ ಎಂದು ಖಾರವಾಗಿ ಹೇಳಿದರು. ಅದಕ್ಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸರ್ಕಾರದ ವಿರುದ್ಧ ಕಮಿಷನ್‌ ಆರೋಪ ಮಾಡಿಲ್ಲ. ಬಾಕಿ ಬಿಲ್‌ ಪಾವತಿಯಾಗದ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಅಂತಿಮವಾಗಿ, ಆರ್ಥಿಕ ಸ್ಥಿತಿಯ ಆಧಾರದಲ್ಲಿ ಡಿಸೆಂಬರ್‌ ಅಂತ್ಯದೊಳಗೆ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಗುತ್ತಿಗೆದಾರರೊಂದಿಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡದೇ ಸಾವಿರಾರು ಕೋಟಿ ರು. ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಜಲಸಂಪನ್ಮೂಲ ಇಲಾಖೆಯಲ್ಲಿಯೇ 17 ಸಾವಿರ ಕೋಟಿ ರು. ಬಾಕಿ ಬಿಲ್‌ ಉಳಿಸಲಾಗಿತ್ತು. ಸದ್ಯ ಇಲಾಖೆ ಅಡಿಯ ನಿಗಮಗಳಲ್ಲಿ 200 ಕೋಟಿ ರು. ಅನುದಾನವಿದೆ. ಅದನ್ನು ಯಾವ ಗುತ್ತಿಗೆದಾರರಿಗೆ ಪಾವತಿಸಬೇಕು? ಕೆಲ ಇಲಾಖೆಗಳಲ್ಲಿ ಬಿಲ್‌ ಪಾವತಿಗೆ ಗೊಂದಲಗಳಾಗಿರಬಹುದು. ಹಂತಹಂತವಾಗಿ ಬಿಲ್‌ ಪಾವತಿಸುತ್ತೇವೆ. ಈ ಬಗ್ಗೆ ಗುತ್ತಿಗೆದಾರರಿಗೂ ತಿಳಿಸಲಾಗಿದೆ. ನಾನು ವಿರೋಧ ಪಕ್ಷದಲ್ಲಿದ್ದಾಗಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆ. ಬಜೆಟ್‌ನಲ್ಲಿ ಹಣ ಇಡದ ಕಾಮಗಾರಿ ನಡೆಸದಂತೆ ಹೇಳಿದ್ದೆ. ಅದನ್ನು ಕೇಳದೆ ಕೆಲಸ ಮಾಡಿದ್ದಾರೆ ಎಂದರು.

ನಾನೇ ಸಮಯ ನಿಗದಿ ಮಾಡಿಸುತ್ತೇನೆ: ಕಮಿಷನ್‌ ಆರೋಪದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಗುತ್ತಿಗೆದಾರರಿಗೆ ಏನೆಲ್ಲ ಸಹಾಯ ಮಾಡಬೇಕೋ ಅದನ್ನು ಮಾಡಿದ್ದೇವೆ. ಕಮಿಷನ್‌ ಕುರಿತಂತೆ ದಾಖಲೆಗಳಿದ್ದರೆ ದೂರು ನೀಡುವಂತೆ ಹೇಳಿದ್ದೇನೆ. ಆದರೆ, ಅವರು ಆ ರೀತಿ ಆರೋಪ ಮಾಡಿಲ್ಲ ಎನ್ನುತ್ತಿದ್ದಾರೆ. ಸರ್ಕಾರವನ್ನು ಯಾರೂ ಹೆದರಿಸಲಾಗದು. ಗುತ್ತಿಗೆದಾರರ ಸಮಸ್ಯೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಡಿಸೆಂಬರ್‌ನಲ್ಲಿ ಬಾಕಿ ಬಿಲ್‌ ಪಾವತಿಸದಿದ್ದರೆ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ನೀಡುವುದಾಗಿ ಗುತ್ತಿಗೆದಾರರ ಎಚ್ಚರಿಕೆ ಕುರಿತು ಪ್ರತಿಕ್ರಿಯಿಸಿ, ನಾವು ನಿಯಮದಂತೆ ಬಿಲ್‌ ಪಾವತಿಸುತ್ತೇನೆ. ಹೈಕಮಾಂಡ್‌ಗೆ ದೂರು ನೀಡುವುದಾದರೆ ನಾನೇ ನಾಯಕರ ಸಮಯ ನಿಗದಿ ಮಾಡಿಕೊಡುತ್ತೇನೆ ಎಂದರು.

ರಾಜ್ಯಪಾಲರಿಗೆ ದೂರು ನೀಡುತ್ತೇವೆ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌, ಡಿಸೆಂಬರ್‌ ಅಂತ್ಯದೊಳಗೆ ಬಾಕಿ ಬಿಲ್‌ ಪಾವತಿಸುವುದಾಗಿ ಉಪಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಅವರೊಂದಿಗೂ ಸಭೆ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮ ಗಡುವಿನಂತೆ ಬಿಲ್‌ ಪಾವತಿಯಾಗದಿದ್ದರೆ ರಾಜ್ಯಪಾಲರ ಮೊರೆ ಹೋಗುತ್ತೇವೆ. 33 ಸಾವಿರ ಕೋಟಿ ರು. ಬಾಕಿ ಬಿಲ್‌ ಪಾವತಿಸದಿದ್ದರೆ ಹೋರಾಟ ಮಾಡುತ್ತೇವೆ. ಇನ್ನು, ಕಮಿಷನ್‌ ವಿಚಾರದಲ್ಲಿ ಯಾವುದೇ ಆರೋಪ ಮಾಡಿಲ್ಲ. ನಾವೇನಿದ್ದರು ಬಾಕಿ ಬಿಲ್‌ ಪಾವತಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.