ಪ್ರವಾಸೋದ್ಯಮಗಳಲ್ಲಿ ಇದುವರೆಗೂ 1.50 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. ರಾಜ್ಯದ ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಳವಳ್ಳಿ (ಸೆ.15): ರಾಜ್ಯದ ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ತಾಲೂಕಿನ ಗಗನಚುಕ್ಕಿಯಲ್ಲಿ ನಡೆಯುತ್ತಿರುವ ಜಲಪಾತೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪ್ರವಾಸೋದ್ಯಮಗಳಲ್ಲಿ ಇದುವರೆಗೂ 1.50 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. ರೈತರು, ವಿದ್ಯಾಥಿಗಳು, ಯುವಕರು ಪ್ರವಾಸಿ ತಾಣಗಳಿಗೆ ಬರಬೇಕು. ಐಸಿಹಾಸಿಕ ಜಾಗಗಳನ್ನು ವೀಕ್ಷಣೆ ಮಾಡಬೇಕು.
ಅದಕ್ಕಾಗಿ ಪ್ರವಾಸೋದ್ಯಮ, ಶಿಕ್ಷಣ, ಪ್ರಾಥಮಿಕ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಿ, ಪ್ರವಾಸಿ ತಾಣಗಳ ವೀಕ್ಷಣೆಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ಮೈಸೂರಿನ ಎಚ್.ಡಿ.ಕೋಟೆಯ ಕಬಿನಿ ಡ್ಯಾಂ, ಪ್ರಾಣಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಈ ಹಿಂದೆ ಕಾಕನಕೋಟೆಯಲ್ಲಿ ಆನೆಗಳನ್ನು ಹಿಡಿದು ವಿಶೇಷವಾದ ಅಧ್ಯಯನ ಮಾಡಲಾಗಿದೆ. ಪ್ರವಾಸೋದ್ಯಮದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
ಗಗನಚುಕ್ಕಿ ದೇಶದಲ್ಲಿ ಗುರುತಿಸಿಕೊಳ್ಳಬೇಕು
ಮೇಕೆದಾಟು ಯೋಜನೆ ಜಾರಿಗೆ ತರಲು ಹೋರಾಟ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ದೊಡ್ಡ ಜಲಪಾತದ ಜಾಗವಾಗಿ ಗಗನಚುಕ್ಕಿ ಗುರುತಿಸಿಕೊಳ್ಳಬೇಕು. 1904ರಲ್ಲಿ ಇಲ್ಲಿಂದಲೇ ಕೆಜಿಎಫ್‌ಗೆ ವಿದ್ಯುತ್‌ಚ್ಛಕ್ತಿ ತೆಗೆದುಕೊಂಡು ಹೋಗಲು ವಿದ್ಯುತ್ ಉತ್ಪಾದನೆ ಪ್ರಾರಂಭ ಮಾಡಲಾಯಿತು. ಮೊದಲ ದೀಪ ಇಲ್ಲಿಯೇ ಉರಿಯಿತು. ನಂತರ ಮೈಸೂರು, ಬೆಂಗಳೂರಿಗೂ ಬಂದಿತು ಎಂದರು. ಕರೆಂಟ್ ಇಲ್ಲದಿದ್ದರೆ ನಮ್ಮ ಬದುಕು ಏನಾಗುತ್ತಿತ್ತು. ಇಡೀ ಏಷ್ಯಾಗೆ ಕರೆಂಟ್ ಕೊಟ್ಟ ಪುಣ್ಯ ಭೂಮಿ ಇದು. ಸಿಂಗಾಪುರ್, ಚೈನಾ, ದೆಹಲಿ, ಪಾಕಿಸ್ತಾನ, ಮಲೇಷ್ಯಾದಲ್ಲಿ ಎಲ್ಲೂ ಕರೆಂಟ್ ಇರಲಿಲ್ಲ ಎಂದು ಇತಿಹಾಸ ಮೆಲುಕು ಹಾಕಿದರು.
ಧಾಮಿಕ, ಶೈಕ್ಷಣಿಕ, ಕಲೆ, ಜಾನಪದ, ಸಾಹಿತ್ಯ, ಚಿತ್ರಕಲೆ ಎಲ್ಲದಕ್ಕೂ ರಾಜ್ಯ ಮಾದರಿಯಾಗಿದೆ. ದೇಶದಲ್ಲೇ ದೊಡ್ಡ ಸಂಪತ್ತಿರುವ ರಾಜ್ಯ ಕರ್ನಾಟಕ. ಕನ್ನಂಬಾಡಿ, ವಿದ್ಯುತ್ ಉತ್ಪಾದನಾ ಕೇಂದ್ರದಲ್ಲೂ ದೇಶಕ್ಕೆ ಮಾದರಿಯಾಗಿದೆ ಎಂದರು. ರಾಜ್ಯದ ಎಲ್ಲರ ಬದುಕಿಗೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಸರ್ಕಾರ ವಿರೋಧಿಗಳ ಬಾಯಿ ಮುಚ್ಚಿಸಿದೆ. ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆ ನಡುವೆ ಮುಂದೆಯೂ ಸರ್ಕಾರ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಿದೆ ಎಂದು ತಿಳಿಸಿದರು.
