ಕಾಂಗ್ರೆಸ್‌ ಸರ್ಕಾರಕ್ಕೆ ಆರ್‌ಎಸ್‌ಎಸ್‌ ನಿಷೇಧ ಮಾಡುವ ಅಧಿಕಾರವೇ ಇಲ್ಲ. ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಕಾಂಗ್ರೆಸ್‌ ಪಕ್ಷವನ್ನು ಮೊದಲು ನಿಷೇಧ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಬೆಂಗಳೂರು (ಅ.13): ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಕಾಂಗ್ರೆಸ್‌ ಪಕ್ಷವನ್ನು ಮೊದಲು ನಿಷೇಧ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಆರ್‌ಎಸ್‌ಎಸ್‌ ನಿಷೇಧ ಮಾಡುವ ಅಧಿಕಾರವೇ ಇಲ್ಲ.

ಆದರೂ ಕಾಂಗ್ರೆಸ್‌ ನಾಯಕರು ಬುದ್ಧಿ ಭ್ರಮಣೆಯಾದಂತೆ ಸುಮ್ಮನೆ ಮಾತನಾಡುವ ಚಟ ತೋರಿಸುತ್ತಿದ್ದಾರೆ. ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯದ ರಾಜ್ಯಪಾಲರು, ಕೇಂದ್ರ ಗೃಹ ಸಚಿವರು ಹೀಗೆ ಎಲ್ಲರೂ ರಾಷ್ಟ್ರೀಯ ಸ್ವಯಂಸೇವಕ ಸಂಘದವರೇ ಆಗಿದ್ದಾರೆ. ಆರ್‌ಎಸ್‌ಎಸ್‌ ಮುಟ್ಟಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು. ಆರ್‌ಎಸ್‌ಎಸ್‌ ರಾಷ್ಟ್ರೀಯತೆ ಕಲಿಸುವ ಒಂದು ಕೇಂದ್ರ. ಅಲ್ಲಿಗೆ ಯಾರು ಬೇಕಾದರೂ ಹೋಗಿ ಭಾಗವಹಿಸಬಹುದು.

ಕಾಂಗ್ರೆಸ್‌ಗೆ ಆರ್‌ಎಸ್‌ಎಸ್‌ ನಿಷೇಧ ಮಾಡುವಷ್ಟು ತಾಕತ್ತು ಇಲ್ಲ. ಸಚಿವ ಜಮೀರ್‌ ಅಹ್ಮದ್‌ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿಲ್ಲ. ಅವರಷ್ಟು ಬುದ್ಧಿ ಉಳಿದ ಸಚಿವರಿಗಿಲ್ಲ. ದೇಶದ ಜನ ಆರ್‌ಎಸ್‌ಎಸ್‌ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಆದ್ದರಿಂದ ಇಂಥ ಸಂಘಟನೆಯನ್ನು ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು, ಶಾಸಕರು, ಇದೇ ಆರ್‌ಎಸ್‌ಎಸ್‌ ನಾಯಕರ ಬಳಿಗೆ ಹೋಗಬೇಕಾಗುತ್ತದೆ ಎಂದರು.

ಇಂದಿರಾ ಕೈಯಲ್ಲೇ ಆಗಲಿಲ್ಲ

ಶಾಲಾ ಆವರಣಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ಹಾಗೂ ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸಿಎಂ ಅವರಿಗೆ ಪತ್ರ ಬರೆದ ಕುರಿತು ‘ಎಕ್ಸ್‌’ ಖಾತೆಯಲ್ಲಿ ಟ್ವೀಟ್‌ ಮಾಡಿ ತಿರುಗೇಟು ನೀಡಿರುವ ಆರ್‌.ಅಶೋಕ್‌, ಆರ್‌ಎಸ್‌ಎಸ್‌ ನಿಷೇಧಿಸಲು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಕೈಯಲ್ಲೇ ಆಗಲಿಲ್ಲ. ಇನ್ನೂ ‘ಔಟ್‌ ಗೋಯಿಂಗ್‌ ಸಿಎಂ ಸಿದ್ದರಾಮಯ್ಯ’ ಅವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ತಾಕತ್ತಿದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ವಿಧಾನಸೌಧದ ಸದನ ಕಲಾಪದಲ್ಲಿ ಸಂಘದ ಗೀತೆ ಹಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ನೋಡೋಣ ಎಂದು ಸವಾಲು ಹಾಕಿದರು.