ಎಸ್ಸಿ, ಎಸ್ಟಿ ಹಣವನ್ನು ಆ ಸಮಾಜದ ಕಲ್ಯಾಣಕ್ಕೆ ಹೊರತುಪಡಿಸಿ, ಬೇರೆ ಯಾವುದಕ್ಕೂ ಬಳಸಲು ಆಗಲ್ಲ. ಆದರೂ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ ಈ ಹಣ ಬಳಸಲಿಲ್ವಾ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ವಿಜಯಪುರ (ಅ.05): ಎಸ್ಸಿ, ಎಸ್ಟಿ ಹಣವನ್ನು ಆ ಸಮಾಜದ ಕಲ್ಯಾಣಕ್ಕೆ ಹೊರತುಪಡಿಸಿ, ಬೇರೆ ಯಾವುದಕ್ಕೂ ಬಳಸಲು ಆಗಲ್ಲ. ಆದರೂ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ ಈ ಹಣ ಬಳಸಲಿಲ್ವಾ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ. ವಿಜಯಪುರ ಜಿಲ್ಲೆ ದೇವಣಗಾಂವ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಎನ್‌ಡಿಆರ್‌ಎಫ್ ಹಣವನ್ನು ಗ್ಯಾರಂಟಿಗೆ ಬಳಸಿಲ್ಲ, ಬಳಸಲೂ ಸಾಧ್ಯವೂ ಇಲ್ಲ.
ಬಿಜೆಪಿಗರದು ಕಾಮಾಲೆ ಕಣ್ಣು ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಎಸ್ ಸಿ ,ಎಸ್ ಟಿ ಹಣವನ್ನು ಕೂಡ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಆದರೂ ಗ್ಯಾರಂಟಿಗೆ ಬಳಸಲಿಲ್ವಾ?. ಅದೇ ರೀತಿ, ಎನ್‌ಡಿಆರ್‌ಎಫ್ ಹಣ ಕೂಡ ಬಳಕೆ ಆಗಿಲ್ಲ ಅಂತಾ ಹೇಗೆ ಹೇಳೋದು? ಅವರ ಪಕ್ಷದ ಅನೇಕ ನಾಯಕರೇ, ಶಾಸಕರೇ ಅನೇಕ ಬಾರಿ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಆಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಅವರಿಗೆಲ್ಲ ಕಾಮಾಲೆ ಇದೆಯಾ? ಇದ್ದರೆ, ಅವರನ್ನೆಲ್ಲಾ ಈ ಕೂಡಲೇ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ ಎಂದು ಲೇವಡಿ ಮಾಡಿದರು.
ರೈತರಿಗೆ ಶೀಘ್ರವೇ ಪರಿಹಾರ ವಿತರಿಸಿ
ಇಲ್ಲಿಯವರೆಗೂ ಜಿಲ್ಲಾಧಿಕಾರಿ, ಜಿಲ್ಲಾ ಮಂತ್ರಿಗಳು ಬೆಳೆ ಸಮೀಕ್ಷೆ ಕೈಗೊಂಡಿಲ್ಲ. ರೈತರ ಗೋಳು ಕೇಳಿಲ್ಲ. ಅದಕ್ಕಾಗಿ ಈ ಭಾಗದ ರೈತರ ಬೆಳೆ ಹಾನಿ ವೀಕ್ಷಣೆಗೆ ನಾವು ಬಂದಿದ್ದೇವೆ. ಈಗ ಜಿಲ್ಲಾಧಿಕಾರಿ, ತಹಸೀಲ್ದಾರ್, ಅಧಿಕಾರಿಗಳು ಬಂದಿದ್ದಾರೆ. ಶೇ.80ರಷ್ಟು ರೈತರ ಬೆಳೆ ಹಾನಿಯಾಗಿದ್ದು, ಅತಿ ಮಳೆ, ಕಳಪೆ ಬೀಜ, ಕೀಟಭಾದೆಯಿಂದ ಬೆಳೆಗಳು ಹಾಳಾಗಿವೆ. ಕೂಡಲೇ ಸರ್ಕಾರ ಎಚ್ಚೆತ್ತು ರೈತರಿಗೆ ಪರಿಹಾರ ನೀಡಬೇಕು. ಇಂದಿನಿಂದಲೇ ನಾವು ಬೆಳೆ ಪರಿಹಾರ ನೀಡಲು ಆಗ್ರಹಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ರಾಜ್ಯದ ಮುಖ್ಯಮಂತ್ರಿ 5 ವರ್ಷ ನಾನೇ ಸಿಎಂ ಎಂಬ ಮಾತನ್ನು ಹೇಳುವುದೇ ಅವರ ಸಾಧನೆ ಆಗಿದೆ. ನಾಳೆ ಬೆಳಗಾವಿಗೆ ಬಂದು ರಿಬ್ಬನ್ ಕಟ್ ಮಾಡಿ ಬಿರಿಯಾನಿ ತಿಂದು ಹೋಗುವುದು ಅಷ್ಟೇ ಅವರ ಕೆಲಸ. ಅಧಿಕಾರಿಗಳು ಸ್ವಾಗತಿಸಿ ಐಬಿಗೆ ಕರದೆಕೊಂಡು ಹೋಗಿ ಸಮಾರಂಭ ಮಾಡಿ ಬೀಳ್ಕೊಡುಗೆ ಮಾಡುವುದಷ್ಟೇ ಇವರ ಕೆಲಸ ಆಗಿದೆ ಎಂದು ದೂರಿದರು. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಮೂಲಕ ದೇಶದ ಎಲ್ಲ ರಾಜ್ಯಗಳಿಗೆ ಪರಿಹಾರ ನೀಡಿದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಯಾವ ಪರಿಹಾರವನ್ನೂ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ರೈತರಿಗೆ ₹25 ಸಾವಿರ ನೀಡಿದ್ದೇವೆ. ತಕ್ಷಣ ಮುಖ್ಯಮಂತ್ರಿ ಅವರು ಬೆಳೆ ವೀಕ್ಷಣೆ ಮಾಡಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ನಮ್ಮ ಅಧಿಕಾರ ಅವಧಿಯಲ್ಲಿ ₹3 ಲಕ್ಷ ಕೋಟಿ ಬಜೆಟ್ ಇತ್ತು.
ಈಗ ₹4 ಲಕ್ಷ ಕೋಟಿ ಇದೆ. ಆದರೂ ರೈತರಿಗೆ ಪರಿಹಾರ ನೀಡುತ್ತಿಲ್ಲ. ಅತಿಯಾದ ಮಳೆಯಿಂದ ಮನೆಗಳು ನೀರಿನಿಂದ ಮುಳುಗಿದರೂ ನಯಾ ಪೈಸೆ ಪರಿಹಾರ ನೀಡುತ್ತಿಲ್ಲ. ಕೂಡಲೇ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ರೈತರ ಸಮಸ್ಯೆ ಆಲಿಸಿದರು. ಕಳೆದ ವರ್ಷ ಇಳುವರಿಯಲ್ಲಿ ಶೇ.80 ಬೆಳೆ ಹಾನಿಯಾಗಿದೆ. ಎಕರೆಗೆ 2 ಕ್ವಿಂಟಲ್ ಸೋಯಾಬಿನ್ ಬಂದಿದ್ದು, ಕಟಾವು ಸಮಯದಲ್ಲಿ ಅತಿಯಾದ ಮಳೆ, ಕೀಟಭಾದೆ, ಕಳಪೆ ಬೀಜದಿಂದ ನಮ್ಮ ಬಾಳು ತೊಂದರೆ ಆಗಿದ್ದು ಇಂತಹ ಸಂದರ್ಭದಲ್ಲಿ ಯಾವ ಅಧಿಕಾರಿಗಳು, ಜಿಲ್ಲಾ ಮಂತ್ರಿಗಳು ಸಮೀಕ್ಷೆ, ವೀಕ್ಷಣೆಗೆ ಬಂದಿಲ್ಲ ಎಂದು ರೈತರು ತಮ್ಮ ಕಷ್ಟವನ್ನು ಹೇಳಿಕೊಂಡರು.
